ಹೊಸದಿಲ್ಲಿ: ಕೆನಡಾದಲ್ಲಿ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಭಾರತ ಮೂಲದ ಸಿಖ್ ನಾಯಕ ಜಗಮೀತ್ ಸಿಂಗ್, “ಕಿಂಗ್ ಮೇಕರ್’ ಆಗಿ ಹೊರಹೊಮ್ಮಿದ್ದರೂ, ಭಾರತದಲ್ಲಿ ಅವರು ದೇಶ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದರು ಎಂಬ ವಿಚಾರ ಬಹಿರಂಗವಾಗಿದೆ. ಸಿಕ್ಖರ ಪ್ರತ್ಯೇಕ ರಾಷ್ಟ್ರವಾದ “ಖಲಿಸ್ತಾನ್’ ಪರವಾಗಿ ಹೋರಾಡುತ್ತಿರುವ ನಾಯಕರ ಬೆಂಬಲಿಗ ಎಂದು ಭಾರತೀಯ ಗುಪ್ತಚರ ಇಲಾಖೆ ಕಲೆಹಾಕಿರುವ ಮಾಹಿತಿಗಳಿಂದ ತಿಳಿದುಬಂದಿದೆ ಎಂದು ಮೂಲಗಳು ತಿಳಿಸಿವೆ. ಕೆನಡಾದಲ್ಲಿದ್ದರೂ, ಖಲಿಸ್ತಾನ್ ಕನಸನ್ನು ಪೋಷಿಸುತ್ತಿರುವ ಜಗಮೀತ್, ಅಲ್ಲಿಯೇ ಖಲಿಸ್ತಾನ್ ಪರ ಹೋರಾಟಗಾರರಿಗೆ ಆಶ್ರಯ ಕಲ್ಪಿಸಿದ್ದಾರೆ. ಅಲ್ಲದೆ, ಅಮೆರಿಕದಲ್ಲಿ ಭಾರತದ ವಿರುದ್ಧ ಹಲವಾರು ಪ್ರತಿಭಟನೆಗಳಿಗೆ ಸಾಥ್ ಕೊಟ್ಟಿದ್ದಾರೆ. ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಮಾಡಿದ್ದನ್ನೂ ಅವರು ತಮ್ಮ ಬೆಂಬಲಿಗರೊಂದಿಗೆ ಸಾರ್ವಜನಿಕವಾಗಿ ಪ್ರತಿಭಟಿಸಿದ್ದರು. 2013ರಲ್ಲಿ ಕೆನಡಾದ ಒಂಟಾನಿಯೋದಲ್ಲಿ ಭಾರತದ ಬಗ್ಗೆ ಅಪಪ್ರಚಾರ ಮಾಡಲು ಅವರು ಒಂದು ಸಮ್ಮೇಳನ ಆಯೋಜಿಸಿದ್ದಾಗಿನಿಂದ ಜಗಮೀತ್ ಅವರ ಪೂರ್ವಾಪರಗಳನ್ನು ಭಾರತ ಕೆದಕುತ್ತಾ ಬಂದಿದೆ ಎಂದು ಮೂಲಗಳು ಹೇಳಿವೆ.