Advertisement
“ಬಂಗಾಲ ದಂಗಲ್’ ಬೆನ್ನಲ್ಲೇ ಮತ್ತೂಂದು ರಾಜಕೀಯ ಚದುರಂಗದಾಟ ಶುರುವಾಗಿದೆ. ಇದಕ್ಕೆ ವೇದಿಕೆಯಾಗಿರುವುದು ಪುದುಚೇರಿ ಎಂಬ ಪುಟ್ಟ ರಾಜ್ಯ. ಕಡಿಮೆ ಸಾಂದ್ರತೆ ಹೊಂದಿದ್ದರೂ “ರಸಭರಿತ’ ನಾಡು ಎಂದೇ ಪ್ರಸಿದ್ಧಿ. ಇಲ್ಲಿನ ರಾಜಕೀಯ ಕೂಡ ಅಷ್ಟೇ ವಿಶೇಷ.
Related Articles
ಚುನಾವಣೆ ಕಾಲ ಬುಡದಲ್ಲೇ ಇರುವುದನ್ನು ಅರಿತ ಬಿಜೆಪಿ ಚಾಣಾಕ್ಷ ನಡೆಯನ್ನೇ ಇಟ್ಟಿದೆ. ತತ್‌ಕ್ಷಣವೇ ಕಿರಣ ಬೇಡಿ ಅವರನ್ನು ತೆರವು ಮಾಡಿ ತೆಲಂಗಾಣದ ರಾಜ್ಯಪಾಲರಾಗಿರುವ ತಮಿಳ್‌ಸಾಯಿ ಸೌಂದರ್‌ರಾಜನ್ ಅವರಿಗೆ ಹೊಣೆಗಾರಿಕೆ ನೀಡಿದೆ. ನಿರೀಕ್ಷೆಯಂತೆ ವಿಪಕ್ಷಗಳು “ವಿಶ್ವಾಸ’ ಪ್ರಸ್ತಾವ ಮಂಡಿಸುತ್ತಿದ್ದಂತೆ ಮೈತ್ರಿ ಸರಕಾರಕ್ಕೆ ವಿಶ್ವಾಸಮತ ಸಾಬೀತಿಗೂ ಸೂಚಿಸಿದ್ದಾರೆ. ಸದನದಲ್ಲಿ ನಡೆಯುವ ರಾಜಕೀಯ ಡ್ರಾಮಾ ಇನ್ನಷ್ಟೇ ಬಾಕಿ ಇದೆ.
Advertisement
ಆದರೆ, ಇದರ ಹಿಂದಿನ ರಾಜಕೀಯ ಮರ್ಮ ಮಾತ್ರ ಆಸಕ್ತಿಕರವಾಗಿದೆ. ಇಲ್ಲಿ ಒಟ್ಟು 33 ಸೀಟುಗಳಿವೆ. 30ಕ್ಕೆ ಚುನಾವಣೆ ಮೂಲಕ, ಇನ್ನು 3 ಸ್ಥಾನವನ್ನು ನಾಮನಿರ್ದೇಶನ ಮಾಡಬಹುದಾಗಿದೆ. ಸದ್ಯ ಏಳು ಸೀಟುಗಳು ಖಾಲಿ ಇವೆ. ಸದನದ ಬಲ 26ಕ್ಕೆ ಇಳಿದಿದ್ದು, ಕಾಂಗ್ರೆಸ್ ಮೈತ್ರಿ ಕೂಟದ ಬಲ 12ಕ್ಕೆ ಕುಸಿತಕಂಡಿದೆ. ಪುದುಚೇರಿ ಮಾಜಿ ಸಿಎಂ ಎ.ರಂಗಸ್ವಾಮಿ ಅವರು 2011ರಲ್ಲಿ ರಚಿಸಿರುವ ಹೊಸ ಪಕ್ಷ ಆಲ್ ಇಂಡಿಯಾ ಎನ್‌ಆರ್ ಕಾಂಗ್ರೆಸ್ 7, ಎಐಎಡಿಎಂಕೆ 4, ಬಿಜೆಪಿ 3 ಸ್ಥಾನ ಹೊಂದಿದ್ದು ವಿಪಕ್ಷ ಸ್ಥಾನದಲ್ಲಿವೆ.
