ಶಿವಮೊಗ್ಗ: ದಕ್ಷಿಣ ಭಾರತದ ಮೊದಲ ಐತಿಹಾಸಿಕ ರೈತ ಮಹಾಪಂಚಾಯತ್‌ಗೆ ಸಮಾಜವಾದಿ ಹೋರಾಟದ ತವರು ಹಾಗೂ ರೈತ ಚಳವಳಿಯ ನೆಲವಾದ ಶಿವಮೊಗ್ಗ ಸಾಕ್ಷಿಯಾ ಯಿತು. ಸುಮಾರು ಹದಿನೈದು ಸಾವಿರಕ್ಕೂ ಹೆಚ್ಚು ರೈತರು ಪಾಲ್ಗೊಂಡು ಕೇಂದ್ರ ಸರಕಾರದ ಮೂರು ವಿವಾದಾತ್ಮಕ ಕೃಷಿ ಕಾನೂನುಗಳ ವಿರುದ್ಧ ರಣಕಹಳೆ ಮೊಳಗಿಸಿದರು.
ನಗರದ ಸೈನ್ಸ್ ಕಾಲೇಜು ಮೈದಾನದಲ್ಲಿ ಜರಗಿದ ಮಹಾಪಂಚಾಯತ್‌ನಲ್ಲಿ ದಿಲ್ಲಿಯ ರೈತ ಹೋರಾಟವನ್ನು ಮುನ್ನಡೆಸುತ್ತಿರುವ ಡಾ| ದರ್ಶನ್ ಪಾಲ್, ರಾಕೇಶ್ ಟಿಕಾಯತ್ ಮತ್ತು ಯುದು ವೀರ್ ಸಿಂಗ್ ಅವರು ಭಾಗವಹಿಸಿದರು.
ಮೋದಿ ಸರಕಾರ ನಮ್ಮ ಮೇಲೆ ಬಾಂಬ್ ಹಾಕಿದರೂ ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆ ಯುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ಡಾ| ದರ್ಶನ್ ಪಾಲ್ ಸಾರಿದರು. ದಿಲ್ಲಿಯ ರೈತ ಹೋರಾಟಕ್ಕೆ 115 ದಿನಗಳಾಗಿವೆ. ಸರಕಾರ ಈ ಆಂದೋಲನವನ್ನು ಮುರಿಯಲು ಪ್ರಯತ್ನಿಸಿತು. ಆದರೆ ರಾಜಸ್ಥಾನದಲ್ಲಿ ಮೀನಾ ಮುತ್ತು ಗುಜ್ಜರ್ ರೈತರು ಹಾಗೂ ಉತ್ತರ ಪ್ರದೇಶದಲ್ಲಿ ಹಿಂದೂ-ಮುಸ್ಲಿಮರು ಒಗ್ಗೂಡಿ ಹೋರಾಡುತ್ತಿದ್ದಾರೆ. ಅದು ಹೋರಾಟ ದಿನೇದಿನೆ ಗಟ್ಟಿಗೊಳ್ಳುತ್ತಿರುವ ಲಕ್ಷಣ ಎಂದರು.
ಎಂಎಸ್‌ಪಿ ಬಗ್ಗೆ ಹುಸಿನುಡಿ :
ರಾಜ್ಯ ರೈತಸಂಘದ ಹಿರಿಯ ಮುಖಂಡರಾದ ಕೆ.ಟಿ. ಗಂಗಾಧರ್ ಮಾತನಾಡಿ, ಎಂಎಸ್‌ಪಿ ಇದೆ ಎಂದು ಪಿಎಂ ನರೇಂದ್ರ ಮೋದಿ ಮತ್ತು ಸಿಎಂ ಯಡಿಯೂರಪ್ಪನವರು ರೈತರಿಗೆ ಸುಳ್ಳು ಹೇಳುತ್ತಿದ್ದಾರೆ. ರೈತರ ಭೂಮಿಯನ್ನು ಕಿತ್ತುಕೊಳ್ಳುವ ಕಾನೂನು ಮಾಡುತ್ತಿದ್ದಾರೆ. ಹಾಗಾಗಿ ಈ ಮಹಾಪಂಚಾಯತ್ ಮೂಲಕ ರೈತರ ಶಕ್ತಿ ಪ್ರದರ್ಶನ ಮಾಡುತ್ತಿದ್ದು, ಈ ಕಾನೂನುಗಳನ್ನು ವಾಪಸ್ ಪಡೆಯದಿದ್ದಲ್ಲಿ ಬಿಜೆಪಿ ಸರಕಾರವನ್ನು ಅಧಿ ಕಾರದಿಂದ ಕೆಳಗಿಳಿಸುತ್ತೇವೆ ಎಂದು ಸವಾಲು ಹಾಕಿದರು.