“ಕಿರಿಕ್ ಪಾರ್ಟಿ’ ಚಿತ್ರದ ಕಲೆಕ್ಷನ್ ಎಷ್ಟು? ತಲೆಗೊಂದೊಂದು ಮಾತಿದೆ ಮತ್ತು ಒಬ್ಬೊಬ್ಬರು ಒಂದೊಂದು ರೀತಿಯ ಲೆಕ್ಕ ಕೊಡುತ್ತಾರೆ. ಆದರೆ, ನಿಜಕ್ಕೂ ಈ ಚಿತ್ರದ ಕಲೆಕ್ಷನ್ ಎಷ್ಟು ಎಂದು ಆ ಚಿತ್ರದ ನಿರ್ಮಾಪಕ ಕಂ ನಾಯಕ ರಕ್ಷಿತ್ ಶೆಟ್ಟಿ ಅವರನ್ನೇ ಕೇಳಿದರೆ, ಅವರಿಂದ ಬರುವ ಉತ್ತರ ಸುಮಾರು 40 ಕೋಟಿ. ಈ ಪೈಕಿ ಬಾಡಿಗೆ ಎಲ್ಲವನ್ನೂ ಕಟ್ ಮಾಡಿದರೆ, ಸಿಗುವ ಮೊತ್ತ ಸುಮಾರು 18ರಿಂದ 20 ಕೋಟಿ. ಇನ್ನು ಇದಕ್ಕೆ ಟಿವಿ ರೈಟ್ಸ್ ಸೇರಿಸಿದರೆ, 24-25 ಕೋಟಿ ಸಿಗಬಹುದು ಎನ್ನುತ್ತಾರೆ ಅವರು.
ಹಾಗಾದರೆ, ಟಿವಿ ರೈಟ್ಸ್ ಎಷ್ಟಕ್ಕೆ ಹೋಗಿದೆ ಎಂಬ ಪ್ರಶ್ನೆ ಬರುವುದು ಖಂಡಿತಾ. ಚಾನಲ್‌ಗಳಿಂದ ಒಂದಿಷ್ಟು ಆಫರ್‌ಗಳೇನೋ ಬಂದಿದೆಯಂತೆ. ಆದರೆ, ಕಡಿಮೆ ಬೆಲೆಗೆ ಯಾವುದೇ ಕಾರಣಕ್ಕೂ ಕೊಡುವುದಿಲ್ಲ ಎಂದು ರಕ್ಷಿತ್ ತೀರ್ಮಾನಿಸಿದ್ದಾರೆ. “ಇಷ್ಟು ದೊಡ್ಡ ಹಿಟ್ ಆದರೂ ಸರಿಯಾದ ಹಣ ಕೊಡಲಿಲ್ಲ ಅಂದರೆ, ನಾನು ಇಟ್ಟುಕೊಳ್ಳುತ್ತೇನೆಯೇ ಹೊರತು, ಕಡಿಮೆ ಬೆಲೆಗೆ ಮಾತ್ರ ಕೊಡುವುದಿಲ್ಲ. 10 ವರ್ಷದ ನಂತರ ನಮ್ಮದೇ ಚಾನಲ್ ಮಾಡಿದರೆ ನಾನೇ ಬಿಡುಗಡೆ ಮಾಡುತ್ತೀನಿ.
ನನ್ನ ರೇಟ್‌ಗೆ ಬಂದಿಲ್ಲ ಎಂಬ ಬೇಸರವಿಲ್ಲ. ನಾಲ್ಕು ಸಿನಿಮಾ ಮಾಡುವಷ್ಟು ಹಣ ಮಾಡಿದ್ದೀನಿ. ಹಾಗಾಗಿ ಮಾರುವುದಿಲ್ಲ. ಇವತ್ತು ನಾನು ಕಡಿಮೆ ಕೊಟ್ಟೆ ಎಂದಿಟ್ಟುಕೊಳ್ಳಿ. ನಾಳೆ ಆ್ಯವರೇಜ್ ಸಿನಿಮಾಗೆ ಇನ್ನೂ ಕಡಿಮೆ ಕೊಡುತ್ತಾರೆ’ ಎನ್ನುತ್ತಾರೆ ರಕ್ಷಿತ್. ಇನ್ನು “ಕಿರಿಕ್ ಪಾರ್ಟಿ’ ಚಿತ್ರಕ್ಕೆ ಯೂರೋಪ್, ಅಮೇರಿಕಾ ಸಿಂಗಾಪೂರ್, ದುಬೈ, ಜಪಾನ್, ಇಸ್ರೇಲ್ ಎಲ್ಲಾ ಕಡೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆಯಂತೆ. “ನಿಜ ಹೇಳಬೇಕೆಂದರೆ, ಅಮೇರಿಕಾದಲ್ಲಿ ರೆಕಾರ್ಡ್ ಬ್ರೇಕ್ ಆಗುತ್ತಿದೆ.
