ಹುನಗುಂದ: ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಕೇಂದ್ರ ಸರ್ಕಾರ ವರ್ಷಕ್ಕೆ 6 ಸಾವಿರ ಹಣ ನೀಡುವ ಪ್ರಧಾನಮಂತ್ರಿಕಿಸಾನ್ ಸಮ್ಮಾನ್ ನಿಧಿ ಯೋಜನೆ ಜಾರಿಗೆ ತಂದಿದ್ದು, ತಾಲೂಕಿನ ಅನೇಕ ರೈತರು ಯೋಜನೆಗೆ ಮೊದಲು ಅರ್ಜಿ ಸಲ್ಲಿಸಿದ್ದರೂ ಖಾತೆಗೆ ಹಣ ಬರದೇ ಇರುವುದರಿಂದ ಮತ್ತೂಮ್ಮೆ ಅರ್ಜಿ ಸಲ್ಲಿಸಲು ಹರಸಾಹಸ ಪಡುವಂತಾಗಿದೆ.
ಅಧಿಕಾರಿಗಳು ರೈತರಿಂದ ಅರ್ಜಿ ಸ್ವೀಕರಿಸಿದ್ದು, ಸ್ವೀಕರಿಸಿದ ರೈತರ ಅರ್ಜಿಗಳನ್ನು ಆನ್‌ಲೈನ್‌ನಲ್ಲಿ ಡಾಟಾ ಎಂಟ್ರಿ ಮಾಡಲು ಹಿಂದೇಟು ಹಾಕಿದ್ದರಿಂದ ತಾಲೂಕಿನ 10 ಸಾವಿರ ರೈತರು ಈ ಯೋಜನೆಯ ಲಾಭದಿಂದ ವಂಚಿತರಾಗಿದ್ದಾರೆ.
ತಾಲೂಕಿನಲ್ಲಿ 44,500ಕ್ಕೂ ಹೆಚ್ಚು ಸಣ್ಣ ಮತ್ತು ಅತಿ ಸಣ್ಣ ಹಿಡುವಳಿದಾರ ರೈತರು ಇದ್ದಾರೆ. ಕೇಂದ್ರ ಸರ್ಕಾರ ಯೋಜನೆ ಜಾರಿಗೊಳಿಸಿದ ತಕ್ಷಣವೇ ತಾಲೂಕಿನ 15 ಸಾವಿರ ರೈತರು ಅರ್ಜಿ ಸಲ್ಲಿಸಿದರು. ಆದರೆ ಕೃಷಿ ಇಲಾಖೆ ಅಧಿಕಾರಿಗಳು ಅದರಲ್ಲಿ 5 ಸಾವಿರ ರೈತರ ಅರ್ಜಿಯನ್ನು ಮಾತ್ರ ಆನ್‌ಲೈನ್‌ನಲ್ಲಿ ಡಾಟಾ ಎಂಟ್ರಿ ಮಾಡಿದ್ದು, ಉಳಿದ 10 ಸಾವಿರ ರೈತರ ಅರ್ಜಿಗಳನ್ನು ಲೋಕಸಭೆ ಚುನಾವಣೆಯ ನೀತಿ ಸಂಹಿತೆ ನೆಪವೊಡ್ಡಿ ಡಾಟಾ ಎಂಟ್ರಿ ಮಾಡಿಲ್ಲ.
ಮೊದಲು ಅರ್ಜಿ ಸಲ್ಲಿಸಿದ 15 ಸಾವಿರ ರೈತರಲ್ಲಿ ಕೇವಲ 5 ಸಾವಿರ ಜನ ರೈತರ ಖಾತೆಗೆ ಹಣ ಜಮಾ ಆಗಿದ್ದು, ಉಳಿದ 10 ಸಾವಿರ ರೈತರು ಮತ್ತೇ ಅರ್ಜಿ ಸಲ್ಲಿಸಬೇಕೋ ಬೇಡವೋ ಎಂಬುದರ ಬಗ್ಗೆ ಕೃಷಿ ಇಲಾಖೆಯಿಂದ ಸ್ಪಷ್ಟ ಮಾಹಿತಿ ಇಲ್ಲ. ಇದರಿಂದ ಡಾಟಾ ಎಂಟ್ರಿಯಾಗದೇ ಉಳಿದ 10ಸಾವಿರ ರೈತರು ಮತ್ತೇ ಅರ್ಜಿ ಸಲ್ಲಿಸುವ ಸ್ಥಿತಿ ನಿರ್ಮಾಣವಾಗಿದೆ.
ರೈತರು ಕೊಟ್ಟ ಮೊದಲ ಅರ್ಜಿಗಳು ನಾಪತ್ತೆ: ರೈತರು ಕೊಟ್ಟ ಮೊದಲ ಅರ್ಜಿ ಬಗ್ಗೆ ಪ್ರಸ್ನಿಸಿದರೆ ಅಧಿಕಾರಿಗಳು ಏನು ಹೇಳದೇ ಹೊಸದಾಗಿ ಅರ್ಜಿ ಕೊಡಿ ಎಂದು ಹೇಳುತ್ತಿದ್ದಾರೆ. ಹೀಗಾಗಿ ಮೊದಲು ಸಲ್ಲಿಸಿದ್ದ 10 ಸಾವಿರ ಅರ್ಜಿಗಳಿಗೆ ಸ್ಪಷ್ಟ ಉತ್ತರವಿಲ್ಲ.
ಕಿಸಾನ್ ಸಮ್ಮಾನ್ ಯೋಜನೆಯ ಅರ್ಜಿಗಳ ಡಾಟಾ ಎಂಟ್ರಿಗಾಗಿ ಕೆಲವೊಂದು ಗ್ರಾಮ ಪಂಚಾಯತಿಗಳಿಗೆ ಹಸ್ತಾಂತರಿಸಿದ ರೈತರ ಅರ್ಜಿಗಳು ಡಾಟಾ ಎಂಟ್ರಿಯಾಗಿವೆಯೋ ಇಲ್ಲವೋ ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ.
•ಮಲ್ಲಿಕಾರ್ಜುನ ಬಂಡರಗಲ್ಲ