Advertisement
ಬೆಳೆಯುತ್ತಿರುವ ಕಿನ್ನಿಗೋಳಿ ಪೇಟೆಗೆ ಸುರಕ್ಷತೆ ಬೇಕು ಎಂಬ ಕಾರಣಕ್ಕಾಗಿ ಮುಖ್ಯ ರಸ್ತೆಯ ಸರ್ಕಲ್ನಲ್ಲಿ ಸಾರ್ವಜನಿಕರಿಂದ ಹಣ ಸಂಗ್ರಹಿಸಿ ಸಿಸಿ ಕೆಮರಾ ಹಾಕಲಾಗಿತ್ತು. ಅದು ಕೆಲವು ಸಮಯ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿತ್ತು. ಸ್ವಲ್ಪ ಕಾಲದ ಬಳಿಕ ಸಿಡಿಲು ಬಡಿದು ಸಿಸಿ ಕೆಮರಾ ಹಾಳಾದ ಅನಂತರ ಅದನ್ನು ಮತ್ತೆ ರಿಪೇರಿ ಮಾಡುವ ಗೋಜಿಗೆ ಯಾರೂ ಹೋಗಿಲ್ಲ. ಸ್ಥಳೀಯ ಆಡಳಿತ ಅದರ ಉಸ್ತುವಾರಿಯನ್ನೂ ಗಮನಿಸದೆ ಸಿಸಿ ಕೆಮರಾ ಮೂಲೆಗುಂಪಾಗಿದೆ. 1.30 ಲಕ್ಷ ರೂ. ವೆಚ್ಚದ ಸಿಸಿ ಕೆಮರಾ ವ್ಯವಸ್ಥೆಗೆ ಎಳ್ಳು ನೀರು ಬಿಡಲಾಗಿದೆ.
Related Articles
Advertisement
ಟ್ರಾಫಿಕ್ ವ್ಯವಸ್ಥೆ ಇನ್ನೂ ಸುಸೂತ್ರವಿಲ್ಲಕಿನ್ನಿಗೋಳಿ ಪಟ್ಟಣ ಹಲವು ಊರುಗಳ ಕೇಂದ್ರ ಸ್ಥಾನ. ಕಟೀಲು, ಮೂಲ್ಕಿ, ಪಕ್ಷಿಕೆರೆ, ಮೂಡುಬಿದಿರೆ, ಐಕಳ, ಮುಂಡ್ಕೂರು ಭಾಗದಿಂದ ಬರುವವರಿಗೆ ಇದುವೇ ಸಂಪರ್ಕ ಕೇಂದ್ರ. ಇಲ್ಲಿ ದಿನಕ್ಕೆ ನೂರಾರು ಬಸ್ಗಳ ಓಡಾಟವಿದೆ. ಸಾವಿರಾರು ವಾಹನಗಳ ಓಡಾಟವೂ ಇದೆ. ಆದರೆ, ಇಲ್ಲಿನ ಟ್ರಾಫಿಕ್ ವ್ಯವಸ್ಥೆ ಸುಸೂತ್ರವಿಲ್ಲ. ಸರಿಯಾದ ಟ್ರಾಫಿಕ್ ಸಿಬಂದಿಯ ನಿಯೋಜನೆಯು ಆಗುತ್ತಿಲ್ಲ . ಪೇಟೆಯಲ್ಲಿ ಹಾಗೂ ಬಸ್ ನಿಲ್ದಾಣದಲ್ಲಿ ಗುತ್ತಕಾಡು ಹೋಗುವ ಆಟೋರಿಕ್ಷಾ ಪಾರ್ಕಿಂಗ್ ಬಳಿ ವಾಹನಗಳು ಎಡಕ್ಕೆ ತಿರುಗಿ ಹೋಗಿ ಎಂಬ ಸೂಚನ ಫಲಕವಿದ್ದರೂ ಮಕ್ಕಳ ಶಾಲಾ ವಾಹನಗಳು ವಿರುದ್ಧ ದಿಕ್ಕಿನಲ್ಲಿ ಸಂಚರಿಸುತ್ತವೆ. ವಾಹನಗಳು, ಅಟೋರಿಕ್ಷಾಗಳ ಬೇಕಾಬಿಟ್ಟಿ ನಿಲುಗಡೆಯಿಂದ ಸಮಸ್ಯೆಯಾಗಿದೆ. ಆದರೆ, ಇದರ ಯಾವುದರ ಮೇಲೂ ಸರಿಯಾದ ಕಣ್ಗಾವಲು ಇಲ್ಲ. ಖಾಯಂ ಟ್ರಾಫಿಕ್ ಪೊಲೀಸರೇ ಇಲ್ಲ. ಎಟಿಎಂ ಲೂಟಿಗೆ ಯತ್ನ ನಡೆದಿತ್ತು
