Advertisement

ಕಿಡ್ನಿ ಕಸಿಗೆ ಕಿಮ್ಸ್‌ ಸಜ್ಜು; ವಾರದೊಳಗೆ ಸೌಲಭ್ಯ

05:48 PM Apr 11, 2022 | Team Udayavani |

ಹುಬ್ಬಳ್ಳಿ: ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವವರಿಗೆ ಕಿಡ್ನಿ ಕಸಿ ಮಾಡುವ ಸೌಲಭ್ಯ ಕಿಮ್ಸ್‌ ಆಸ್ಪತ್ರೆಯಲ್ಲಿ ವಾರದೊಳಗೆ ಲಭ್ಯವಾಗಲಿದ್ದು, ಉತ್ತರ ಕರ್ನಾಟಕ ಭಾಗದ ಬಡ ಮತ್ತು ಮಧ್ಯಮ ವರ್ಗದ ರೋಗಿಗಳಿಗೆ ವರದಾನವಾಗಲಿದೆ.

Advertisement

ಕಿಡ್ನಿ ವೈಫಲ್ಯದಿಂದ ತೊಂದರೆಗೊಳಗಾದ ಬಡ ಮತ್ತು ಮಧ್ಯಮ ವರ್ಗದ ರೋಗಿಗಳು, ವಿಶೇಷವಾಗಿ ಉತ್ತರ ಕರ್ನಾಟಕ ಭಾಗದವರು ಕಸಿ ಮಾಡಿಸಿಕೊಳ್ಳಲು ಬೆಂಗಳೂರಿನಂತಹ ದೂರದ ಆಸ್ಪತ್ರೆಗಳಿಗೆ ತೆರಳಬೇಕಿತ್ತು. ಇನ್ನು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಲಕ್ಷಾಂತರ ರೂ. ಖರ್ಚು ಮಾಡಬೇಕು, ಜೊತೆಗೆ ಅಲೆದಾಡಬೇಕು.

ಹೀಗಾಗಿ ಖರ್ಚು ಮಾಡಲಾಗದೆ, ಸರಿಯಾಗಿ ಚಿಕಿತ್ಸೆ ಪಡೆದುಕೊಳ್ಳಲಾಗದೆ ಸಮಸ್ಯೆಗೊಳಗಾಗಿದ್ದಾರೆ. ಈಗ ಕಿಮ್ಸ್‌ ಆಸ್ಪತ್ರೆಯಲ್ಲೇ ಈ ಸೌಲಭ್ಯ ಸಿಗುವುದರಿಂದ ಆ ತಾಪತ್ರಯವೆಲ್ಲ ದೂರವಾಗಲಿದೆ.

ಬಿಪಿಎಲ್‌, ಆಯುಷ್ಮಾನ್‌ ಕಾರ್ಡ್‌ ಹೊಂದಿದವರು ಪೂರ್ಣ ಉಚಿತವಾಗಿ ಮೂತ್ರಪಿಂಡ ಕಸಿ ಮಾಡಿಸಿಕೊಳ್ಳಬಹುದು. ಅದಕ್ಕಾಗಿ ರಾಜ್ಯ ಸರಕಾರ ಕಿಮ್ಸ್‌ನ ಸುಪರ್‌ ಸ್ಪೆಶಾಲಿಟಿ ಆಸ್ಪತ್ರೆಗೆ ಪರವಾನಗಿ ನೀಡಿದೆ. ಆ ಮೂಲಕ ಕಿಮ್ಸ್‌ ಆಸ್ಪತ್ರೆ ಬೆಂಗಳೂರು ಹೊರತುಪಡಿಸಿ ಕಿಡ್ನಿ ಕಸಿಗೆ ಅನುಮತಿ ಪಡೆದ ಏಕೈಕ ಸರಕಾರಿ ಆಸ್ಪತ್ರೆಯಾಗಿದೆ. ಎಪಿಎಲ್‌ ಕಾರ್ಡ್‌ ಇದ್ದವರು ಚಿಕಿತ್ಸೆಗಾಗಿ ಸರಕಾರಕ್ಕೆ ಶೇ.70 ಖರ್ಚು ಭರಿಸಬೇಕಾಗುತ್ತದೆ. ಕಿಮ್ಸ್‌ನ ಸುಪರ್‌ ಸ್ಪೆಶಾಲಿಟಿ ಆಸ್ಪತ್ರೆಯ ಮೂತ್ರಪಿಂಡ ವಿಭಾಗದಲ್ಲಿ ಕಸಿ ಪ್ರಕ್ರಿಯೆ ನಡೆಸಲು ನೆಫ್ರಾಲಜಿ, ಯುರೋಲಜಿ ವೈದ್ಯರನ್ನೊಳಗೊಂಡ ನುರಿತ ತಂಡವಿದೆ.ಮುಂದುವರಿದ ವೈದ್ಯಕೀಯ ಯಂತ್ರಗಳು ಹಾಗೂ ಉಪಕರಣಗಳನ್ನು ಆಸ್ಪತ್ರೆಯಲ್ಲಿ ಅಳವಡಿಸಲಾಗಿದೆ.

