Advertisement

ವಿಐಪಿ ಸಂಸ್ಕೃತಿಗೆ ನೋ ಎಂದ ಸ್ವೀಡನ್ ದೊರೆ ಪರಿವಾರ

10:01 AM Dec 03, 2019 | Hari Prasad |

ನವದೆಹಲಿ: ಸ್ವೀಡನ್ ದೇಶದ ರಾಜಪರಿವಾರಕ್ಕೆ ಸೇರಿದ ದೊರೆ ಕಾರ್ಲ್ ಗುಸ್ತಾಫ್ ಫೋಕ್ ಹ್ಯುಬರ್ಟಸ್ ಮತ್ತು ರಾಣಿ ಸಿಲ್ವಿಯಾ ರೆನಾಟೆ ಸೊಮೆರ್ಲಾತ್ ತಮ್ಮ ಐದು ದಿನಗಳ ಭಾರತ ಭೇಟಿಗಾಗಿ ಇಂದು ನವದೆಹಲಿಗೆ ಆಗಮಿಸಿದರು. ಇದರಲ್ಲಿ ವಿಶೇಷವೇನಿದೆ ಅಂತೀರಾ?

Advertisement

ವಿಶೇಷ ಇದೆ, ಅದೇನೆಂದರೆ ಸ್ವೀಡನ್ ದೇಶದ ಪ್ರತಿಷ್ಠಿತ ರಾಜಮನೆತನಕ್ಕೆ ಸೇರಿರುವ ಈ ದಂಪತಿ ಇಂದು ಭಾರತಕ್ಕೆ ಆಗಮಿಸಲು ಆಯ್ದುಕೊಂಡಿದ್ದು ಏರ್ ಇಂಡಿಯಾ ಸೇವೆಯನ್ನು. ಇಷ್ಟು ಮಾತ್ರವಲ್ಲದೇ ವಿಮಾನ ನಿಲ್ದಾಣದಲ್ಲಿ ಇಳಿದು ತಮ್ಮ ಕಾರಿನ ಬಳಿಗೆ ಹೋಗುವಲ್ಲಿವರೆಗೆ ಈ ರಾಜ ದಂಪತಿ ತಮ್ಮ ಬ್ಯಾಗ್ ಮತ್ತು ಫೈಲ್ ಗಳನ್ನು ಸ್ವತಃ ತಾವೇ ತೆಗದುಕೊಂಡು ಹೋಗಿದ್ದು ಇನ್ನೊಂದು ವಿಶೇಷ.

ದೊರೆ ಕಾರ್ಲ್ ಗುಸ್ತಾಫ್ ಮತ್ತು ರಾಣಿ ಸಿಲ್ವಿಯಾ ಅವರು ತಮ್ಮ ಭಾರತ ಭೇಟಿಯ ಸಂಧರ್ಭದಲ್ಲಿ ರಾಷ್ಟ್ರಪತಿ ರಮಾನಾಥ್ ಕೋವಿಂದ್ ಮತ್ತು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ.


ಸ್ಟಾಕ್ ಹೋಂನಿಂದ ಎಐ168 ವಿಮಾನದಲ್ಲಿ ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಈ ರಾಜ ದಂಪತಿಯನ್ನು ಸಂಸದ ಬಾಬುಲ್ ಸುಪ್ರಿಯೋ ಅವರು ಸ್ವಾಗತಿಸಿದರು. ಯಾವುದೇ ಸಹಾಕರ ನೆರವಿಲ್ಲದೇ ತಮ್ಮ ಲಗೇಜ್ ಗಳನ್ನು ತಾವೇ ತೆಗೆದುಕೊಂಡು ಬರುತ್ತಿರುವ ಫೊಟೋವನ್ನು ಏರ್ ಇಂಡಿಯಾ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡುತ್ತಿದ್ದಂತೆಯೇ ಈ ಟ್ವೀಟ್ ವೈರಲ್ ಆಗಲಾರಂಭಿಸಿತು. ಮಾತ್ರವಲ್ಲದೇ ಈ ರಾಜ ದಂಪತಿಯ ಸರಳ ಮತ್ತು ತಾರಾ ವರ್ಚಸ್ಸು ರಹಿತ ವರ್ತನೆಯೂ ಸಹ ಟ್ಟಿಟ್ಟರ್ ಲೋಕದ ಮೆಚ್ಚುಗೆಗೆ ಪಾತ್ರವಾಗಿದೆ.


ಭಾರತದಲ್ಲಿ ರಾಜಕಾರಣಿಗಳು, ಸಿನಿ ತಾರೆಯರು ಮತ್ತು ಗಣ್ಯ ವ್ಯಕ್ತಿಗಳ ವಿಐಪಿ ಸಂಸ್ಕೃತಿ ವಿರುದ್ಧ ಇತ್ತೀಚಿನ ದಿನಗಳಲ್ಲಿ ಭಾರೀ ಚರ್ಚೆಗಳು ನಡೆಯುತ್ತಿರುವ ಈ ಸಂದರ್ಭದಲ್ಲಿ ಒಂದು ದೇಶದ ರಾಜ ಪರಿವಾರ ಇನ್ನೊಂದು ದೇಶಕ್ಕೆ ಬಂದಿಳಿದಾಗ ತೋರ್ಪಡಿಸಿರುವ ಈ ಸರಳ ವರ್ತನೆ ಭಾರತೀಯ ನೆಟ್ಟಿಗರ ಗಮನ ಸೆಳೆದಿರುವುದು ಮಾತ್ರ ಸುಳ್ಳಲ್ಲ.

Advertisement
Advertisement

Udayavani is now on Telegram. Click here to join our channel and stay updated with the latest news.

Next