ಒಂದೂರಿನಲ್ಲಿ ಒಬ್ಬ ರಾಜನಿದ್ದ. ಅವನ ಹೆಸರು ಶಹರ್ಯಾರ್. ರಾಜನಿಗೆ ತನ್ನ ತಮ್ಮ ಶಾಜಮಾನ್ ಎಂದರೆ ಬಲುಪ್ರೀತಿ. ಇಬ್ಬರು ಸಹೋದರಿಯರನ್ನು ನೋಡಿ ಶಹರ್ಯಾರ್ ಮತ್ತು ಶಾಜಮಾನ್ ಮದುವೆಯಾಗುತ್ತಾರೆ. ಆದರೆ, ಆ ಸಹೋದರಿಯರಿಬ್ಬರೂ ದುಷ್ಟರಾಗಿರುತ್ತಾರೆ. ಒಂದು ದಿನ ಶಾಜಮಾನ್‌ನ ಪತ್ನಿ, ತನ್ನ ಪತಿಯನ್ನೇ ಕೊಲೆ ಮಾಡುತ್ತಾಳೆ. ಈ ವಿಚಾರ ಗೊತ್ತಾಗುತ್ತಿದ್ದಂತೆ ರಾಜ ಶಹರ್ಯಾರ್‌ಗೆ ಸಹಿಸಲು ಆಗುವುದಿಲ್ಲ. ಪ್ರೀತಿಯ ತಮ್ಮನನ್ನು ಕಳೆದುಕೊಂಡ ನೋವು ಕಾಡಲಾರಂಭಿಸುತ್ತದೆ. ಆಕ್ರೋಶಭರಿತನಾದ ಶಹರ್ಯಾರ್ ತನ್ನ ತಮ್ಮನ ಕೊಲೆಗೆ ಶಿಕ್ಷೆಯಾಗಿ ಆತನ ಪತ್ನಿಯನ್ನು ಕೊಲ್ಲುವಂತೆ ಆದೇಶಿಸುತ್ತಾನೆ.
ಅದೇ ಸಮಯದಲ್ಲಿ ಆಸ್ಥಾನಕ್ಕೆ ಬಂದ ಹಿರಿಯರನ್ನು ರಾಜ ಶಹರ್ಯಾರ್‌ನ ಪತ್ನಿಯೂ ನಿಂದಿಸಿ, ಅವಮಾನಿಸಿ ಕಳುಹಿಸುತ್ತಾಳೆ. ಮೊದಲೇ ಕೋಪದಲ್ಲಿದ್ದ ರಾಜ ಶಹರ್ಯಾರ್‌ಗೆ ತನ್ನ ಪತ್ನಿಯ ವರ್ತನೆಯಿಂದ ಸಿಟ್ಟು ನೆತ್ತಿಗೇರುತ್ತದೆ. ಆಕೆಯನ್ನೂ ಕೊಲ್ಲುವಂತೆ ಆದೇಶಿಸುತ್ತಾನೆ. ತನ್ನ ಹಾಗೂ ತಮ್ಮನ ಪತ್ನಿಯರನ್ನು ಕೊಂದರೂ, ರಾಜನ ಕೋಪ ಇಳಿಯುವುದಿಲ್ಲ. ಮಹಿಳೆಯರೆಲ್ಲರೂ ಕೆಟ್ಟವರು ಎಂದು ತಿಳಿಯುವ ರಾಜ ಶಹರ್ಯಾರ್, ತನ್ನ ರಾಜ್ಯದಲ್ಲಿದ್ದ ಎಲ್ಲ ಮಹಿಳೆಯರನ್ನೂ ಕೊಲ್ಲುವ ನಿರ್ಧಾರಕ್ಕೆ ಬರುತ್ತಾನೆ. ಪ್ರತಿ ದಿನಕ್ಕೊಬ್ಬ ಯುವತಿಯನ್ನು ಮದುವೆಯಾಗಿ, ಆ ದಿನ ರಾತ್ರಿಯೇ ಅವಳನ್ನು ಕೊಲ್ಲುತ್ತೇನೆ ಎಂದು ಶಪಥ ಮಾಡುತ್ತಾನೆ.
