ಮುಂಬಯಿ: ಸಿಂಪಲ್ ಸ್ಟೋರಿಯೊಂದಿಗೆ ಬಂದ ಬಾಲಿವುಡ್‌ನ ‘ಲಾಪತಾ ಲೇಡೀಸ್’( Laapataa Ladies) ಸಿನಿಮಾ 2025ರ ಆಸ್ಕರ್ ಗೆ (Oscars 2025) ಭಾರತದಿಂದ ಅಧಿಕೃತ ಪ್ರವೇಶ ಪಡೆದಿದೆ.
97ನೇ ಆಸ್ಕರ್ ಪ್ರಶಸ್ತಿಗಾಗಿ ಭಾರತದಿಂದ ಕಿರಣ್ ರಾವ್ (Kiran Rao) ನಿರ್ದೇಶನದ ‘ಲಾಪತಾ ಲೇಡೀಸ್’ ಅಧಿಕೃತವಾಗಿ ಪ್ರವೇಶ ಪಡೆದಿದೆ ಎಂದು ಸೋಮವಾರ (ಸೆ.23ರಂದು) ಚೆನ್ನೈನಲ್ಲಿ ಸುದ್ದಿಗೋಷ್ಟಿ ನಡೆಸಿ ಫಿಲಂ ಫೆಡರೇಶನ್ ಆಫ್ ಇಂಡಿಯಾ (Film Federation of India) ಹೇಳಿದೆ.
ʼಅನಿಮಲ್ʼ, ʼಚಂದು ಚಾಂಪಿಯನ್ʼ, ʼಕಲ್ಕಿ 2898 ADʼ, ʼಹನುಮಾನ್ʼ, ʼತಂಗಲಾನ್ʼ, ʼಅರ್ಟಿಕಲ್ 370ʼ, ರಾಷ್ಟ್ರ ಪ್ರಶಸ್ತಿ ವಿಜೇತ ಮಲಯಾಳಂ ಚಿತ್ರ ʼಆಟಂ, ʼಆಡುಜೀವಿತಂʼ ರಾಜ್‌ಕುಮಾರ್ ರಾವ್ ಅವರ ʼಶ್ರೀಕಾಂತ್ʼ ಮತ್ತು ವಿಕ್ಕಿ ಕೌಶಲ್ ಅವರ ಸ್ಯಾಮ್ ಬಹದ್ದೂರ್ʼ ಸೇರಿದಂತೆ ಒಟ್ಟು 12 ಹಿಂದಿ ಚಿತ್ರಗಳು, 6 ತಮಿಳು ಮತ್ತು 4 ಮಲಯಾಳಂ ಚಿತ್ರಗಳನ್ನು ನೋಡಿ ಅವುಗಳಲ್ಲಿ ʼಲಾಪತಾ ಲೇಡೀಸ್ʼ ಚಿತ್ರವನ್ನು ಆಯ್ಕೆ ಮಾಡಲಾಗಿದೆ ಎಂದು ಫಿಲಂ ಫೆಡರೇಶನ್ ಆಫ್ ಇಂಡಿಯಾ ಹೇಳಿದೆ.
ಈ ವರ್ಷ 13 ಸದಸ್ಯರು ತೀರ್ಪುಗಾರರಾಗಿ ಕಾಣಿಸಿಕೊಂಡಿದ್ದರು. ಜಾನು ಬರುವಾ ಆಯ್ಕೆ ಸಮಿತಿ ನೇತೃತ್ವ ವಹಿಸಿದ್ದರು. ಒಟ್ಟು 29 ಸಿನಿಮಾಗಳನ್ನು ವೀಕ್ಷಿಸಿ ʼಲಾಪತಾ ಲೇಡೀಸ್ʼ ಸಿನಿಮಾವನ್ನು ಆಯ್ಕೆ ಮಾಡಲಾಗಿದೆ. ಅತ್ಯುತ್ತಮ ವಿದೇಶಿ ಸಿನಿಮಾದ ವಿಭಾಗಕ್ಕೆ ಚಿತ್ರ ಪ್ರವೇಶ ಪಡೆದಿದೆ.
