Advertisement

ನೂತನ ನಗರ ಸ್ಥಳೀಯ ಸಂಸ್ಥೆಗಳ ವಾರ್ಡ್‌ ವಿಂಗಡನೆ ಶುರು

08:41 PM Oct 19, 2021 | Team Udayavani |

ಮಹಾನಗರ: ಹೊಸದಾಗಿ ಘೋಷಣೆಯಾದ ಮಂಗಳೂರು ತಾಲೂಕು ವ್ಯಾಪ್ತಿಯ ಬಜಪೆ ಹಾಗೂ ಕಿನ್ನಿಗೋಳಿ ಪಟ್ಟಣ ಪಂಚಾಯತ್‌ಗೆ ವಾರ್ಡ್‌ ವಿಂಗಡನೆ ಕಾರ್ಯ ಆರಂಭವಾಗಿದ್ದು, ಚುನಾವಣೆ ಪ್ರಕ್ರಿಯೆಗೆ ಆರಂಭಿಕ ಸಿದ್ಧತೆ ಶುರುವಾಗಿದೆ.

Advertisement

ಎರಡೂ ಪಟ್ಟಣ ಪಂಚಾಯತ್‌ ವ್ಯಾಪ್ತಿಯಲ್ಲಿ 2011ರ ಜನಗಣತಿ ಪಟ್ಟಿ, ಮನೆ ಪಟ್ಟಿ, ಮತದಾರರ ಪಟ್ಟಿ ಆಧಾರದಲ್ಲಿ ವಾರ್ಡ್‌ ವಿಂಗಡನೆ ಪ್ರಕ್ರಿಯೆ ಒಂದು ವಾರದಿಂದ ನಡೆಯುತ್ತಿದೆ. ಈ ಮೂಲಕ ಗ್ರಾ.ಪಂ. ಸದಸ್ಯರನ್ನು ಹೊಂದಿದ್ದ ಈ ವ್ಯಾಪ್ತಿಯಲ್ಲಿ ಚುನಾವಣೆ ನಡೆದ ಅನಂತರ ಕೌನ್ಸಿಲರ್‌ಗಳ ನೇಮಕವಾಗಲಿದೆ. ಸುಮಾರು 600ರಿಂದ 1 ಸಾವಿರ ಮತದಾರರಿಗೆ ಓರ್ವ ಕೌನ್ಸಿಲರ್‌ ಇರಲಿದ್ದಾರೆ.

ಬಜಪೆ, ಮಳವೂರು, ಕೆಂಜಾರು ಗ್ರಾಮಗಳ ವ್ಯಾಪ್ತಿಯನ್ನು ಒಳಗೊಂಡ ಬಜಪೆ ಪಟ್ಟಣ ಪಂಚಾಯತ್‌ ಇತ್ತೀಚೆಗೆ ಘೋಷಣೆಯಾಗಿದ್ದು, ಬಜಪೆಗೆ ಆಡಳಿತಾಧಿಕಾರಿಯಾಗಿ ಮಂಗಳೂರು ತಾಲೂಕು ತಹಶೀಲ್ದಾರ್‌ ಅವರನ್ನು ನೇಮಿಸಲಾಗಿದೆ. ಬಜಪೆ ಮಂಡಲ ಪಂಚಾಯತ್‌ ಕಟ್ಟಡದಲ್ಲಿಯೇ ಕಚೇರಿ ನಡೆಯುತ್ತಿದೆ. ಕಿನ್ನಿಗೋಳಿ ಪಟ್ಟಣ ಪಂಚಾಯತ್‌ ಆಗಿ ಇತ್ತೀಚೆಗೆ ಘೋಷಣೆ ಮಾಡಿ, ಮೂಲ್ಕಿ ತಹಶೀಲ್ದಾರ್‌ ಅವರನ್ನು ಆಡಳಿತಾಧಿಕಾರಿಯಾಗಿ ನೇಮಕ ಮಾಡಲಾಗಿದೆ. ಕಿನ್ನಿಗೋಳಿ ಗ್ರಾ.ಪಂ. ಕಟ್ಟಡದಲ್ಲಿಯೇ ಪಟ್ಟಣ ಪಂಚಾಯತ್‌ ಕಾರ್ಯನಿರ್ವಹಿಸುತ್ತಿದೆ. ಈ ಎರಡೂ ಪಟ್ಟಣ ಪಂಚಾಯತ್‌ನಲ್ಲಿ ಇದೀಗ ವಾರ್ಡ್‌ ವಿಂಗಡನೆ ಪ್ರಕ್ರಿಯೆ ನಡೆಯುತ್ತಿದೆ.

