Advertisement

ಕೋಚ್‌ ಆಹ್ವಾನವನ್ನು ಅಣಕವೆಂದೇ ಭಾವಿಸಿದ್ದ ಕರ್ಸ್ಟನ್‌

05:42 PM Jun 16, 2020 | Sriram |

ಹೊಸದಿಲ್ಲಿ: ಯಾವುದೇ ಕೋಚ್‌ ಅನುಭವ ಇಲ್ಲದ ಗ್ಯಾರಿ ಕರ್ಸ್ಟನ್‌ ಕ್ರಿಕೆಟಿನ ಅತ್ಯಂತ ಯಶಸ್ವಿ ತರಬೇತು ದಾರನೆಂಬ ಹೆಗ್ಗಳಿಕೆಗೆ ಪಾತ್ರರಾದದ್ದು ಈಗ ಇತಿಹಾಸ. ಇವರ ಕಾಲಾವಧಿಯಲ್ಲಿ ಭಾರತ ಟೆಸ್ಟ್‌ ಕ್ರಿಕೆಟಿನ ನಂ.1 ತಂಡವೆನಿಸಿತು. ಇದಕ್ಕಿಂತ ಮಿಗಿಲಾಗಿ 2011ರ ವಿಶ್ವಕಪ್‌ ಚಾಂಪಿಯನ್‌ ಆಗಿ ಮೂಡಿಬಂತು.

Advertisement

“ಕ್ರಿಕೆಟ್‌ ಕಲೆಕ್ಟೀವ್‌’ ಕ್ಯಾರಕ್ರಮದಲ್ಲಿ ತಾನು ಏಳೇ ನಿಮಿಷದಲ್ಲಿ ಭಾರತದ ಕೋಚ್‌ ಆಗಿ ಆಯ್ಕೆಯಾದ ಸ್ವಾರಸ್ಯವನ್ನು ಕರ್ಸ್ಟನ್‌ ಬಿಚ್ಚಿಟ್ಟಿದ್ದಾರೆ.

ಹೆಂಡತಿಯೂ ನಂಬಲಿಲ್ಲ!
“ನಿಮ್ಮನ್ನು ಭಾರತ ತಂಡದ ಕೋಚ್‌ ಹುದ್ದೆಗೆ ಪರಿಗಣಿಸಲಾಗುವುದು ಎಂದು ಆಯ್ಕೆ ಸಮಿತಿಯ ಸದಸ್ಯ ರಾಗಿದ್ದ ಸುನೀಲ್‌ ಗಾವಸ್ಕರ್‌ ಇ- ಮೇಲ್‌ ಮಾಡಿದರು. ಇದನ್ನೊಂದು ಅಣಕ ಎಂದೇ ಭಾವಿಸಿದೆ. ಪತ್ರವನ್ನು ಹೆಂಡತಿಗೆ ತೋರಿಸಿದೆ. ಇದು ನಿಮಗೆ ತಪ್ಪಿ ಬಂದಿರಬೇಕು ಎಂದು ನಕ್ಕಳು. ಸ್ವಲ್ಪ ದಿನಗಳ ಬಳಿಕ, ನೀವು ಕೋಚ್‌ ಸಂದರ್ಶನಕ್ಕೆ ಬರಬಹುದೇ ಎಂದು ಗಾವಸ್ಕರ್‌ ಮತ್ತೂಂದು ಮೇಲ್‌ ಮಾಡಿದರು. ನಾನು ಹೊರಟು ನಿಂತೆ…’ ಎಂದು ಕರ್ಸ್ಟನ್‌ ಹೇಳಿದರು.

“ಅಲ್ಲಿ ಅನಿಲ್‌ ಕುಂಬ್ಳೆ ಇದ್ದರು. ಅವ ರಾಗ ಭಾರತ ತಂಡದ ನಾಯಕ. ನೀವಿಲ್ಲಿ ಏನು ಮಾಡುತ್ತಿದ್ದೀರಿ ಎಂದು ನನ್ನನ್ನು ಕೇಳಿದರು. ನಿಮಗೆ ತರಬೇತಿ ನೀಡುವ ಹುದ್ದೆಯ ಸಂದರ್ಶನಕ್ಕೆ ಬಂದಿದ್ದೇನೆ ಎಂದೆ. ಇಬ್ಬರೂ ಗಟ್ಟಿಯಾಗಿ ನಕ್ಕೆವು…’ ಎಂದ ಕರ್ಸ್ಟನ್‌ ಸಂದರ್ಶನದ ಕ್ಷಣಗಳನ್ನು ಬಿಡಿಸಿಟ್ಟರು.

“ಇಂದಿನ ಕೋಚ್‌ ರವಿಶಾಸ್ತ್ರಿ ನನ್ನ ಸಂದರ್ಶಕರಲ್ಲಿ ಒಬ್ಬರು. ಭಾರತವನ್ನು ಸೋಲಿಸಲು ದಕ್ಷಿಣ ಆಫ್ರಿಕಾದವರು ರೂಪಿಸುವ ಯೋಜನೆಗಳೇನು ಎಂದು ಅವರು ನನ್ನನ್ನು ಕೇಳಿದರು. ಇದಕ್ಕೆ ನೀಡಿದ ಉತ್ತರ ಅವರಿಗೆ ತೃಪ್ತಿ ತಂದಿತು. ಅದು ಕೇವಲ 7 ನಿಮಿಷಗಳ ಸಂದರ್ಶನವಾಗಿತ್ತು. ನನ್ನ ಕೈಗೆ ಒಪ್ಪಂದ ಪತ್ರವೊಂದು ಬಂತು…’ ಕರ್ಸ್ಟನ್‌ ಹೇಳುತ್ತ ಹೋದರು.

Advertisement

ಅಲ್ಲಿತ್ತು ಚಾಪೆಲ್‌ ಹೆಸರು!
“ಇದು ಮತ್ತೂಂದು ಸ್ವಾರಸ್ಯ. ಅದು ಮಾಜಿ ಕೋಚ್‌ ಗ್ರೆಗ್‌ ಚಾಪೆಲ್‌ ಹೆಸರಿದ್ದ ಒಪ್ಪಂದ ಪತ್ರವಾಗಿತ್ತು! ಇದೆಂಥ ಕತೆ ಎನ್ನುತ್ತ ಅದನ್ನು ಬಿಸಿಸಿಐ ಕಾರ್ಯದರ್ಶಿಗೆ ಮರಳಿಸಲು ಹೋದೆ. ಕೂಡಲೇ ಕಿಸೆಯಿಂದ ಪೆನ್‌ ಒಂದನ್ನು ಹೊರತೆಗೆದ ಅವರು ಚಾಪೆಲ್‌ ಹೆಸರು ಹೊಡೆದು ಹಾಕಿ ನನ್ನ ಹೆಸರು ಬರೆದರು!’ ಎಂದು ಗ್ಯಾರಿ ಕರ್ಸ್ಟನ್‌ ಅಂದಿನ ಪ್ರಸಂಗವನ್ನು ತಮಾಷೆಯಾಗಿ ವರ್ಣಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next