ಇನ್ನು ಪುದುಚೇರಿಯ ಲೆಫ್ಟಿನೆಂಟ್ ಗವರ್ನರ್ ಆಗಿದ್ದ ಕಿರಣ್ ಬೇಡಿ ಅವರು ಸರಕಾರದ ರೂಪುರೇಷೆ, ಆಡಳಿತದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂಬ ಕೂಗು ಕೇಳಿ ಬರತೊಡಗಿತು. ಆರಂಭದಲ್ಲಿ ಸಣ್ಣದಾಗಿದ್ದ ಧ್ವನಿಗೆ ಕಾಲ ಕಳೆದಂತೆ ಬಲ ಬರತೊಡಗಿತು. ಚುನಾವಣೆ ಕಾಲ ಹತ್ತಿರವಾಗುತ್ತಿದ್ದಂತೆ “ಅಡ್ಡಿಯಾಗಿದ್ದನ್ನೇ ಅಸ್ತ್ರ’ ಮಾಡಿಕೊಳ್ಳಲು ಕಾಂಗ್ರೆಸ್ ನೇತೃತ್ವದ ಮೈತ್ರಿ ಸರಕಾರ ರಣತಂತ್ರ ಹೆಣೆಯಲು ಶುರು ಮಾಡಿತು. ಕೇಂದ್ರ ಸರಕಾರ ಕಿರಣ ಬೇಡಿ ಮೂಲಕ ರಾಜಕೀಯ ಮಾಡುತ್ತಿದೆ ಎಂದು ನೇರವಾಗಿಯೇ ಆರೋಪಿಸತೊಡಗಿತು. “ಬೇಡಿ ಹಠಾವೋ’ ಎನ್ನುವ ಮಟ್ಟಕ್ಕೆ ಬಂದು ನಿಂತಿತು. ಇದಕ್ಕೆ ಮಿತ್ರಪಕ್ಷ ಡಿಎಂಕೆ ಕೂಡ ಸಾಥ್ ನೀಡಿತು.
ಬಿಜೆಪಿ ನಡೆ ಏನು?: ಇದಕ್ಕೆ ಹೊಂಚು ಹಾಕಿ ಕೂತಿದ್ದ ಬಿಜೆಪಿ ಚುನಾವಣೆ ಘೋಷಣೆಗೆ ದಿನಗಣನೆ ಆರಂಭವಾದ ಬೆನ್ನಲ್ಲೇ ಕಿರಣ್ ಬೇಡಿ ಅವರನ್ನು ಲೆಫ್ಟಿನೆಂಟ್ ಗವರ್ನರ್ ಹುದ್ದೆಯಿಂದ ಮುಕ್ತಿಗೊಳಿಸಿತು. ಅಸ್ತ್ರ ಮಾಡಿಕೊಳ್ಳಲು ಸಜ್ಜಾಗಿದ್ದನ್ನು ಅರಿತು ಚಾಣಾಕ್ಷ ನಡೆ ಇಟ್ಟ ಬಿಜೆಪಿ ತಂತ್ರಗಾರಿಕೆಗೆ ಕಾಂಗ್ರೆಸ್ ಈಗ ಕೈ ಕೈ ಹೊಸಕಿಕೊಳ್ಳುವ ಸ್ಥಿತಿ ನಿರ್ಮಾಣವಾಗಿದ್ದು ಸುಳ್ಳಲ್ಲ. ಇಷ್ಟಕ್ಕೆ ಸುಮ್ಮನಾಗದ ಬಿಜೆಪಿ ಪಶ್ಚಿಮ ಬಂಗಾಲ ಸೇರಿದಂತೆ ಇತರೆ ರಾಜ್ಯಗಳಲ್ಲಿ ಆಡಳಿತಾರೂಢ ಪಕ್ಷಗಳ ಶಾಸಕರನ್ನು ಪಕ್ಷಕ್ಕೆ ಸೆಳೆಯುವ ತಂತ್ರಗಾರಿಕೆಯನ್ನು ಅನುಷ್ಠಾನಗೊಳಿಸಿತು. ಕಳೆದ ಒಂದೂವರೆ ತಿಂಗಳಲ್ಲಿ ನಾಲ್ವರು ಕಾಂಗ್ರೆಸ್ ಎಂಎಲ್‌ಎಗಳು ಬಿಜೆಪಿ ಪಾಳಯ ಸೇರಿದ್ದಾರೆ. ರವಿವಾರವೂ ಒಬ್ಬ ಕಾಂಗ್ರೆಸ್ ಹಾಗೂ ಡಿಎಂಕೆಯ ಒಬ್ಬ ಶಾಸಕರು ರಾಜೀನಾಮೆ ಕೊಟ್ಟಿದ್ದಾರೆ. ಒಂದೆಡೆ ಪಕ್ಷಕ್ಕೆ ಅನ್ಯ ನಾಯಕರನ್ನು ಕರೆ ತಂದು ಬಲಿಷ್ಠಗೊಳಿಸುವುದು, ಇನ್ನೊಂದೆಡೆ ಸರಕಾರ ಅತಂತ್ರಗೊಳಿಸುವುದರ ಜತೆಗೆ ಎದುರಾಳಿ ಪಕ್ಷವನ್ನು ದುರ್ಬಲಗೊಳಿಸುವ ಪರೀಕ್ಷೆಯಲ್ಲಿ ಬಿಜೆಪಿ ಪಾಸ್ ಆಗಿದೆ.
