Advertisement

ಕಿಸಾನ್‌ ಸಮ್ಮಾನ್‌ ನಿಧಿ: ಶೇ.99 ಖಾತೆ ಪರಿಶೀಲನೆ ಪೂರ್ಣ

11:08 AM Mar 30, 2022 | Team Udayavani |

ಉಡುಪಿ: ಪಿಎಂ ಕಿಸಾನ್‌ ಸಮ್ಮಾನ್‌ ನಿಧಿ ಯೋಜನೆಯಲ್ಲಿ ರೈತರ ಮಾನದಂಡ ವಿವರಗಳ ಪರಿಶೀಲನೆ ರಾಜ್ಯಾದ್ಯಂತ ನಡೆಯುತ್ತಿದ್ದು ಜಿಲ್ಲೆಯಲ್ಲಿ ಶೇ.99ರಷ್ಟು ಪ್ರಗತಿ ದಾಖಲಾಗಿದೆ. 2019ರಲ್ಲಿ ರೈತರ ನೋಂದಣಿ ಆರಂಭಿಸಿದ್ದು, ಅಂಗೀಕಾರಗೊಂಡವರಿಗೆ ಅದೇ ವರ್ಷಾಂತ್ಯದಿಂದ ಬ್ಯಾಂಕ್‌ ಖಾತೆಗೆ ನೇರ ನಗದು ವರ್ಗಾವಣೆ ಆರಂಭಗೊಂಡಿತ್ತು. ವರ್ಷದಲ್ಲಿ 6 ಸಾವಿರ ರೂ. 3 ಕಂತುಗಳಲ್ಲಿ ತಲಾ 2 ಸಾವಿರ ರೂ.ಗಳಂತೆ ಜಮೆ ಮಾಡಲಾಗುತ್ತಿದ್ದು ರಾಜ್ಯ ಸರಕಾರ ತನ್ನ ಪಾಲಿನ 4 ಸಾವಿರ ರೂ. ನೀಡುತ್ತಿದೆ.

Advertisement

ಜಿಲ್ಲೆಯಲ್ಲಿ ಶೇ.95.20 ಫ‌ಲಾನುಭವಿಗಳ ವಿವರವನ್ನು ಕಾಲ-ಕಾಲಕ್ಕೆ ಮರು ಪರಿಶೀಲನೆಗೆ ಒಳಪಡಿಸುವುದು ಯೋಜನೆಯ ನಿಯಮ. ಅದರಂತೆ ಗುರುತಿಸಲಾದ ಖಾತೆದಾರರ ವಿವರಗಳನ್ನು ಮರು ಪರಿಶೀಲಿಸಿ ಅಪ್‌ಲೋಡ್‌ ಮಾಡಲಾಗುತ್ತಿದೆ. ಪರಿಶೀಲಿಸ ಬೇಕಾದ ರೈತರ ವಿವರಗಳನ್ನು ಸರಕಾರದಿಂದ ಜಿಲ್ಲೆಗೆ ಕಳುಹಿಸಿ ಕೆವೈಸಿ ಮತ್ತಿತರ ಮಾಹಿತಿಗಳನ್ನು ತಪಾಸಣೆ ಮಾಡಿ ಅರ್ಹತೆ ಇದ್ದವರನ್ನು ಮರು ನೋಂದಣಿ ಮಾಡುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿತ್ತು. ‌ಪರಿಶೀಲನೆ ಬಳಿಕ ಪಾವತಿ ವಿವಿಧ ಕಾರಣಗಳಿಂದಾಗಿ ಅರ್ಹತಾ ಮಾನದಂಡ ಹೊಂದಾಣಿಕೆಯಾಗದೆ ರೈತರಿಗೆ 10ನೇ ಕಂತಿನ ಹಣ ಜಮೆಯಾಗಿರಲಿಲ್ಲ. ಪರಿಶೀಲನೆ ಬಳಿಕ ಅರ್ಹತೆಯಂತೆ ಬಾಕಿ ಕಂತಿನ ಹಣ ಸಿಗಲಿದೆ ಮತ್ತು ಮುಂದಿನ ಕಂತುಗಳು ಎಂದಿನಂತೆ ಪಾವತಿಯಾಗಲಿದೆ. ಉಡುಪಿ ಜಿಲ್ಲೆಯಲ್ಲಿ 46,012 ಕೃಷಿಕರ ಮಾಹಿತಿ ರೀ-ವೆರಿಫಿಕೇಶನ್‌ ಮಾಡಲಾಗುತ್ತಿದ್ದು ಇದರಲ್ಲಿ 45,527 ಕೃಷಿಕರ ಮಾಹಿತಿ ಪರಿಶೀಲನೆ ಪೂರ್ಣಗೊಂಡು ಶೇ.99 ಪ್ರಗತಿ ಕಂಡಿದೆ. ಏಳು ತಾಲೂಕಿನ ಪೈಕಿ ಕುಂದಾಪುರ, ಉಡುಪಿ ತಾಲೂಕು ಶೇ.100 ಪ್ರಗತಿ ಕಂಡಿದೆ.

