ದಾವಣಗೆರೆ: ನವದೆಹಲಿಯ ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯ ಆವರಣದಲ್ಲಿ ಆಯೋಜನೆಗೊಂಡಿದ್ದ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಸಮೇಳನ ಉದ್ಘಾಟನೆಯನ್ನು ಐಸಿಎಆರ್-ತರಳಬಾಳು ಕೃಷಿ ವಿಜ್ಞಾನ ಕೇಂದ್ರದಲ್ಲಿ ನೇರ ಪ್ರಸಾರದ ಮೂಲಕ ರೈತರಿಗೆ ತೋರಿಸಲಾಯಿತು.
ದಾವಣಗೆರೆಯ ವಿವಿಧ ಗ್ರಾಮಗಳಿಂದ 150ಕ್ಕೂ ಹೆಚ್ಚು ರೈತರ ಹಾಗೂ ಸರ್ಕಾರಿ ಪದವಿ ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಭಾಗವಹಿಸಿ, ವೀಕ್ಷಣೆ ಮಾಡಿದರು. ಇಂದು ಪ್ರಧಾನಮಂತ್ರಿಗಳು ದೇಶದ ವಿವಿಧ ಭಾಗಗಳಿಂದ ಎರಡು ಲಕ್ಷಕ್ಕೂ ಹೆಚ್ಚು ಸಾಮಾನ್ಯ ಸೇವಾ ಕೇಂದ್ರಗಳಿಂದ ಒಂದು ಕೋಟಿಗೂ ಹೆಚ್ಚು ರೈತರಿಗೆ ವಿವಿಧ ರೈತ ಕಲ್ಯಾಣ ಯೋಜನೆಗಳನ್ನು ಅನಾವರಣಗೊಳಿಸಿದರು.
ಅವುಗಳಲ್ಲಿ ಮುಖ್ಯವಾಗಿ ರೈತರಿಗೆ 12ನೇ ಆವರ್ತದ 16,000ರೂ. ಕೋಟೆ ಕಿಸಾನ್ ಸಮ್ಮಾನ್ ನಿಧಿ ಬಿಡುಗಡೆ, ಕೃಷಿ ಸ್ಟಾರ್ಟ್ ಅಪ್ ಯೋಜನೆ ಉದ್ಘಾಟನೆ, 600ಪ್ರಧಾನಮಂತ್ರಿ ಕಿಸಾನ್ ಸಮೃದ್ಧಿ ಕೇಂದ್ರಗಳ ಉದ್ಘಾಟನೆ, ಒಂದು ದೇಶ ಒಂದು ಗೊಬ್ಬರ ಯೋಜನೆ ಹಾಗೂ ಅಂತಾರಾಷ್ಟ್ರೀಯ ರಸಗೊಬ್ಬರ ಈ ಪ್ರತಿಕೆ ಬಿಡುಗಡೆ ಅನಾವರಣಗೊಳಿಸಲಾಯಿತು. ತರಳಬಾಳು ಕೇಂದ್ರದಲ್ಲಿ ಈ ಕಾರ್ಯಕ್ರಮಕ್ಕೂ ಮುನ್ನ 2022ರ ವಿಶ್ವ ಆಹಾರ ದಿನ ಆಚರಿಸಲಾಯಿತು.
ಕೃಷಿ ಉಪನಿದೇರ್ಶಕ ತಿಪ್ಪೇಸ್ವಾಮಿ ಆರ್. ಕಾರ್ಯಕ್ರಮ ಉದ್ಘಾಟನೆ ನೆರವೇರಿಸಿ, ದೇಶದಲ್ಲಿ ಸುರಕ್ಷಿತ ಮತ್ತು ಸ್ವಚ್ಛ ಆಹಾರ ಉತ್ಪಾದನೆಗೆ ಎಲ್ಲರೂ ಒಗ್ಗೂಡಿ ಕೆಲಸ ಮಾಡಲು ಕರೆ ನೀಡಿದರು.
ಸಭೆಯ ಅಧ್ಯಕ್ಷತೆವಹಿಸಿದ್ದ ಡಾ| ಜಯದೇವಪ್ಪ ಜಿ.ಕೆ., ವಿಶ್ವ ಆಹಾರ ದಿನಾಚರಣೆ ಹಾಗೂ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಸಮ್ಮೇಳನದ ಕುರಿತು ಮಾಹಿತಿ ನೀಡಿದರು. ಡಾ| ಅವಿನಾಶ್ ಟಿ.ಜಿ. ಜೈವಿಕ ಗೊಬ್ಬರಗಳು ಮತ್ತು ಪೀಡೆನಾಶಕಗಳ ಕುರಿತು ಮಾಹಿತಿ ನೀಡಿದರು. ಮಣ್ಣು ವಿಜ್ಞಾನಿ ಹೆಚ್.ಎಂ. ಸಣ್ಣಗೌಡರ ಮಣ್ಣು ಆರೋಗ್ಯ ಮತ್ತು ನಮ್ಮ ಆರೋಗ್ಯ ವಿಚಾರವಾಗಿ ರೈತರಿಗೆ ಉಪನ್ಯಾಸ ನೀಡಿದರು. ರೈತ ಮುಖಂಡರಾದ ಆವರಗೆರ ರುದ್ರಮುನಿ ಮತ್ತು ಕುಂದೂರು ಮಂಜಪ್ಪನವರು ಭಾಗವಹಿಸಿ ತಮ್ಮ ಕೃಷಿ ಅನುಭವಗಳನ್ನು ಹಂಚಿಕೊಂಡರು.
ತಾಲೂಕಿನ ಕುಕ್ಕುವಾಡ ಗ್ರಾಮದಲ್ಲಿಯೂ ಪ್ರಧಾನ ಮಂತ್ರಿ ಕಿಸಾನ್ ಸಮೃದ್ಧಿ ಕೇಂದ್ರಉದ್ಘಾಟನೆ, ಒಂದು ರಾಷ್ಟ್ರ, ಒಂದು ರಸಗೊಬ್ಬರ ಪ್ರಾರಂಭ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿಯವರು ಕಾರ್ಯಕ್ರಮ ಉದ್ಘಾಟಿಸುವುದನ್ನು ನೇರ ಪ್ರಸಾರದ ಮೂಲಕ ರೈತರಿಗೆ ವೀಕ್ಷಣೆಗೆ ವ್ಯವಸ್ಥೆ ಮಾಡಲಾಯಿತು. ಇಫೋR ಕ್ಷೇತ್ರ ಅಧಿಕಾರಿ ರಾಜೇಂದ್ರಪ್ರಸಾದ್ ಎಸ್., ಕೃಷಿ ಅಧಿಕಾರಿ ಚಂದ್ರಪ್ಪ, ಗ್ರಾಪಂ ಅಭಿವೃದ್ಧಿ ಅಧಿಕಾರಿ ಲಕ್ಷ್ಮೀದೇವಿ, ಪಾಲಾಕ್ಷಪ್ಪ, ಡಿ.ಎಂ. ಪ್ರಕಾಶ್ ಇನ್ನಿತರರು ಕಾರ್ಯಕ್ರಮದಲ್ಲಿದ್ದರು. ಕುಕ್ಕುವಾಡ ಮತ್ತು ಸುತ್ತ ಮುತ್ತಲಿನ ರೈತರು ಭಾಗವಹಿಸಿದ್ದರು.