Advertisement

ಅಯೋಧ್ಯೆ ಟ್ರಸ್ಟ್‌ ವ್ಯಾಪ್ತಿಗೆ ಕಿಷ್ಕಿಂದಾ ಅಂಜನಾದ್ರಿ ಬೆಟ್ಟ ?

01:25 AM Dec 20, 2019 | Sriram |

ಗಂಗಾವತಿ:ಪ್ರಸ್ತಾವಿತ ಅಯೋಧ್ಯೆ ಶ್ರೀರಾಮಮಂದಿರ ಟ್ರಸ್ಟ್‌ನಲ್ಲಿ ಕೊಪ್ಪಳ ಜಿಲ್ಲೆಯ ಕಿಷ್ಕಿಂದಾ ಅಂಜನಾದ್ರಿ ಬೆಟ್ಟ ಸೇರಿದಂತೆ ರಾಮಾಯಣದಲ್ಲಿ ಉಲ್ಲೇಖೀತ ಪ್ರದೇಶಗಳನ್ನು ಸೇರ್ಪಡೆ ಮಾಡಿ ಶ್ರೀರಾಮಮಂದಿರ ನಿರ್ಮಾಣ ಜತೆಯಲ್ಲೇ ಶ್ರೀರಾಮಚಂದ್ರ ನಡೆದಾಡಿದರೆನ್ನಲಾದ ಸ್ಥಳಗಳ ಅಭಿವೃದ್ಧಿಗೆ ಚಿಂತನೆ ನಡೆದಿದೆ.

Advertisement

ಕೇಂದ್ರ ಸರ್ಕಾರ ಈಗಾಗಲೇ ಜಾರಿ ಮಾಡಿರುವ ಶ್ರೀರಾಮಸರ್ಕ್ನೂಟ್‌ ಯೋಜನೆಯಡಿ ಕಿಷ್ಕಿಂದಾ ಅಂಜನಾದ್ರಿ ಬೆಟ್ಟ ಪ್ರದೇಶವನ್ನು ಸೇರ್ಪಡೆ ಮಾಡಲಾಗಿದೆ. ಹಾಗೆಯೇ ಅಯೋಧ್ಯೆ ಟ್ರಸ್ಟ್‌ ನಡಿ ಕಿಷ್ಕಿಂದಾ ಅಂಜನಾದ್ರಿಬೆಟ್ಟ, ಋಷಿಮುಖ ಪರ್ವತ, ಪಂಪಾ ಸರೋವರ, ಶಬರಿ ಗುಹೆ ಹಾಗೂ ಆನೆಗೊಂದಿ ಪ್ರದೇಶದ ಇತರೆ ಸ್ಥಳಗಳನ್ನು ಸೇರಿಸಿ ಪ್ರವಾಸೋದ್ಯಮದ ದೃಷ್ಟಿಯಿಂದ ಅಭಿವೃದ್ಧಿಪಡಿಸಲಾಗುತ್ತದೆ ಎಂದು ಹೇಳಲಾಗಿದೆ.

ಪ್ರತಿ ವರ್ಷ ಕಿಷ್ಕಿಂದಾ ಅಂಜನಾದ್ರಿ ಪ್ರದೇಶಕ್ಕೆ ಸಾವಿರಾರು ಸಾಧು-ಸಂತರು ಮತ್ತು ಉತ್ತರಭಾರತದ ಜನರು “ಚಾರ್‌ಧಾಮ ದರ್ಶನ’ ಸಂದರ್ಭ ಭೇಟಿ ನೀಡುತ್ತಾರೆ. ಅಯೋಧ್ಯೆ ಟ್ರಸ್ಟ್‌ನಲ್ಲಿ ಆನೆಗೊಂದಿ ಭಾಗ ಸೇರ್ಪಡೆಯಾದರೆ ಕೇಂದ್ರ ಸರ್ಕಾರದಿಂದ ಹೆಚ್ಚು ಅನುದಾನ ಪಡೆದು ಮೂಲಸೌಕರ್ಯ ಹೆಚ್ಚಳಕ್ಕೆ ನೆರವಾಗಲಿದೆ. ಈ ನಿಟ್ಟಿನಲ್ಲಿ ಹಿಂದೂಪರ ಸಂಘಟನೆಗಳ ಮುಖಂಡರು ಉತ್ಸುಕರಾಗಿದ್ದು, ಅಭಿವೃದ್ಧಿ ದೃಷ್ಟಿಯಿಂದ ಈ ಪ್ರದೇಶ ಅಯೋಧ್ಯೆ ಟ್ರಸ್ಟ್‌ಗೆ ಸೇರಿಸುವಂತೆ ಬಿಜೆಪಿಯ ಪ್ರಮುಖ ನಾಯಕರಲ್ಲಿ ಮನವಿ ಮಾಡಿದ್ದಾರೆ.