ಕಾಂಗ್ರೆಸ್ ಸ್ಥಿತಿ ಏನು?: ಬಿಜೆಪಿ ಡಬಲ್ ಹೊಡೆತಕ್ಕೆ ಕಾಂಗ್ರೆಸ್‌ಗೆ ಟ್ರಬಲ್ ಆಗಿದೆ. ತನ್ನ ಪಕ್ಷದ ಶಾಸಕರು ಬಿಜೆಪಿ ಪಾಳಯ ಸೇರುವುದನ್ನು ತಡೆಯಲಾಗದ ಸ್ಥಿತಿ ನಿರ್ಮಾಣವಾಗಿದೆ. ಇನ್ನೊಂದೆಡೆ “ಬೇಡಿ ಅಸ್ತ್ರ’ವನ್ನು ಕೂಡ ಬಿಜೆಪಿ ಕಸಿದುಕೊಂಡಿದೆ. ಸರಕಾರದ ಆಡಳಿತಾವಧಿಯಲ್ಲಿ ಹೇಳಿಕೊಳ್ಳುವಂಥ ಕಲ್ಯಾಣ ಕಾರ್ಯಕ್ರಮಗಳನ್ನು ಕೂಡ ಅನುಷ್ಠಾನಗೊಳಿಸಿಲ್ಲ ಎಂಬ ಜನಾಕ್ರೋಶ ಕೂಡ ಎದುರಿಸಬೇಕಾಗಿದೆ. ಇಂಥ ಸಂಕಷ್ಟ ಸ್ಥಿತಿಯಲ್ಲೇ ಸದನದಲ್ಲಿ “ವಿಶ್ವಾಸ’ವನ್ನು ಉಳಿಸಿಕೊಳ್ಳಬೇಕಾಗಿದೆ. ಇವೆಲ್ಲವನ್ನೂ “ಹಾಲಿ ಸಿಎಂ’ ನಾರಾಯಣಸ್ವಾಮಿ ಹೇಗೆ ನಿಭಾಯಿಸುತ್ತಾರೆ ಎನ್ನುವುದೇ ಸದ್ಯದ ಕುತೂಹಲ.
ದಿನಕ್ಕೊಂದು ರಾಜಕೀಯ ಬೆಳವಣಿಗೆ ನಡೆಯುತ್ತಿರುವಾಗಲೇ ಬಿಜೆಪಿ ರಾಜೀವ ಚಂದ್ರಶೇಖರ್, ಅರ್ಜುನ ಸಿಂಗ್ ಮೇಘಾÌಲ್ ಮತ್ತು ನಿರ್ಮಲ್ ಕುಮಾರ್ ಸುರಾನಾ ಅವರನ್ನು ಚುನಾವಣ ಉಸ್ತುವಾರಿಯಾಗಿ ನೇಮಿಸಿದೆ. ಇಬ್ಬರೂ ನಾಯಕರು ಅಲ್ಲೇ ಠಿಕಾಣಿ ಹೂಡಿ ರಾಜಕೀಯ ತಂತ್ರಗಾರಿಕೆ ಹೆಣೆಯುತ್ತಿದ್ದಾರೆ. ಕೇಂದ್ರ ನಾಯಕರ ಸಲಹೆ ಸೂಚನೆ ಜತೆಗೆ ಕಾಂಗ್ರೆಸ್ ಸರಕಾರಕ್ಕೆ ಟಕ್ಕರ್ ನೀಡುತ್ತಿದ್ದಾರೆ. ಇದು ಕಾಂಗ್ರೆಸ್ ನೇತೃತ್ವದ ಆಡಳಿತಾರೂಢ ಪಕ್ಷಕ್ಕೆ ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಒಂದು ವೇಳೆ ಕಾಂಗ್ರೆಸ್ ವಿಶ್ವಾಸ ಕಳೆದುಕೊಂಡರೆ ಬಿಜೆಪಿ ಹಾಗೂ ಇತರ ವಿಪಕ್ಷಗಳು ಸೇರಿ ಸರಕಾರ ರಚಿಸುವ ಸಾಹಸಕ್ಕೆ ಕೈ ಹಾಕದಿರಲು ನಿರ್ಧರಿಸಿವೆ.
