Advertisement

ಕಿನ್ನಿಗೋಳಿ: ನಿರ್ವಹಣೆ ಇಲ್ಲದ ಸಾರ್ವಜನಿಕ ಶೌಚಾಲಯ

10:10 AM Oct 30, 2018 | |

ಕಿನ್ನಿಗೋಳಿ: ಇಲ್ಲಿನ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಬಸ್‌ ನಿಲ್ದಾಣದ ಪಕ್ಕದಲ್ಲಿರುವ ಶೌಚಾಲಯ ಹಳೆಯದಾಗಿದ್ದು, ಮೇಲ್ಛಾವಣಿ ಕುಸಿಯುವ ಹಂತದಲ್ಲಿದೆ. ಇದರಿಂದ ಸಾರ್ವಜನಿಕರು ಇದರೊಳಗೆ ಹೋಗಲು ಭಯ ಪಡುವಂತಾಗಿದೆ.

Advertisement

ಶುಲ್ಕ ಪಾವತಿ ಶೌಚಾಲಯ
ಈ ಶೌಚಾಲಯವನ್ನು ಉಪಯೋಗಿಸಲು ಶುಲ್ಕ ಪಾವತಿ ಮಾಡಬೇಕಿದೆ. ಆದರೆ ಸೂಕ್ತ ನಿರ್ವಹಣೆ ಇಲ್ಲದೆ ಮೂಗು ಮುಚ್ಚಿಕೊಂಡು ಹೋಗಬೇಕಾದ ಪರಿಸ್ಥಿತಿ ಇದೆ. ಮಹಿಳೆಯರಿಗೆ ಕೇವಲ ಒಂದು ಕೋಣೆಯಿದ್ದು, ಹೆಚ್ಚು ಹೊತ್ತು ಕಾಯಬೇಕಾದ ಪರಿಸ್ಥಿತಿ ಇದೆ. ಈ ಹಿಂದೆ ನೆಲಕ್ಕೆ ಹಾಕಿದ ಹಾಸುಗಲ್ಲು ಸವೆದು ಹೋಗಿ ಜಾರುತ್ತಿರುವುದರಿಂದ ಅಪಾಯಕಾರಿಯಾಗಿ ಪರಿಣಮಿಸಿದೆ. ಇದರಿಂದ ಹಿರಿಯ ನಾಗರಿಕರು ಪರದಾಡಬೇಕಾಗಿದೆ.

ಪ್ರತಿದಿನ 250ಕ್ಕೂ ಹೆಚ್ಚು ಬಸ್‌ಗಳು, ಸಾವಿರಾರು ಮಂದಿ, ಶಾಲಾ-ಕಾಲೇಜು ವಿದ್ಯಾರ್ಥಿಗಳು ಇಲ್ಲಿನ ಬಸ್‌ ನಿಲ್ದಾಣಕ್ಕೆ ಬಂದು ಹೋಗುತ್ತಾರೆ. ತುರ್ತು ಸಂದರ್ಭಕ್ಕೆ ಬೇಕಾದ ಶೌಚಾಲಯ ವ್ಯವಸ್ಥೆ ಸರಿಯಾಗಿಲ್ಲದ ಕಾರಣ ಪರದಾಡುವಂತಾಗಿದೆ.

ಕುಸಿದ ಫ‌ುಟ್‌ಪಾತ್‌
ಬಸ್‌ ನಿಲ್ದಾಣದಿಂದ ಶೌಚಾಲಯಕ್ಕಾಗಿ ಕೆಳಗೆ ಇಳಿದು ಹೋಗಬೇಕಿರುವುದರಿಂದ ರಸ್ತೆಯ ಚರಂಡಿಗೆ ಹಾಕಲಾಗಿದ್ದ ಫ‌ುಟ್‌ಪಾತ್‌ ಸ್ಲ್ಯಾಬ್‌ ತುಂಡಾಗಿದೆ. ಶೌಚಾಲ ಯಕ್ಕೆ ಹೋಗುವ ದಾರಿಗೆ ಸರಿಯಾದ ಮೆಟ್ಟಲುಗಳೂ ಇಲ್ಲವಾದ್ದರಿಂದ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ. 

ನವೀಕರಣ ಮಾಡಲಾಗುವುದು
ಹೊಸ ಬಸ್‌ ನಿಲ್ದಾಣ ನಿರ್ಮಾಣ ಆಗುವಾಗ ಹೊಸ ಶೌಚಾಲಯದ ಬಗ್ಗೆ ಅಂದಾಜು ಪಟ್ಟಿ ಮಾಡಲಾಗಿತ್ತು. ಆದರೆ ಸ್ಥಳದ ಅಭಾವದಿಂದ ಸದ್ರಿ ಇರುವ ಶೌಚಾಲಯವನ್ನು 4 ಲಕ್ಷ ರೂ. ವೆಚ್ಚದಲ್ಲಿ ನವೀಕರಣ ಮಾಡಲಾಗುವುದು.
ಅರುಣ್‌ ಪ್ರದೀಪ್‌ ಡಿ’ಸೋಜಾ,
   ಪಿಡಿಒ ಕಿನ್ನಿಗೋಳಿ

Advertisement

ಕುಸಿದು ಬಿದ್ದ ಪಿಟ್‌
ಶೌಚಾಲಯದ ಹಿಂಬದಿ ಇರುವ ಪಿಟ್‌ (ಹೊಂಡ) ಸಂಪೂರ್ಣ ಕುಸಿದಿದೆ. ಅದರ ತ್ಯಾಜ್ಯ ಗುಂಡಿಯಿಂದ ಹೊರಬಂದು ಚರಂಡಿಯಲ್ಲಿ ಹೋಗುತ್ತಿದೆ. ಇದರಿಂದ ಸುತ್ತಲೂ ದುರ್ನಾತ ಬೀರುತ್ತಿದೆ. ತ್ಯಾಜ್ಯ ಹೊಂಡದಿಂದ ಸೊಳ್ಳೆಗಳ ಉತ್ಪತ್ತಿಯ ತಾಣವಾಗಿದ್ದು, ಸಾಂಕ್ರಾಮಿಕ ರೋಗ ಹರಡುವ ಮುನ್ನ ಸಂಬಂಧ ಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ಶೌಚಾಲಯ ದುರಸ್ತಿಗೆ ಕ್ರಮಕೈಗೊಳ್ಳಬೇಕಿದೆ.
 – ಮಹಮ್ಮದ್‌ ಸಯ್ಯದ್‌ ಅಸ್ಸಾದಿ
ಕಿನ್ನಿಗೋಳಿ, ಪ್ರಧಾನ ಕಾರ್ಯದರ್ಶಿ, ಮಾನವ
ಹಕ್ಕುಗಳು ಭ್ರಷ್ಟಾಚಾರ ವಿರೋಧಿ ಸಂಸ್ಥೆ, ಮಂಗಳೂರು

ರಘುನಾಥ ಕಾಮತ್‌

Advertisement

Udayavani is now on Telegram. Click here to join our channel and stay updated with the latest news.

Next