ಹಿಂದೆ ಕಿನ್ನಿಗೋಳಿ ಮುಖ್ಯ ರಸ್ತೆಯಲ್ಲಿ ಪೊಲೀಸ್ ಚೌಕಿ ಇತ್ತು. ಅದಕ್ಕೆ ಸಿಸಿ ಕೆಮರಾ ಅಳವಡಿಸಿತ್ತು. ಬಳಿಕ ಸಿಸಿ ಟಿವಿಯೇ ಕಣ್ಮುಚ್ಚಿತ್ತು. ಮುಂದೆ ಅದು ಬ್ಯಾನರ್, ಬಂಟಿಂಗ್ ಕಟ್ಟುವ ತಾಣವಾಯಿತು. ಕಿನ್ನಿಗೋಳಿ ಪರಿಸರದಲ್ಲಿ ಕಳವು, ಬ್ಯಾಂಕ್ ಎ.ಟಿ.ಎಂ. ಲೂಟಿಗೆ ಪ್ರಯತ್ನ ನಡೆದಿತ್ತು. ಇಂಥ ಪ್ರಸಂಗಗಳು ಎದುರಾದಾಗ ಖಾಸಗಿ ಸಿಸಿ ಕೆಮರಾಗಳ ಮೊರೆ ಹೋಗಬೇಕಾದ ಅಗತ್ಯತೆ ಬರುತ್ತದೆ. ಹೀಗಾಗಿ ನಾಗರಿಕರ ಹಿತದೃಷ್ಟಿಯಿಂದ ಪೊಲೀಸ್ ಹೊರಠಾಣೆ ಹಾಗೂ ಸಿಸಿ ಕೆಮರಾ ಆಳವಡಿಕೆ ಅಗತ್ಯವಾಗಿದೆ. ಹೊರಠಾಣೆಯಾದರೂ ಬೇಕಾಗಿದೆ
ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ಹಾಗೂ ಕಿನ್ನಿಗೋಳಿ ಪೇಟೆಯ ಟ್ರಾಫಿಕ್ ನಿರ್ವಹಣೆ, ಅಪಘಾತ ಮತ್ತಿತರ ಸಂದರ್ಭದ ತುರ್ತು ಸ್ಪಂದನೆಗೆ ಇಲ್ಲಿ ಪೊಲೀಸ್ ಠಾಣೆಯೊಂದರ ಅಗತ್ಯವಿದೆ. ಆದರೆ, ಪೊಲೀಸ್ ಹೊರಠಾಣೆಯೂ ಇಲ್ಲಿಲ್ಲ. ಆರು ಶಿಕ್ಷಣ ಸಂಸ್ಥೆಗಳು, ಹತ್ತಿರದಲ್ಲಿಯೇ ಕಟೀಲು ದೇಗುಲ ಇದೆ. ಕಿನ್ನಿಗೋಳಿ ಪರಿಸರದಲ್ಲಿ ಹಲವು ಮನೆಗಳ ವಸತಿ ಗೃಹಗಳು ತಲೆ ಎತ್ತುತ್ತಿವೆ. ಸದ್ಯಕ್ಕೆ ಇಲ್ಲಿ ಏನೇ ಆದರೂ ಮೂಲ್ಕಿಯಿಂದಲೇ ಪೊಲೀಸರು ಬರಬೇಕಾದ ಸ್ಥಿತಿ ಇದೆ. ಹೊರ ಠಾಣೆ ಬೇಕು ಎಂದು ಹಲವು ಸಂಘ ಸಂಸ್ಥೆಗಳು ಮನವಿ ಮಾಡಿವೆ. -ರಘುನಾಥ ಕಾಮತ್ ಕೆಂಚನಕೆರೆ