ಸೋಮೇಶ್ವರ, ಕೋಟೆಕಾರ್‌; ಚುನಾವಣೆಯೇ ಆಗಿಲ್ಲ!
ರಾಜ್ಯದ ಅತೀ ದೊಡ್ಡ ಗ್ರಾ.ಪಂ. ಆಗಿದ್ದ ಸೋಮೇಶ್ವರವನ್ನು ಪುರಸಭೆಯಾಗಿ ಮೇಲ್ದರ್ಜೆಗೇರಿಸಿ 2019ರ ಜೂ. 24ರಂದು ರಾಜ್ಯ ಸರಕಾರ ಆದೇಶ ಹೊರಡಿಸಿದೆ. ಈ ಹಿಂದೆ ಗ್ರಾ.ಪಂ. ಇದ್ದಾಗ 20 ವಾರ್ಡ್‌ಗಳಲ್ಲಿ 61 ಸದಸ್ಯ ಬಲವನ್ನು ಹೊಂದಿದ್ದ ಇಲ್ಲಿ ನೂತನ ಪುರಸಭೆಯಲ್ಲಿ 23 ವಾರ್ಡ್‌ಗಳಿಗೆ ಸರಕಾರ ಈಗಾಗಲೇ ಮೀಸಲಾತಿ ಘೋಷಿಸಿ ತಿಂಗಳುಗಳು 8 ಕಳೆಯಿತಾದರೂ ಚುನಾವಣೆ ಮಾತ್ರ ಇನ್ನೂ ನಡೆದಿಲ್ಲ. ಕೋಟೆಕಾರ್‌ ಪಟ್ಟಣ ಪಂಚಾಯತ್‌ ಆಗಿ 2015ರ ಜೂ. 22ರಂದು ಘೋಷಣೆಯಾದರೂ ಇಲ್ಲೂ ಕೂಡ ಚುನಾವಣೆ ಮಾತ್ರ ನಡೆಯಲಿಲ್ಲ. ಮಂಗಳೂರು ತಹಶೀಲ್ದಾರ್‌ ಅವರೇ ಆಡಳಿತಾಧಿಕಾರಿಯಾಗಿದ್ದಾರೆ.

ಇದನ್ನೂ ಓದಿ:“ಕೋವಿಡ್ 2ನೇ ಲಸಿಕೆ ನೀಡುವುದಕ್ಕೆ ಆದ್ಯತೆ ನೀಡಿ’ : ರಾಜ್ಯಕ್ಕೆ ಕೇಂದ್ರ ಸರ್ಕಾರ ಸೂಚನೆ

Advertisement

ಸದ್ಯ ಅಧಿಕಾರಿಗಳ ಆಡಳಿತ!

ಸ್ಥಳೀಯ ಸಂಸ್ಥೆಗಳಾಗಿ ರಚನೆಯಾದ ಬಜಪೆ, ಕಿನ್ನಿಗೋಳಿ, ಕೋಟೆಕಾರು, ಸೋಮೇಶ್ವರ ಪುರಸಭೆಗೆ ಚುನಾವಣೆ ನಡೆಯದ ಕಾರಣದಿಂದ ಇಲ್ಲಿ ಜನಪ್ರತಿನಿಧಿಗಳ ಆಡಳಿತವಿಲ್ಲ. ಬದಲಾಗಿ ಅಧಿಕಾರಿಗಳೇ ಕಾರ್ಯನಿರ್ವಹಿಸುತ್ತಿದ್ದಾರೆ. ಸರಕಾರದಿಂದ ಅನುದಾನ ಬಿಡುಗಡೆವೂ ಆಗಿಲ್ಲ.