ಮಾರನೇ ದಿನದಿಂದಲೇ ಈ ನರಹತ್ಯೆ ಆರಂಭವಾಗುತ್ತದೆ. ಪ್ರತಿ ದಿನ ಒಬ್ಬಳನ್ನು ಮದುವೆಯಾಗಿ ಕೊಲ್ಲಲು ಶುರುವಿಡುತ್ತಾನೆ. ಹೀಗೇ ದಿನಗಳು ಉರುಳುತ್ತವೆ. ಒಬ್ಬಳು ಯುವತಿ ಹೊರತುಪಡಿಸಿ ರಾಜ್ಯದಲ್ಲಿನ ಉಳಿದ ಎಲ್ಲ ಯುವತಿಯರೂ ಸಾಯುತ್ತಾರೆ. ಉಳಿದಿರುವ ಏಕೈಕ ಯುವತಿಯೆಂದರೆ ಆ ರಾಜ್ಯದ ಮಂತ್ರಿಯ ಮಗಳು ಶಾಹಿತಾ ಬಾನು. ಆಕೆ ಬುದ್ಧಿವಂತೆ ಮತ್ತು ಕಥೆ ಹೇಳುವುದರಲ್ಲಿ ನಿಪುಣೆಯಾಗಿರುತ್ತಾಳೆ.
ಕೊನೆಯದಾಗಿ, ಆಕೆಯ ಸರದಿಯೂ ಬರುತ್ತದೆ. ರಾಜನು ಶಾಹಿತಾ ಬಾನುವನ್ನು ಮದುವೆಯಾಗುತ್ತಾನೆ. ಅಪ್ಪ ಮಂತ್ರಿಯಾಗಿದ್ದ ಕಾರಣ ರಾಜನ ಕೃತ್ಯವನ್ನೆಲ್ಲ ತಿಳಿದುಕೊಂಡಿದ್ದ ಆಕೆ, ಮೊದಲೇ ಒಂದು ಉಪಾಯ ಹೂಡಿರುತ್ತಾಳೆ. ಅಂದು ಮದುವೆಯಾದ ಮೊದಲ ರಾತ್ರಿ. ರಾಜ ಶಹರ್ಯಾರ್ ಮತ್ತು ಪತ್ನಿ ಶಾಹಿತಾ ಕೋಣೆಯೊಳಗೆ ಹೋಗುತ್ತಾರೆ. ಇವಳನ್ನು ಕೊಲೆ ಮಾಡಲು ರಾಜ ಯೋಚಿಸುತ್ತಿರುವಾಗಲೇ, ಆಕೆ, “ದೊರೆಯೇ, ನಾನು ನಿಮಗೊಂದು ಆಸಕ್ತಿದಾಯಕ ಕಥೆ ಹೇಳಲು ಬಯಸುತ್ತೇನೆ. ಆಲಿಸುತ್ತೀರಾ’ ಎಂದು ಕೇಳುತ್ತಾಳೆ. ಅದಕ್ಕೆ ರಾಜ ಒಪ್ಪುತ್ತಾನೆ.
ಶಾಹಿತಾ ಕಥೆ ಹೇಳಲು ಶುರುವಿಟ್ಟುಕೊಳ್ಳುತ್ತಾಳೆ- “ಒಂದಾನೊಂದು ಕಾಲದಲ್ಲಿ ಅಕºರ್ ಎಂಬ ರಾಜನಿದ್ದ. ಅವನಿಗೆ ಮೂವರು ಮಕ್ಕಳು…’ ಹೀಗೆ ಆಕೆ ಕಥೆ ಮುಂದುವರಿಸುತ್ತಾಳೆ. ಕಥೆ ತಡರಾತ್ರಿವರೆಗೆ, ನಂತರ ಮುಂಜಾನೆಯವರೆಗೂ ಮುಂದುವರಿಯುತ್ತದೆ. ಆದರೂ, ಅದು ಮುಗಿಯುವುದಿಲ್ಲ. ಬೆಳಕು ಹರಿಯುತ್ತಿದ್ದಂತೆ ಕಥೆಯನ್ನು ಅರ್ಧಕ್ಕೆ ನಿಲ್ಲಿಸುವ ಶಾಹಿತಾ, “ಓ, ಬೆಳಗಾಯಿತು. ನೀವೀಗ ಆಸ್ಥಾನಕ್ಕೆ ಹೋಗುವ ಸಮಯವಾಯಿತು. ಕಥೆಯನ್ನು ಇವತ್ತು ರಾತ್ರಿ ಮುಂದುವರಿಸುತ್ತೇನೆ’ ಎನ್ನುತ್ತಾಳೆ.