ಎಲ್ಲರಿಗೂ ಕಸಿ ಮಾಡುವಂತಿಲ್ಲ: ಮೂತ್ರಪಿಂಡ ವೈಫಲ್ಯವಾಗಿದೆ ಎಂದು ಎಲ್ಲ ರೋಗಿಗಳಿಗೂ ಕಿಡ್ನಿ ಕಸಿ ಮಾಡುವಂತಿಲ್ಲ. ವೈದ್ಯಕೀಯ, ಕಾನೂನು ಮತ್ತು ಆಡಳಿತಾತ್ಮಕ ಅನುಭವಿಕರ ಸಮಿತಿ ರೋಗಿಯ ಸ್ಥಿತಿ, ಪೂರಕ ದಾಖಲೆಗಳನ್ನು ಕೂಲಂಕಷವಾಗಿ ಪರಿಶೀಲನೆಗೊಳಪಡಿಸುತ್ತದೆ. ಆತ ಕಿಡ್ನಿ ಕಸಿಗೆ ಅರ್ಹವೆಂದು ಪ್ರಮಾಣೀಕರಿಸಿದ ಮೇಲೆಯೇ ಕಸಿ ಪ್ರಕ್ರಿಯೆ ನಡೆಯುತ್ತದೆ. ರೋಗಿಯ ಹತ್ತಿರದ ಸಂಬಂಧಿಕರು, ದೂರದ ಸಂಬಂಧಿಕರು ಕೊಡಲು ಒಪ್ಪಿದರೆ ಅದಕ್ಕೆ ಆದ್ಯತೆ ನೀಡಲಾಗುತ್ತದೆ.

Advertisement

ಸಂಬಂಧಿಕರಲ್ಲಿ ಯಾರದ್ದೂ ಸಿಗದಿದ್ದರೆ ಸರಕಾರದ ಜೀವ ಸಾರ್ಥಕತೆ ಪೋರ್ಟಲ್‌ನಲ್ಲಿ ಹೆಸರು ನೋಂದಾಯಿಸಬೇಕಾಗುತ್ತದೆ. ಆಗ ಅದಕ್ಕೆ ಸಂಬಂಧಿಸಿದ ಸಮಿತಿಯವರು ರೋಗಿಯ ಸ್ಥಿತಿಗತಿ ನೋಡಿಕೊಂಡು ಮತ್ತು ಯಾವ ರೋಗಿಗೆ ಅತೀ ಅವಶ್ಯಕತೆ ಇದೆಯೋ ಅವರಿಗೆ ಆದ್ಯತೆ ಮೇರೆಗೆ ಕಿಡ್ನಿ ಹಂಚಿಕೆ ಮಾಡುತ್ತಾರೆ. ಇಲ್ಲವೆ ಸರದಿ ಪ್ರಕಾರ ಹೆಸರು ನೋಂದಾಯಿಸಿದವರಿಗೆ ಹಂಚಿಕೆ ಮಾಡುತ್ತಾರೆ. ಅದು ದೊರೆತಾಗ ರೋಗಿಗಳು ಆಸ್ಪತ್ರೆಗೆ ತೆರಳಿ ಕಿಡ್ನಿ ಕಸಿ ಮಾಡಿಸಿಕೊಳ್ಳಬಹುದು. ಕಿಡ್ನಿಯನ್ನು 18ರಿಂದ 60 ವರ್ಷದೊಳಗಿನ ಆರೋಗ್ಯವಂತರು ಕೊಡಬಹುದು.