ಮರು ಪರಿಶೀಲನೆ ಯಾಕೆ?

ಯೋಜನೆಗೆ ಸೇರುವಾಗ ಅರ್ಹತೆ ಹೊಂದಿದ್ದು, ಪ್ರಸ್ತುತ ಫ‌ಲಾನುಭವಿ ಆದಾಯ ತೆರಿಗೆ ಪಾವತಿಸುತ್ತಿದ್ದಲ್ಲಿ ಅಂಥವರಿಗೆ ಯೋಜನೆ ಸೌಲಭ್ಯ ಸಿಗುವುದಿಲ್ಲ. ಬ್ಯಾಂಕ್‌ ಖಾತೆಯ ಕೆವೈಸಿ ನೀಡದೆ ಇದ್ದಲ್ಲಿ ನೇರ ನಗದು ವರ್ಗಾವಣೆ ನಿಂತಿರುತ್ತದೆ. ಆಧಾರ್‌ ಲಿಂಕ್‌ ಆಗದೇ ಇದ್ದಲ್ಲಿ ಹಣ ವರ್ಗಾವಣೆಯಾಗುವುದಿಲ್ಲ. ಫ‌ಲಾನುಭವಿ ಮೃತಪಟ್ಟಿದ್ದಲ್ಲಿ ಸ್ವಯಂ ಆಗಿ ಪತ್ನಿ ಹೆಸರಿಗೆ ವರ್ಗಾ ವಣೆಯಾಗುವುದಿಲ್ಲ. ಪತ್ನಿ ಹೊಸದಾಗಿ ಅರ್ಜಿ ಸಲ್ಲಿಸಿ ಹಣ ಪಡೆಯಬಹುದು. ಒಂದೇ ಕುಟುಂಬದಲ್ಲಿ ಗಂಡ, ಹೆಂಡತಿ ಇಬ್ಬರೂ ಸೌಲಭ್ಯ ಪಡೆಯುತ್ತಿದ್ದಲ್ಲಿ ಅಂತಹ ಪ್ರಕರಣ ಸ್ಥಗಿತಗೊಳಿಸಿ ಮರು ಪರಿಶೀಲನೆ ವೇಳೆ ಒಬ್ಬರಿಗೆ ಅವಕಾಶ ನೀಡಲಾಗುತ್ತದೆ. ಜಮೀನು ವಿಂಗಡಣೆ ಮತ್ತಿತರ ಕಾರಣಗಳಿಂದಾಗಿ ಒಂದೇ ಕುಟುಂಬದ ಇತರರು ಯೋಜನೆಯ ಅರ್ಹತೆ ಪಡೆದುಕೊಂಡಿದ್ದಲ್ಲಿ ಹೊಸದಾಗಿ ನೋಂದಣಿ ಮಾಡಿಕೊಂಡು ಸೌಲಭ್ಯ ಪಡೆಯಬಹುದು.

ರೈತರಿಗೆ ಜಾಗೃತಿ

Advertisement

ಪಿಎಂ ಕಿಸಾನ್‌ ಸಮ್ಮಾನ್‌ ನಿಧಿ ಯೋಜನೆಯಲ್ಲಿ ರೈತರ ಮಾನದಂಡ ವಿವರಗಳ ಪರಿಶೀಲನೆಯಲ್ಲಿ ಶೇ.99ರಷ್ಟು ಪ್ರಗತಿ ದಾಖಲಾಗಿದೆ. ರೈತರಿಗೆ ಎಸ್‌ಎಂಎಸ್‌ ಸಹಿತ ವಿವಿಧ ರೀತಿಯಲ್ಲಿ ಮಾಹಿತಿ ರವಾನಿಸಿ, ಜಾಗೃತಿ ಮೂಡಿಸಲಾಗಿತ್ತು. – ಡಾ| ಕೆಂಪೇಗೌಡ, ಜಂಟಿ ನಿರ್ದೇಶಕ, ಕೃಷಿ ಇಲಾಖೆ. ಉಡುಪಿ ಜಿಲ್ಲೆ

Advertisement

Udayavani is now on Telegram. Click here to join our channel and stay updated with the latest news.

Next