ರಾಣಿ ಶಾಹಿತಾಳನ್ನು ಆಗಲೇ ಕೊಲ್ಲಬೇಕೆಂದು ಅನಿಸಿದರೂ, ಕುತೂಹಲಭರಿತ ಕಥೆಯ ಪೂರ್ಣಭಾಗ ಕೇಳದೇ ಕೊಲ್ಲುವುದು ಬೇಡ ಎಂಬ ನಿರ್ಧಾರಕ್ಕೆ ಶಹರ್ಯಾರ್ ಬರುತ್ತಾನೆ. ಅಂದು ರಾತ್ರಿಯೂ ಶಾಹಿತಾ ತನ್ನ ಕಥೆ ಮುಂದುವರಿಸುತ್ತಾಳೆ, ಮಾರನೇ ದಿನವೂ ಅದನ್ನು ಮುಗಿಸುವುದಿಲ್ಲ. ಇದೇ ರೀತಿ ಹಲವು ತಿಂಗಳುಗಳ ಕಾಲ ಆಕೆ ಅದೇ ಕಥೆಯ ಎಳೆಯನ್ನು ಮುಂದುವರಿಸುತ್ತಾ ಹೋಗುತ್ತಾಳೆಯೇ ಹೊರತು ಅದನ್ನು ಮುಗಿಸುವ ಗೋಜಿಗೆ ಹೋಗುವುದಿಲ್ಲ. ದಿನಗಳು, ತಿಂಗಳುಗಳು ಉರುಳಿದಂತೆ ರಾಜನಿಗೆ ರಾಣಿಯ ಮೇಲೆ ಕ್ರಮೇಣ ಪ್ರೀತಿಯಾಗುತ್ತದೆ.
ಆಕೆಯ ಬಗ್ಗೆ ಏನೋ ಒಂದು ರೀತಿಯ ಅಪ್ಯಾಯಮಾನತೆ ಮೂಡುತ್ತದೆ. ಹೀಗಾಗಿ, ಪ್ರೀತಿಪಾತ್ರಳಾದ ರಾಣಿಯನ್ನು ಕೊಲ್ಲುವುದು ಬೇಡ ಎಂದು ನಿರ್ಧರಿಸುತ್ತಾನೆ. ಶಾಹಿತಾ ತನ್ನ ಜಾಣ್ಮೆಭರಿತ ಕಥೆಯಿಂದ ರಾಜನ ಮನಸ್ಸನ್ನು ಗೆಲ್ಲುತ್ತಾಳೆ. ಕೊನೆಗೆ ರಾಜ ಶಹರ್ಯಾರ್ ಬದಲಾಗಿದ್ದಾನೆ ಎಂಬುದು ಗೊತ್ತಾದೊಡನೆ, ಎಲ್ಲ ಸ್ತ್ರೀಯರೂ ಕೆಟ್ಟವರಲ್ಲ ಎಂಬುದನ್ನು ರಾಜನಿಗೆ ಆಕೆ ಮನವರಿಕೆ ಮಾಡುತ್ತಾಳೆ. ತದನಂದರ ರಾಜ ಶಹರ್ಯಾರ್ ಮತ್ತು ರಾಣಿ ಶಾಹಿತಾ ಒಂದಾಗಿ ಪ್ರೀತಿಯಿಂದ ಬಾಳುತ್ತಾರೆ.
– ಹಲೀಮತ್ ಸ ಅದಿಯಾ