ಚಿಕಿತ್ಸೆಗೆ ಬರುವವರೆಷ್ಟು?
ಮೂತ್ರಪಿಂಡ ವೈಫಲ್ಯದಿಂದ ಕಿಮ್ಸ್‌ಗೆ ಪ್ರತಿ ತಿಂಗಳು 20-25 ರೋಗಿಗಳು ದಾಖಲಾಗುತ್ತಿದ್ದಾರೆ. ಪ್ರತಿ ತಿಂಗಳು 1 ಸಾವಿರ ಡಯಾಲಿಸಿಸ್‌ ಮಾಡಲಾಗುತ್ತಿದೆ. ಪ್ರತಿ ತಿಂಗಳು 500ಕ್ಕೂ ಹೆಚ್ಚು ಜನರು ಹೊರ ರೋಗಿಗಳಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಿಮ್ಸ್‌ನ ಮೂತ್ರಪಿಂಡ ಶಾಸ್ತ್ರ (ನೆಫ್ರಾಲಜಿ) ವಿಭಾಗದಲ್ಲಿ 20 ಹಾಸಿಗೆಗಳಿದ್ದು, ಎಲ್ಲವೂ ಭರ್ತಿಯಾಗಿರುತ್ತವೆ. ಕಿಡ್ನಿಗೆ ಸಂಬಂಧಿಸಿ ಔಷಧ ವಿಭಾಗದಲ್ಲೂ 60 ರೋಗಿಗಳು ದಾಖಲಾಗಿದ್ದಾರೆ. 30 ಡಯಾಲಿಸಿಸ್‌ ಯಂತ್ರಗಳಿವೆ.
ನೆಫ್ರಾಲಜಿ ವಿಭಾಗದಲ್ಲಿ ನಾಲ್ಕು ಹಾಗೂ ನರಶಾಸ್ತ್ರ ವಿಭಾಗದಲ್ಲಿ ಆರು ಜನ ನುರಿತ ತಜ್ಞ ವೈದ್ಯರು ಇದ್ದಾರೆ.

ರೋಗಿಗೆ ಉಚಿತವಾಗಿ ಕಿಡ್ನಿ ಕಸಿ ಮಾಡಲು ಎಬಿಆರ್‌ಕೆ ಅನುಮೋದನೆ ಕೂಡ ದೊರೆತಿದೆ. ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದವರು ತಮಗೆ ಕಿಡ್ನಿಯ ಅವಶ್ಯಕತೆಯಿದ್ದರೆ ಸರಕಾರದ ಜೀವ ಸಾರ್ಥಕತೆ ಪೋರ್ಟಲ್‌ನಲ್ಲಿ ಹೆಸರು ನೋಂದಾಯಿಸಬೇಕೆಂದರೂ ಅವರಿಗೆ ಎಸ್‌ಡಿಎಂ, ಕೆಎಲ್‌ಇ ಸುಚಿರಾಯು, ತತ್ವದರ್ಶ ಆಸ್ಪತ್ರೆಯಲ್ಲಿ ಮಾತ್ರ ಈ ಸೌಲಭ್ಯವಿತ್ತು. ಈಗ ಕಿಮ್ಸ್‌ನಲ್ಲೂ ಆ ಅವಕಾಶ ದೊರೆಯಲಿದೆ. ಡಾ| ವೆಂಕಟೇಶ ಮೊಗೇರ, ನೆಫ್ರಾಲಜಿ ವಿಭಾಗದ ಮುಖ್ಯಸ್ಥ

ಬಿಪಿಎಲ್‌ ಮತ್ತು ಆಯುಷ್ಮಾನ್‌ ಭಾರತ ಕಾರ್ಡ್‌ ಹೊಂದಿದವರಿಗೆ ಉಚಿತವಾಗಿ ಚಿಕಿತ್ಸೆ ಒದಗಿಸಲು ಆಯುಷ್ಮಾನ್‌ ಭಾರತ ಯೋಜನೆಯ ಕೋಡ್‌ ಅವಶ್ಯ. ಈ ನಿಟ್ಟಿನಲ್ಲಿ ಆಯುಷ್ಮಾನ್‌ ಭಾರತ ಕೋಡ್‌ಗಾಗಿ ಅರ್ಜಿ ಸಲ್ಲಿಸಲಾಗಿತ್ತು. ಅದರ ಕೋಡ್‌ (ಸಂಕೇತ) ದೊರೆತಿದೆ. ಗುರುವಾರದೊಳಗೆ ಕಿಡ್ನಿ ಕಸಿ ಆರಂಭಿಸಲಾಗುವುದು. ಜೊತೆಗೆ ಈ ಕೋಡ್‌  ಸಿಕ್ಕಿರುವುದರಿಂದ ಕಿಡ್ನಿ ಬೇಕೆಂದವರು ರಾಜ್ಯ ಸರಕಾರದ ಜೀವ ಸಾರ್ಥಕತೆ ಪೋರ್ಟಲ್‌ನಲ್ಲಿ ಹೆಸರು ದಾಖಲು ಮಾಡಲು ಅನುಕೂಲವಾಗುತ್ತದೆ. ಈ ಪೋರ್ಟಲ್‌ ಸೆಟಪ್‌ ಆಗಿದೆ.
ಡಾ| ರಾಮಲಿಂಗಪ್ಪ ಅಂಟರತಾನಿ,
ಕಿಮ್ಸ್‌ ನಿರ್ದೇಶಕ

ಶಿವಶಂಕರ ಕಂಠಿ

Advertisement

Udayavani is now on Telegram. Click here to join our channel and stay updated with the latest news.

Next