ಅಗತ್ಯದ ಸಿಬಂದಿ ಇಲ್ಲ!
ಕಿನ್ನಿಗೋಳಿ, ಬಜಪೆ ಪಟ್ಟಣ ಪಂಚಾಯತ್‌ಗೆ ಈ ಹಿಂದಿನ ಗ್ರಾ.ಪಂ. ಸಿಬಂದಿಯನ್ನೇ ಸದ್ಯಕ್ಕೆ ಮುಂದುವರಿಸಲಾಗಿದೆ. ಉಳಿದಂತೆ ಎಂಜಿನಿಯರ್‌ಗಳ ನೇಮಕವಾಗಿಲ್ಲ. ವಾರ್ಡ್‌ವಾರು ಬಿಲ್‌ ಕಲೆಕ್ಟರ್‌ ನೇಮಕ ನಡೆದಿಲ್ಲ. ರೆವೆನ್ಯೂ ಇನ್‌ಸ್ಪೆಕ್ಟರ್‌, ರೆವೆನ್ಯೂ ಆಫೀಸರ್‌, ಪರಿಸರ ಎಂಜಿನಿಯರ್‌ ಹಾಗೂ ಪೌರ ಕಾರ್ಮಿಕರ ನೇಮಕಾತಿ ಇಲ್ಲಿ ಆಗಿಲ್ಲ. ಬದಲಾಗಿ ನಿಯೋಜನೆ ಮೇಲೆ ಇಲ್ಲಿ ಕೆಲಸ ಮಾಡಲಾಗುತ್ತಿದೆ. ಮಂಗಳೂರು ತಾಲೂಕಿನ ಇತರ ಸ್ಥಳೀಯ ಸಂಸ್ಥೆಯ ಪರಿಸ್ಥಿತಿಯೂ ಇದಕ್ಕೆ ಭಿನ್ನವಾಗಿಲ್ಲ. ಸ್ಥಳೀಯ ಸಂಸ್ಥೆಗಳ ಕಾರ್ಯನಿರ್ವಹಣೆಗೆ ಅತೀ ಅಗತ್ಯದ ಹುದ್ದೆಗಳ ನೇಮಕವಾಗದಿದ್ದರೆ ಒಟ್ಟು ಕಾರ್ಯನಿರ್ವಹಣೆಗೆ ತೊಡಕಾಗುವ ಆತಂಕವೂ ಇದೆ.

ವಾರ್ಡ್‌ ವಿಂಗಡನೆ ಆರಂಭ
ಮಂಗಳೂರು ತಾಲೂಕು ವ್ಯಾಪ್ತಿಗೆ ಒಳಗೊಂಡಂತೆ ಹೊಸದಾಗಿ ರಚನೆಯಾದ ಬಜಪೆ ಹಾಗೂ ಕಿನ್ನಿಗೋಳಿ ಪಟ್ಟಣ ಪಂಚಾಯತ್‌ನಲ್ಲಿ ವಾರ್ಡ್‌ ವಿಂಗಡನೆ ಪ್ರಕ್ರಿಯೆ ಈಗಾಗಲೇ ಆರಂಭವಾಗಿದೆ. ಆಡಳಿತಾಧಿಕಾರಿಗಳ ಮುಖೇನ ಸಾರ್ವಜನಿಕ ಕಾರ್ಯಗಳನ್ನು ನಡೆಸಲಾಗುತ್ತಿದೆ. ವಾರ್ಡ್‌ ರಚನೆಯಾದ ಬಳಿಕ ಸ್ಥಳೀಯ ಸಂಸ್ಥೆ ಚುನಾವಣೆ ನಡೆಯಲಿದೆ.
-ಗುರುಪ್ರಸಾದ್‌, ತಹಶೀಲ್ದಾರ್‌, ಮಂಗಳೂರು

– ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next