Advertisement

Kinnigoli: ಉಪಯೋಗವಿಲ್ಲದೆ ಪಾಳುಬಿದ್ದ ಎಪಿಎಂಸಿ ಕಟ್ಟಡ

03:39 PM Dec 03, 2024 | Team Udayavani |

ಕಿನ್ನಿಗೋಳಿ: ಕಿನ್ನಿಗೋಳಿ ಪಟ್ಟಣ ಪಂಚಾಯತ್‌ ವ್ಯಾಪ್ತಿಯ ಮಲ್ಲಿಗೆಯಂಗಡಿಯಲ್ಲಿ ಸುಮಾರು 6 ವರ್ಷಗಳ ಹಿಂದೆ ಎರಡು ಮಹಡಿಗಳ ಕೃಷಿ ಉತ್ಪನ್ನ ಮಾರುಕಟ್ಟೆ ಕಟ್ಟಡ ನಿರ್ಮಿಸಲಾಗಿತ್ತು. ರೈತರ ಏಳಿಗೆಗಾಗಿ ಸ್ಥಾಪಿಸಲಾದ ಮಾರುಕಟ್ಟೆ ಕಟ್ಟಡವನ್ನು ಇದುವರೆಗೂ ನಿರುಪಯೋಗಿಯಾಗಿಯೇ ಉಳಿದಿದೆ. ಈ ಎಪಿಎಂಸಿ ಕಟ್ಟಡ ನಿರ್ಮಾಣದ ಸಂದರ್ಭ ಸರಿಯಾದ ಯೋಜನೆ ರೂಪಿಸದೇ ಇರುವುದು, ಬಳಿಕ ಕಿನ್ನಿಗೋಳಿ ಪಟ್ಟಣ ಪಂಚಾಯತ್‌ ಆಗಿ ಮೇಲ್ದರ್ಜೆಗೆ ಏರಿದ್ದರಿಂದ ಕಟ್ಟಡ ಅನಾಥ ಸ್ಥಿತಿಯನ್ನು ಎದುರಿಸುತ್ತಿದೆ.

Advertisement

ಕಿನ್ನಿಗೋಳಿ ಪರಿಸರದ ಹೆಚ್ಚಿನ ರೈತರು ತರಕಾರಿ ಬೆಳೆಯುವವರು. ರೈತರು ಬೆಳೆದ ತರಕಾರಿ, ಹಣ್ಣು ಹಂಪಲು ನೇರ ಮಾರುಕಟ್ಟೆಗೆ ತಲುಪಿಸುವ ನಿಟ್ಟಿನಲ್ಲಿ ರೈತರ ಕೃಷಿ ಉತ್ಪನ್ನ ಮಾರುಕಟ್ಟೆ ನಿರ್ಮಾಣವಾಗಿದ್ದರೂ ಅದರ ಉದ್ದೇಶ ಸಫ‌ಲವಾಗಿಲ್ಲ.

ಹಿಂದಿನ ಕಟೀಲು ಗ್ರಾ.ಪಂ. ಕಟ್ಟಡದ ಬಳಿ ಎಪಿಎಂಸಿ ಕಟ್ಟಡ ನಿರ್ಮಾಣವಾಗಿದೆ. ಈ ಜಾಗದಲ್ಲಿ ಹಿಂದೆ ವಾರದ ಸಂತೆ ನಡೆಯುತ್ತಿತ್ತು. ಆದರೆ ಕಟೀಲು ಗ್ರಾಮ ಪಂಚಾಯತ್‌ ಕಿನ್ನಿಗೋಳಿ ಪಟ್ಟಣ ಪಂಚಾಯತ್‌ಗೆ ಸೇರ್ಪಡೆಯಾದ ಬಳಿಕ ಎಪಿಎಂಸಿ ಕಟ್ಟಡವನ್ನು ಮರೆತೇ ಬಿಟ್ಟಿದ್ದಾರೆ. ಈ ನಿರ್ಲಕ್ಷ್ಯ ಎಷ್ಟರಮಟ್ಟಿಗೆ ಎಂದರೆ ಕಟ್ಟಡವನ್ನು ಇನ್ನೂ ಉದ್ಘಾಟನೆಯೂ ಮಾಡಿಲ್ಲ.