ಸದ್ಯ ಕಿಷ್ಕಿಂದಾ ಅಂಜನಾದ್ರಿ ಬೆಟ್ಟ ರಾಜ್ಯ ಧಾರ್ಮಿಕ ದತ್ತಿ ಇಲಾಖೆ ಸುಪರ್ದಿಯಲ್ಲಿದ್ದು ಕೋಟ್ಯಂತರ ರೂ. ಆದಾಯ ಹೊಂದಿದೆ. ಪ್ರತಿದಿನ ಇಲ್ಲಿಗೆ ದೇಶ-ವಿದೇಶಗಳಿಂದ ಸಾವಿರಾರು ಪ್ರವಾಸಿಗರು ಭೇಟಿ ನೀಡುತ್ತಿದ್ದು, ಮೂಲಸೌಕರ್ಯಗಳ ಕೊರತೆಯಿದೆ. ಅಯೋಧ್ಯೆ ಟ್ರಸ್ಟ್‌ಗೆ ಸೇರಿಸುವ ಮೂಲಕ ಕಿಷ್ಕಿಂದಾ ಅಂಜನಾದ್ರಿ ಪ್ರದೇಶಕ್ಕೆ ಸಾರಿಗೆ ಸೇರಿದಂತೆ ಮೂಲಸೌಕರ್ಯಗಳು ಲಭಿಸಲಿವೆ ಎನ್ನಲಾಗಿದೆ.

ಇಲ್ಲಿವೆ ಹಲವು ಕುರುಹುಗಳು:
ಶ್ರೀರಾಮಚಂದ್ರ ವನವಾಸ ಸಂದರ್ಭ ಕಿಷ್ಕಿಂದಾ ಅಂಜನಾದ್ರಿ ಬೆಟ್ಟ ಪ್ರದೇಶಕ್ಕೆ ಬಂದಿರುವ ಬಗ್ಗೆ ರಾಮಾಯಣ ಗ್ರಂಥದಲ್ಲಿ ಉಲ್ಲೇಖವಾಗಿದೆ. ಪಂಪಾನದಿ (ಈಗಿನ ತುಂಗಭದ್ರಾ) ಋಷಿಮುಖ ಪರ್ವತ, ವಾಲಿವಧೆ ಮಾಡಿದ ಸ್ಥಳ, ಶಬರಿ ಗುಹೆ, ಪಂಪಾ ಸರೋವರ ಹೀಗೆ ಅನೇಕ ಕುರುಹುಗಳಿದ್ದು, ಹನುಮಂತ ಜನಿಸಿದ ನಾಡಾಗಿರುವುದರಿಂದ ಅಯೋಧ್ಯೆ ಟ್ರಸ್ಟ್‌ನಲ್ಲಿ ಈ ಪ್ರದೇಶ ಸೇರ್ಪಡೆ ಮಾಡುವಂತೆ ಮನವಿ ಮಾಡಲಾಗುತ್ತದೆ. ಹಾಗೆಯೇ ಈ ಟ್ರಸ್ಟ್‌ಗೆ ಕರ್ನಾಟಕದವರನ್ನೂ ಸದಸ್ಯರನ್ನಾಗಿ ನೇಮಿಸುವಂತೆ ಮನವಿ ಮಾಡಲಾಗುವುದು ಎಂದು ಭಜರಂಗದಳದ ಬಳ್ಳಾರಿ ವಿಭಾಗದ ಸಂಚಾಲಕ, ನ್ಯಾಯವಾದಿ ಸುಭಾಸ ಸಾದರ್‌
“ಉದಯವಾಣಿ’ಗೆ ತಿಳಿಸಿದರು.