ಅಮೀರ್ ಖಾನ್ ಮಾಜಿ ಪತ್ನಿ ಕಿರಣ್ ರಾವ್ ‘ಲಾಪತಾ ಲೇಡೀಸ್’ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಅಮೀರ್ ಖಾನ್ (Aamir Khan) ಅವರ ಪ್ರೊಡಕ್ಷನ್ ಹೌಸ್ ಸಿನಿಮಾಕ್ಕೆ ಬಂಡವಾಳ ಹಾಕಿದೆ.
ಕಳೆದ ವರ್ಷ ಮಲಯಾಳಂನ ʼ2018ʼ ಆಸ್ಕರ್ ಅಧಿಕೃತವಾಗಿ ಪ್ರವೇಶ ಪಡೆದಿತ್ತು. ಆದರೆ ಶಾರ್ಟ್ ಲಿಸ್ಟ್‌ನಲ್ಲಿ ಕಾಣಿಸಿಕೊಳ್ಳುವಲ್ಲಿ ವಿಫಲವಾಗಿತ್ತು.
ಇತ್ತೀಚೆಗಷ್ಟೇ ನಿರ್ದೇಶಕಿ ಕಿರಣ್ ರಾವ್ ʼಲಾಪತಾ ಲೇಡೀಸ್ʼ ಆಸ್ಕರ್ ಗೆ ಆಯ್ಕೆ ಆದರೆ ನನ್ನ ಕನದು ನನಸಾಗುತ್ತದೆ ಎಂದು ಹೇಳಿ, ಆಸ್ಕರ್ ಗೆ ಸಿನಿಮಾ ಆಯ್ಕೆ ಆಗುತ್ತದೆ ಎನ್ನುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದರು.
ಮಧ್ಯ ಪ್ರದೇಶದ ಗ್ರಾಮೀಣ ಭಾಗದಲ್ಲಿ ಚಿತ್ರೀಕರಣಗೊಂಡ ʼಲಾಪತಾ ಲೇಡೀಸ್ʼ 2001ರ ಕಾಲಘಟ್ಟದ ಕಥೆಯನ್ನು ಒಳಗೊಂಡಿದೆ. ವಧುಯೊಬ್ಬಳು ಮದುವೆ ಗಂಡನ ಜತೆಯಲ್ಲಿ ರೈಲಿನಲ್ಲಿ ಸಂಚಾರ ಮಾಡುವಾಗ ಬೇರೆ ಸ್ಟೇಷನ್ ನಲ್ಲಿ ಇಳಿದು, ಗಂಡನಿಂದ ಕೈತಪ್ಪಿ ಹೋಗುವ ಕಥೆಯನ್ನು ಸಿನಿಮಾ ಒಳಗೊಂಡಿದೆ. ಮೊಬೈಲ್ ಫೋನ್ ಗಳು ದುಬಾರಿ ಆಗಿದ್ದ ಕಾಲದ ನೈಜ ಸಂಗತಿಗಳನ್ನು ಇಟ್ಟುಕೊಂಡು ಸಿನಿಮಾದ ಕಥೆಯನ್ನು ಹಣೆಯಲಾಗಿದೆ. ಸರಳವಾದ ಕಥೆಯಲ್ಲಿ ಪ್ರತಿಭಾ ರಂತ ,ನಿತಾಂಶಿ ಗೋಯೆಲ್ , ಸ್ಪರ್ಶ್ ಶ್ರೀವಾಸ್ತವ್, ರವಿ ಕಿಶನ್ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಭಾರತದಿಂದ ಕೊನೆಯದಾಗಿ ಫೀಚರ್ ಫಿಲ್ಮ್ ವಿಭಾಗದಲ್ಲಿ ಫಿನಾಲ್ ಶಾರ್ಟ್ ಲಿಸ್ಟ್‌ಗೆ ಅಮೀರ್ ಖಾನ್-ಅಶುತೋಷ್ ಗೋವಾರಿಕರ್ ಅವರ ʼಲಗಾನ್ʼ (2001) ಆಯ್ಕೆ ಆಗಿತ್ತು. ಇದು 74ನೇ ಅಕಾಡೆಮಿ ಪ್ರಶಸ್ತಿಗಳಲ್ಲಿ ನೋ ಮ್ಯಾನ್ಸ್ ಲ್ಯಾಂಡ್ ವಿರುದ್ಧ ಸೋತಿತು.