ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ (ಡಿಸೆಂಬರ್ 28, 2020) ಮಹಾರಾಷ್ಟ್ರದ ಸಾಂಗೋಲಾದಿಂದ ಪಶ್ಚಿಮಬಂಗಾಳದ ಶಾಲಿಮಾರ್ ವರೆಗೆ ಸಂಚರಿಸಲಿರುವ 100ನೇ “ಕಿಸಾನ್ ರೈಲಿಗೆ” ವಿಡಿಯೋ ಕಾನ್ಫರೆನ್ಸ್ ಮೂಲಕ ವಿಧ್ಯುಕ್ತ ಚಾಲನೆ ನೀಡಿದರು.
ರೈತರ ಪ್ರತಿಭಟನೆ ನಡುವೆಯೇ ಕಿಸಾನ್ ರೈಲಿಗೆ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ಕೊಟ್ಟ ಪ್ರಧಾನಿ ಮೋದಿ, ದೇಶದ ಕೃಷಿ ಕ್ಷೇತ್ರ ಮತ್ತು ರೈತರನ್ನು ಸದೃಢಗೊಳಿಸುವ ನಿಟ್ಟಿನಲ್ಲಿ ನಮ್ಮ ಸರ್ಕಾರ ಕೃಷಿ ಕಾಯ್ದೆಯನ್ನು ತಿದ್ದುಪಡಿ ಮಾಡುವ ಐತಿಹಾಸಿಕ ನಿರ್ಧಾರ ತೆಗೆದುಕೊಂಡಿತ್ತು ಎಂದು ತಿಳಿಸಿದರು.
ನಮ್ಮ ಸರ್ಕಾರದ ನೀತಿ ಬಹಳ ಸ್ಪಷ್ಟವಾಗಿದೆ. ಕೃಷಿ ಕ್ಷೇತ್ರದ ಬದಲಾವಣೆ ಪಾರದರ್ಶಕವಾಗಿರಬೇಕು ಎಂಬ ಉದ್ದೇಶ ಸರ್ಕಾರದ್ದಾಗಿದೆ. ಇದರಿಂದ ರೈತರು ಇನ್ನಷ್ಟು ಸದೃಢರಾಗಲಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ:ಕೇಂದ್ರದ ನೂತನ ಕೃಷಿ ನೀತಿ:ಡಿಸೆಂಬರ್ 30ರಂದು ಮತ್ತೆ ರೈತರ ಸಭೆ ಕರೆದ ಕೇಂದ್ರ
ಕೇಂದ್ರ ಸರ್ಕಾರ ಜಾರಿಗೆ ತಂದಿದ್ದ ಮೂರು ನೂತನ ಕೃಷಿ ಕಾಯ್ದೆಯನ್ನು ವಿರೋಧಿಸಿ ಪಂಜಾಬ್ ಮತ್ತು ಹರ್ಯಾಣ ರೈತರು ಕಳೆದ ಒಂದು ತಿಂಗಳಿನಿಂದ ದೆಹಲಿ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದು, ಮೂರು ಕಾನೂನನ್ನು ರದ್ದುಗೊಳಿಸಬೇಕೆಂದು ಪಟ್ಟು ಹಿಡಿದಿದ್ದು, ಕೇಂದ್ರ ಸರ್ಕಾರ ಜತೆ ನಡೆಸಿದ 5 ಸುತ್ತಿನ ಮಾತುಕತೆಯೂ ವಿಫಲಗೊಂಡಿತ್ತು.