ಇವೆಲ್ಲ ಬೆಳವಣಿಗೆ ಕೇವಲ ಪುಟ್ಟ ರಾಜ್ಯಕ್ಕೆ ಸೀಮಿತವಾಗಿಲ್ಲ. ಪಕ್ಕದ ತಮಿಳುನಾಡು, ಕೇರಳದಲ್ಲಿ ಬಿಜೆಪಿಗೆ ಗಟ್ಟಿ ಬೇರಿಲ್ಲ. ದ್ರಾವಿಡ ನಾಡಲ್ಲಿ ತಳವೂರಲು ಈಗಾಗಲೇ ತಂತ್ರಗಾರಿಕೆ ಹೆಣೆಯುತ್ತಿದೆ. ಪಳನಿಸ್ವಾಮಿ ಸರಕಾರಕ್ಕೆ ಶಶಿಕಲಾ ಎಂಟ್ರಿ ಆಘಾತ ನೀಡಿದ್ದನ್ನು ಮತಗಳಾಗಿ ಪರಿವರ್ತಿಸಲು ಹವಣಿಸುತ್ತಿದೆ. ಸುಲಭದ ತುತ್ತಾಗಬಲ್ಲ ಪುದುಚೇರಿ ವಶಪಡಿಸಿಕೊಂಡರೆ ಇವೆರಡೂ ರಾಜ್ಯಗಳಲ್ಲಿ ವಿಜಯ ಪತಾಕೆ ಹಾರಿಸಲು ಅನುವಾಗುತ್ತದೆ ಎಂಬ ದೂರದೃಷ್ಟಿಯೂ ಇದೆ. ಇದಕ್ಕೆ ಬೇಕಾದ ಎಲ್ಲ ಸಿದ್ಧತೆಗಳನ್ನು ಕಮಲ ಪಡೆ ಮಾಡಿಕೊಳ್ಳುತ್ತಿರುವುದು ಕಾಂಗ್ರೆಸ್‌ಗೆ ಸವಾಲಾಗಿ ಪರಿಣಮಿಸಿದೆ.
ಪಶ್ಚಿಮ ಬಂಗಾಲದಲ್ಲಿ ಮಮತಾ ಬ್ಯಾನರ್ಜಿ ಸರಕಾರದಲ್ಲಿನ ಘಟಾನುಘಟಿ ನಾಯರನ್ನೇ ಪಕ್ಷಕ್ಕೆ ಸೇರಿಸಿಕೊಂಡು ಕಹಳೆ ಊದಿರುವ ಬಿಜೆಪಿ ಪುದುಚೇರಿ, ತಮಿಳುನಾಡಿನಲ್ಲೂ ಇದೇ ತಂತ್ರಗಾರಿಕೆ ಅನುಸರಿಸಿದ್ದು ನಿರೀಕ್ಷಿತ. ಆದರೆ, ಫಲಿತಾಂಶ ಏನು ಎಂಬುದು ಸದ್ಯದ ಕುತೂಹಲ. ಆದರೆ, ಪಶ್ಚಿಮ ಬಂಗಾಲದ ರಾಜಕೀಯಕ್ಕೂ ಪುದುಚೇರಿ ತಮಿಳುನಾಡಿನ ರಾಜಕೀಯ ತೀರಾ ಭಿನ್ನ. ಇಂಥ ರಾಜಕೀಯಕ್ಕೆ “ಫ್ರೆಂಚ್ ಆಡಳಿತ’ ಅನುಭವ ಇರುವ ಕೇಂದ್ರಾಡಳಿತ ಪ್ರದೇಶ ಪುದುಚೇರಿಯಲ್ಲಿ ಫಲ ನೀಡಬಲ್ಲದೇ ಎಂಬುದು ರಾಜಕೀಯ ಪಂಡಿತರ ಲೆಕ್ಕಾಚಾರಕ್ಕೂ ನಿಲುಕುತ್ತಿಲ್ಲ. ಸದ್ಯ “ವಿಶ್ವಾಸ’ದಲ್ಲೇ ತಲ್ಲೀನವಾಗಿರುವ ಕಾಂಗ್ರೆಸ್‌ಗೆ ಮುಂದೆ ಬಿಜೆಪಿ ಇನ್ನೂ ಏಟು ನೀಡಿದರೂ ಅಚ್ಚರಿ ಇಲ್ಲ. ಪುದುಚೇರಿಯಲ್ಲಿ ರಾಹುಲ್ ಗಾಂಧಿ ಪ್ರಚಾರ ನಡೆಸಲು ಬರುವ ಮುನ್ನವೇ ಇಂಥ ಪರಿಸ್ಥಿತಿ ನಿರ್ಮಾಣವಾಗಿದ್ದು ಕೂಡ ನಿರೀಕ್ಷಿತ!
– ಚನ್ನು ಮೂಲಿಮನಿ