ಅದಕ್ಕೆ ಕಾರಣ ನಾವು ಜಾಸ್ತಿ ಚಿತ್ರಮಂದಿರಗಳಲ್ಲಿ ಚಿತ್ರವನ್ನ ಬಿಡುಗಡೆ ಮಾಡುತ್ತಿದ್ದೇವೆ. ಇನ್ನು ಇಲ್ಲಿಯ ವಿಷಯ ತೆಗೆದುಕಕೊಂಡರೆ, ಹೈದರಾಬಾದ್‌ನಲ್ಲಿ ಈಗಲೂ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ. ಚೆನ್ನೈನಲ್ಲೂ ಚೆನ್ನಾಗಿದೆ. ಒಂದು ಖುಷಿ ಏನೆಂದರೆ, ಹೊರಗಿನ ರಾಜ್ಯಗಳಲ್ಲಿ ಲಾಂಗೆಸ್ಟ್ ರನ್ ಅಂದರೆ ನಮ್ಮ ಚಿತ್ರವೇ. ಇನ್ನು ಅಮೇರಿಕಾ ಮೊದಲ ವಾರದಲ್ಲೇ ಒಂದೂವರೆ ಕೋಟಿ ನೆಟ್ ಕಲೆಕ್ಷನ್ ಆಗಿದೆ. ಅದರಲ್ಲಿ ಕಟ್ ಆಗಿ ಕಡಿಮೆ ಸಿಗಬಹುದು. ಆದರೆ, ಒಳ್ಳೆಯ ರೀಚ್ ಆಗಿದೆ ಎಂಬ ಖುಷಿಯಿದೆ’ ಎನ್ನುತ್ತಾರೆ ಅವರು.
ಇನ್ನು “ಕಿರಿಕ್ ಪಾರ್ಟಿ’ ಚಿತ್ರವನ್ನು “ಪ್ರೇಮಂ’ ಮುಂತಾದ ಚಿತ್ರಗಳಿಗೆ ಹೋಲಿಸುವುದರ ಬಗ್ಗೆ ರಕ್ಷಿತ್‌ಗೆ ಬೇಸರವಿದೆ. “”ಪ್ರೇಮಂ’ ಚಿತ್ರವನ್ನು ನೋಡಿದವರು, ಅದು “ಉಳಿದವರು ಕಂಡಂತೆ’ಯ ರಿಚ್ಚಿ ಲುಕ್ ಅಂತ ಯಾಕೆ ಹೇಳಲಿಲ್ಲ. ನಾನು “ಪ್ರೇಮಂ’ ನೋಡಿದಾಗ, ರಿಚ್ಚಿ ನೋಡಿದ ಹಾಗಿದೆ ಅಂತ ಅನಿಸಿತ್ತು. ಆದರೆ, ನಾನೇ ಮಾಡಿದ ಪಾತ್ರವನ್ನ ಮತ್ತೆ ನಾನೇ ಮಾಡಿದರೆ, ಯಾಕೆ ಈ ಮಾತು ಗೊತ್ತಿಲ್ಲ. ಇಷ್ಟಕ್ಕೂ “ಕಿರಿಕ್ ಪಾರ್ಟಿ’ ಆರು ವರ್ಷದ ಹಳೆಯ ಕಥೆ. ಇನ್ನು “ಬೆಂಗಳೂರು ಡೇಸ್’ ಚಿತ್ರವನ್ನು ಇದುವರೆಗೂ ನೋಡಿಲ್ಲ’ ಎನ್ನುತ್ತಾರೆ ರಕ್ಷಿತ್
ರಕ್ಷಿತ್ ತಮ್ಮ ಬ್ಯಾನರ್‌ನಿಂದ ಒಂದಿಷ್ಟು ಚಿಕ್ಕ ಚಿತ್ರಗಳನ್ನು ನಿರ್ಮಿಸುವ ಯೋಜನೆ ಹಾಕಿಕೊಂಡಿದ್ದಾರೆ. ಮಿಕ್ಕಂತೆ ಮೊದಲು ಸಚಿನ್ ನಿರ್ದೇಶನದ ಚಿತ್ರದಲ್ಲಿ ನಟಿಸಿ, ಆ ನಂತರ ಸುದೀಪ್ ಅಭಿನಯದ “ಥಗ್ಸ್ ಆಫ್ ಮಾಲ್ಗುಡಿ’ ಚಿತ್ರವನ್ನು ಅವರು ಕೈಗೆತ್ತಿಕೊಳ್ಳುತ್ತಾರಂತೆ. ಆ ಚಿತ್ರದಲ್ಲೂ ಅವರು ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಮಧ್ಯೆ ಯಾವುದೇ ಹೊಸ ಚಿತ್ರವನ್ನೂ ಒಪ್ಪಿಲ್ಲ. ಏಕೆಂದರೆ, ಒಂದೂವರೆ ವರ್ಷಗಳ ಕಾಲ ಬಿಝಿ ಇರುವುದರಿಂದ, ಆ ಚಿತ್ರಗಳನ್ನು ಮುಗಿಸಿದ ನಂತರ, ಹೊಸ ಚಿತ್ರಗಳನ್ನು ಒಪ್ಪುತ್ತಾರಂತೆ ರಕ್ಷಿತ್.