ಹೊಸತಾಗಿ ಕಟ್ಟಿದ ಕಟೀಲು ಗ್ರಾ.ಪಂ. ಕಟ್ಟಡವು ನಿರುಪಯೋಗಿ ಯಾಗಬಾರದು ಎಂಬ ದೃಷ್ಟಿಯಿಂದ ಅದನ್ನು ಸಭಾಭವನ ಮಾಡಲಾಯಿತು. ಉಳಿದ ಕೋಣೆಯನ್ನು ಕಟೀಲು ಗ್ರಾಮ ಕರಣಿಕರ ಕಚೇರಿ ಮಾಡಲಾಗಿದೆ. ಆದರೆ, ಎಪಿಎಂಸಿ ಕಟ್ಟಡ ಮಾತ್ರ ಬಳಕೆಯಾಗಲೇ ಇಲ್ಲ.

ಪೊದೆಗಳಿಂದ ಆವರಿಸಿದ ಕಟ್ಟಡ!
ಆರು ವರ್ಷಗಳ ಹಿಂದೆ ನಿರ್ಮಿಸಿದ ಎರಡು ಅಂತಸ್ತಿನ ಕಟ್ಟಡ ನಿಜಕ್ಕೂ ಚೆನ್ನಾಗಿದೆ. ಕಾಮಗಾರಿಯೂ ಉತ್ತಮವಾಗಿದೆ. ಅಲ್ಲಿಗೆ ಹೋಗಲು ಕಾಂಕ್ರೀಟ್‌ ರಸ್ತೆ ಕೂಡ ನಿರ್ಮಾಣವಾಗಿದೆ. ಆದರೆ, ದುರಂತವೆಂದರೆ ಅದನ್ನು ಬಳಕೆ ಮಾಡದೆ ಇರುವುದರಿಂದ ಸಂಪೂರ್ಣ ಮುಳ್ಳು ಪೊದೆ ಆವರಿಸಿಕೊಂಡು ಮುಖ್ಯ ರಸ್ತೆಯಲ್ಲಿ ನಿಂತರೆ ಅಲ್ಲೊಂದು ಕಟ್ಟಡವಿದೆ ಎನ್ನುವುದೂ ಅರಿವಿಗೆ ಬರುವುದಿಲ್ಲ. ಅಷ್ಟರ ಮಟ್ಟಿಗೆ ಪೊದೆ, ಮರಗಳಿಂದ ಮರೆಯಾಗಿದೆ. ಮೇಲಿನ ಮಹಡಿಗೆ ಹೋಗುವ ಏಣಿಯ ತುಂಬ ಮುಳ್ಳು ಪೊದೆ ತುಂಬಿಹೋಗಿದೆ.

Advertisement

ಸರಕಾರದ ಹಣ ಪೋಲು
ಸರಕಾರ ಗ್ರಾಮೀಣ ಪ್ರದೇಶದ ಜನರಿಗೆ ಉಪಯೋಗವಾಗುವ ನಿಟ್ಟಿನಲ್ಲಿ ಹಲವು ಯೋಜನೆಗಳನ್ನು ಪರಿಚಯಿಸಿ ಕಾರ್ಯಗತ ಮಾಡುತ್ತಿದೆ. ಆದರೆ ಅದು ಯಾವ ಹಂತದಲ್ಲಿದೆ, ಸದ್ಬಳಕೆ ಆಗುತ್ತಿದೆಯೇ ಎಂಬ ಪರಾಮರ್ಶೆ ನಡೆಯುತ್ತಿಲ್ಲ. ಅದರಲ್ಲಿ ಆಡಳಿತ ಯಂತ್ರ ಹಾಗೂ ಅಧಿಕಾರಿ ವರ್ಗದ ನಿರ್ಲಕ್ಷ್ಯದ ಪ್ರಮಾಣ ಹೆಚ್ಚೇ ಇದೆ.

-ರಘನಾಥ್‌ ಕಾಮತ್‌ ಕೆಂಚನಕೆರೆ

Advertisement

Udayavani is now on Telegram. Click here to join our channel and stay updated with the latest news.

Next