Advertisement

Kinnigoli: ಪಾದಚಾರಿಗೆ ಯುವಕನಿಂದ ಹಲ್ಲೆ; ಪರಿಸ್ಥಿತಿ ತಿಳಿಗೊಳಿಸಿದ ಪೊಲೀಸರು

08:21 PM Sep 11, 2024 | Team Udayavani |

ಕಿನ್ನಿಗೋಳಿ: ಕಿನ್ನಿಗೋಳಿ ಪೇಟೆಯ ಕೇಂದ್ರ ಬಸ್‌ ನಿಲ್ದಾಣದಲ್ಲಿ ಬೈಕ್‌ ಸವಾರ ಯುವಕನೋರ್ವ ವ್ಯಕ್ತಿಯೋರ್ವರಿಗೆ ಢಿಕ್ಕಿ ಹೊಡೆಸಿದ್ದು, ಮಾತ್ರವಲ್ಲದೆ ಅವರ ಮೇಲೆಯೇ ಹಲ್ಲೆ ನಡೆಸಿದ ಘಟನೆ ಬುಧವಾರ(ಸೆ.11) ನಡೆದಿದೆ.

Advertisement

ಯುವಕನ ವಿರುದ್ಧ ಆಕ್ರೋಶಗೊಂಡ ಸಾರ್ವಜನಿಕರು ಸ್ಥಳಕ್ಕೆ ಜಮಾಯಿಸಿದ್ದು, ಆತನನ್ನು ತರಾಟೆಗೆ ತೆಗೆದುಕೊಂಡರು.

ಘಟನೆಯ ವಿವರ
ಕಿನ್ನಿಗೋಳಿ ಬಸ್ಸು ನಿಲ್ದಾಣದಲ್ಲಿ ವ್ಯಕ್ತಿಯೋರ್ವರು ನಡೆದುಕೊಂಡು ಹೋಗುತ್ತಿರುವ ಸಂದರ್ಭ ಬೈಕ್‌ನಲ್ಲಿ ಬಂದ ಯುವಕ ಅವರಿಗೆ ಢಿಕ್ಕಿ ಹೊಡೆದಿದ್ದ. ಈ ಸಂದರ್ಭ ಪಾದಚಾರಿ ಕೈಯಲ್ಲಿದ್ದ ಮೊಬೈಲ್‌ ನೆಲಕ್ಕೆ ಬಿದ್ದಿತ್ತು. ಈ ವೇಳೆ ಅವರು ಬೈಕ್‌ ಸವಾರನಿಗೆ ಸ್ವಲ್ಪ ನಿಧಾನವಾಗಿ ವಾಹನ ಚಲಾಯಿಸಿ ಎಂದು ಕಿವಿಮಾತು ಹೇಳಿದ್ದಾರೆ. ಇದರಿಂದ ಕೆರಳಿದ ಯುವಕ ಪಾದಚಾರಿ ವ್ಯಕ್ತಿಗೆ ಕೈಯಿಂದ ಹೊಡೆದಿದ್ದ. ಇದನ್ನು ಗಮನಿಸಿದ ಜನರು ಒಬ್ಬೊಬ್ಬರಾಗಿ ಬಂದು ಸ್ಥಳದಲ್ಲಿ ಸೇರಿದ್ದು, ಈ ವೇಳೆ ಕೆಲ ಹೊತ್ತು ಯುವಕ ಹಾಗೂ ಸಾರ್ವಜನಿಕರ ಮಧ್ಯೆ ಮಾತಿನ ಚಕಮಕಿ ನಡೆಯಿತು. ಬಳಿಕ ಪೊಲೀಸರ ಮಧ್ಯಪ್ರವೇಶವಾಯಿತು.

ಬುಧವಾರ ಕಿನ್ನಿಗೋಳಿಯ ಸಾರ್ವಜನಿಕ ಗಣೇಶೋತ್ಸವ ಮೆರವಣಿಗೆ ನಡೆಯಲಿದ್ದ ಕಾರಣ ನೂರಾರು ಸಂಖ್ಯೆಯಲ್ಲಿ ಜನ ಪೇಟೆಯಲ್ಲಿ ಸೇರಿದ್ದರು. ಘಟನೆಗೆ ಕಾರಣನಾದ ಯುವಕನೇ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿ ದರ್ಪ ತೋರಿದ್ದನ್ನು ಅಲ್ಲಿದ್ದ ಜನ ಆಕ್ಷೇಪಿಸಿದರು. ಈ ವೇಳೆ ಆತನೂ ಜನರೊಂದಿಗೆ ಮಾತಿಗೆ ಮಾತು ಬೆಳೆಸಿದ್ದ. ಪರಿಣಾಮ ಜನ ಹೆಚ್ಚಿನ ಸಂಖ್ಯೆಯಲ್ಲಿ ಸೇರುತ್ತಲೇ ಇದ್ದರು.

ಈ ಬಗ್ಗೆ ಮಾಹಿತಿ ಪಡೆದ ಮೂಲ್ಕಿ ಠಾಣೆಯ ಪೊಲೀಸರು ತತ್‌ಕ್ಷಣ ಘಟನಾ ಸ್ಥಳಕ್ಕಾಗಮಿಸಿ ಜನರನ್ನು ಸ್ಥಳದಿಂದ ಚದುರುವಂತೆ ಸೂಚಿಸಿದರು. ಅನಂತರ ಗಲಾಟೆಗೆ ಕಾರಣನಾದ ಯುವಕನನ್ನು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದರು. ಗಣೇಶೋತ್ಸವ ಮೆರವಣಿಯ ಬಂದೋಬಸ್ತ್ನಲ್ಲಿ 100-150ಕ್ಕೂ ಅಧಿಕ ಪೊಲೀಸರು ಕಿನ್ನಿಗೋಳಿ ಪೇಟೆಯಲ್ಲೇ ಇದ್ದರು. ಆದ್ದರಿಂದ ಘಟನಾ ಸ್ಥಳಕ್ಕೆ ಕೂಡಲೇ ಪೊಲೀಸರು ಧಾವಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು. ಇಲ್ಲವಾದರೆ ಅಹಿತಕರ ಘಟನೆ ನಡೆಯುವ ಸಂಭವವಿತ್ತು ಎನ್ನಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next