Advertisement

ಅಂಧತ್ವ ಮೆಟ್ಟಿ ನಿಂತ ಕಿಶನ್‌

12:47 PM Oct 13, 2018 | Team Udayavani |

ಕುಂದಾಪುರ: ಅಂಧತ್ವವನ್ನು ಮೆಟ್ಟಿ ನಿಂತು ಚೆಸ್‌ ಕ್ಷೇತ್ರದಲ್ಲಿ ಸಾಧನೆಯ ಮೈಲಿಗಲ್ಲು ಸ್ಥಾಪಿಸುತ್ತಿರುವ ಕನ್ನಡದ ಕ್ರೀಡಾ ಪ್ರತಿಭೆ ಕಿಶನ್‌ ಗಂಗೊಳ್ಳಿ. 26ರ ಹರೆಯದ ಪ್ರತಿಭಾವಂತ ಕಿಶನ್‌ ಶಿವಮೊಗ್ಗದ ಕುವೆಂಪು ವಿವಿಯಲ್ಲಿ ಇಕನಾಮಿಕ್ಸ್‌ ಎಂ.ಎ.ಯಲ್ಲಿ ಎರಡನೇ ರ್‍ಯಾಂಕ್‌ ಪಡೆದವರು. ಕಲಿಕೆಗಾಗಲೀ, ಚೆಸ್‌ಗಾಗಲೀ ಅವರಿಗೆ ಜನ್ಮತಃ ಅಂಧತ್ವ ಹಿನ್ನಡೆಯಾಗಿಲ್ಲ. ಮೂಲತಃ ಕುಂದಾಪುರ ತಾಲೂಕಿನ ಗಂಗೊಳ್ಳಿಯ ಕಲೈಕಾರ್‌ನವರಾಗಿದ್ದು, ಶಿವಮೊಗ್ಗದ ವಿನೋಬಾ ನಗರದ ಬ್ಯೂಟಿಶಿಯನ್‌ ಗೀತಾ ಗಂಗೊಳ್ಳಿ ಅವರ ಏಕೈಕ ಪುತ್ರ. ಅಕ್ಷಯಕಲ್ಪ ಆರ್ಗಾನಿಕ್ ಸಂಸ್ಥೆಯಲ್ಲಿ ಕಸ್ಟಮರ್‌ ಕೇರ್‌ಗೆ ಮನೆಯಿಂದಲೇ ಉದ್ಯೋಗಿ.

Advertisement

6ನೇ ತರಗತಿಯಿಂದಲೇ ಆರಂಭ
ಕಿಶನ್‌ ಆರನೇ ತರಗತಿಯಲ್ಲಿದ್ದಾಗ ಚೆಸ್‌ ಆಟವನ್ನು ಗಂಭೀರವಾಗಿ ಆಡತೊಡಗಿದರು. ಇದಕ್ಕೆ ಅವರ ಸೋದರಮಾವನ ಪ್ರೇರಣೆಯೇ ಕಾರಣವಾಗಿತ್ತು. ಆರಂಭದಲ್ಲಿ ಎಲ್ಲರ ಜತೆಗೆ ಆಟವಾಡುತ್ತ 2011ರಲ್ಲಿ ಅಂಧರ ಚೆಸ್‌ನಲ್ಲಿ ಸ್ಪರ್ಧೆ ಆರಂಭಿಸಿದರು. ಅಂದಿನಿಂದ ಚೆಸ್‌ನಲ್ಲಿ ಭಾರತವನ್ನು ಪ್ರತಿನಿಧಿಸುತ್ತ ಬಂದರು. 2012ರಲ್ಲಿ ಚೆನ್ನೈಯಲ್ಲಿ ನಡೆದ ಅಂಧರ ಚೆಸ್‌ ಒಲಿಂಪಿಯಾಡ್‌ನ‌ಲ್ಲಿ ಭಾರತವನ್ನು ಪ್ರತಿನಿಧಿಸಿ ವೈಯಕ್ತಿಕ ಚಿನ್ನದ ಪದಕ ಗೆದ್ದ ದೇಶದ ಏಕೈಕ ಆಟಗಾರ ಎಂಬ ಹೆಗ್ಗಳಿಕೆ ಸಂಪಾದಿಸಿದರು. ಇದರಲ್ಲಿ ಭಾರತ ತಂಡ ವಿಶ್ವದಲ್ಲಿ 5ನೇ ಸ್ಥಾನ ಪಡೆದಿತ್ತು.

6ನೇ ತರಗತಿಯಿಂದ ಶಿವಮೊಗ್ಗದ ಮತ್ತೂಬ್ಬ ಅಂಧ ಚೆಸ್‌ ಆಟಗಾರ ಕೃಷ್ಣ ಉಡುಪರ ಬಳಿ ಚೆಸ್‌ ತರಬೇತಿ ಪಡೆದರು. ಬಳಿಕ ಸ್ವಯಂ ಚೆಸ್‌ ಕಲಿತು ಕಂಪ್ಯೂಟರ್‌ ಮೂಲಕವೂ ಅಭ್ಯಸಿಸಿದರು. ತನ್ನ ಅಂಗವೈಕಲ್ಯವನ್ನು ಎಲ್ಲೂ ಪ್ರಕಟಿಸದೆ, ಸಾಮಾನ್ಯರಂತೆ ಎಲ್ಲರೊಂದಿಗೆ ಬೆರೆಯುವ ಕಿಶನ್‌ 2013-2017ರ ವರೆಗೆ ಸತತ 4 ಬಾರಿ ಅಂಧರ ರಾಷ್ಟ್ರೀಯ ಚೆಸ್‌ ಚಾಂಪಿಯನ್‌ ಆಗಿ ದಾಖಲೆ ನಿರ್ಮಿಸಿದ್ದಾರೆ.

ದೇವರ ಎದುರು ಕುಳಿತೆ
ನಿನ್ನೆಯಿಂದ ಊಟ, ನಿದ್ದೆ ಬಿಟ್ಟು ಸತತ 3 ಮ್ಯಾಚ್‌ ಆಟವಾಡುತ್ತಿದ್ದ ಕಾರಣ ನನಗೆ ಟೆನ್ಶನ್ ಆಗಿ ದೇವರ ಎದುರು ಕೂತುಬಿಟ್ಟೆ. ನೀನೇ ಏನಾದರೂ ಮಾಡೆಂದು ಪ್ರಾರ್ಥಿಸಿದೆ. ಫ‌ಲ ಸಿಕ್ಕಿದೆ
ಗೀತಾ ಗಂಗೊಳ್ಳಿ, ತಾಯಿ

Advertisement

Udayavani is now on Telegram. Click here to join our channel and stay updated with the latest news.

Next