Advertisement

ಅಯೋಧ್ಯೆ ರಾಮಮಂದಿರ ನಿರ್ಮಾಣಕ್ಕಾಗಿ ರಚನೆಯಾಗುವ ಟ್ರಸ್ಟ್‌ನಲ್ಲಿ ಕಿಷ್ಕಿಂದಾ ಅಂಜನಾದ್ರಿ, ಪಂಪಾ ಸರೋವರ ಸೇರ್ಪಡೆ ಮಾಡಬೇಕು. ಇದರಿಂದ ಅಭಿವೃದ್ಧಿಗೂ ಪೂರಕವಾಗುತ್ತದೆ. ಶ್ರೀರಾಮಚಂದ್ರ, ಲಕ್ಷ್ಮಣ ಸಮೇತ ಕಿಷ್ಕಿಂದಾ ಅಂಜನಾದ್ರಿ ಪ್ರದೇಶಕ್ಕೆ ಆಗಮಿಸಿದ್ದರು ಎನ್ನಲು ಇನ್ನಷ್ಟು ಪುಷ್ಟಿ ಸಿಕ್ಕಂತಾಗುತ್ತದೆ ಎಂದು ಪಂಪಾ ಸರೋವರ ಶ್ರೀ ವಿಜಯಲಕ್ಷ್ಮೀ ಮಂದಿರದ ಮುಖ್ಯ ಅರ್ಚಕ ರಾಮದಾಸ ಬಾಬಾ ಸಾಧು ಅಭಿಪ್ರಾಯಪಟ್ಟರು.

ಇತಿಹಾಸ ಪ್ರಸಿದ್ಧ ಕಿಷ್ಕಿಂದಾ ಅಂಜನಾದ್ರಿ ಬೆಟ್ಟ ಈಗಾಗಲೇ ಶ್ರೀರಾಮ ಸರ್ಕ್ನೂಟ್‌ ಯೋಜನೆಯಡಿ ಸೇರ್ಪಡೆಯಾಗಿದೆ. ಇದೀಗ ಅಯೋಧ್ಯೆ ಟ್ರಸ್ಟ್‌ ರಚನೆ ಕಾರ್ಯ ನಡೆಯುತ್ತಿದ್ದು, ಇದರಲ್ಲಿ ಕಿಷ್ಕಿಂದಾ ಅಂಜನಾದ್ರಿ ಬೆಟ್ಟ ಪರಿಸರ ಸೇರ್ಪಡೆ ಕುರಿತು ಮಾಹಿತಿ ಇದ್ದು ಇನ್ನೂ ಯಾವುದೇ ನಿರ್ಣಯವಾಗಿಲ್ಲ. ಅಯೋಧ್ಯೆ ಟ್ರಸ್ಟ್‌ನಲ್ಲಿ ಈ ಪ್ರದೇಶ ಸೇರ್ಪಡೆಯಾದರೆ ಪ್ರವಾಸಿಗರಿಗೆ ಮೂಲಸೌಕರ್ಯ ಒದಗಿಸುವ ಕಾರ್ಯಕ್ಕೆ ವೇಗ ಸಿಗುತ್ತದೆ.
-ಸಿ.ಟಿ. ರವಿ, ಪ್ರವಾಸೋದ್ಯಮ ಸಚಿವರು

-ಕೆ.ನಿಂಗಜ್ಜ

Advertisement

Udayavani is now on Telegram. Click here to join our channel and stay updated with the latest news.

Next