ದಕ್ಷಿಣ ಕೊರಿಯಾ: ದಕ್ಷಿಣ ಕೊರಿಯಾದ ವಿಡಿಯೋಗಳನ್ನು ವೀಕ್ಷಿಸಿದ್ದಕ್ಕಾಗಿ ಮತ್ತು ಅದನ್ನು ಹಂಚಿಕೊಂಡ ಆರೋಪದಲ್ಲಿ ಉತ್ತರ ಕೊರಿಯಾ ಕಳೆದ ಮೂರು ವರ್ಷಗಳಲ್ಲಿ ಏಳು ಮಂದಿಯನ್ನು ಸಾರ್ವಜನಿಕವಾಗಿ ಗಲ್ಲಿಗೇರಿಸಿದೆ ಎಂದು ಮಾನವ ಹಕ್ಕುಗಳ ಸಂಘಟನೆ ತಿಳಿಸಿದೆ.
ಇದನ್ನೂ ಓದಿ:ಫೆ.11ರಂದು ತೆರೆ ಕಾಣಲಿದೆ ಶ್ರೀನಿ, ಅದಿತಿ ಪ್ರಭುದೇವ ನಟನೆಯ “ಓಲ್ಡ್ ಮಾಂಕ್”
ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಆದೇಶದಂತೆ ಏಳು ಮಂದಿಯನ್ನು ಸಾರ್ವಜನಿಕವಾಗಿ ಗಲ್ಲಿಗೇರಿಸಲಾಗಿತ್ತು ಎಂದು ಮಾನವ ಹಕ್ಕು ಸಂಘಟನೆ ಆರೋಪಿಸಿದೆ.
ಸಿಯೋಲ್ ಮೂಲದ ಮಾನವ ಹಕ್ಕು ಸಂಘಟನೆ, ಟ್ರಾನ್ಸಿಷನಲ್ ಜಸ್ಟೀಸ್ ವರ್ಕಿಂಗ್ ಗ್ರೂಪ್ ಸುಮಾರು ಕಳೆದ ಆರು ವರ್ಷಗಳಲ್ಲಿ ದೇಶ ತೊರೆದ 683 ಉತ್ತರ ಕೊರಿಯಾದ ಪ್ರಜೆಗಳ ಸಂದರ್ಶನ ನಡೆಸಿದ್ದು, ಒಟ್ಟು ಆರು ವರ್ಷದಲ್ಲಿ 27 ಮಂದಿಯನ್ನು ಹತ್ಯೆಗೈಯಲಾಗಿದೆ ಎಂದು ತಿಳಿಸಿದೆ.
ಇದರಲ್ಲಿ ಬಹುತೇಕರು ಡ್ರಗ್ಸ್, ವೇಶ್ಯಾವಾಟಿಕೆ ಹಾಗೂ ಮಾನವ ಕಳ್ಳಸಾಗಣಿಕೆ ಆರೋಪಿಗಳಾಗಿದ್ದು, ಹಲವರನ್ನು ಗುಂಡಿಕ್ಕಿ ಕೊಲ್ಲಲಾಗಿದ್ದು, ಇನ್ನುಳಿದವರನ್ನು ನೇಣಿಗೆ ಏರಿಸಲಾಗಿತ್ತು ಎಂದು ವರದಿ ವಿವರಿಸಿದೆ.
ಕಾನೂನು ಬಾಹಿರವಾಗಿ ದಕ್ಷಿಣ ಕೊರಿಯಾದ ಸಿ.ಡಿಗಳನ್ನು, ಸಿನಿಮಾ, ಸಂಗೀತದ ಸಿ.ಡಿ ಮಾರಾಟ ಮಾಡಿದ ಆರೋಪದ ಮೇಲೆ ಉತ್ತರ ಕೊರಿಯಾದ ಅಧಿಕಾರಿಗಳು ಬಹಿರಂಗವಾಗಿ ಏಳು ಮಂದಿಯನ್ನ ಗಲ್ಲಿಗೇರಿಸಿರುವುದಾಗಿ ದಕ್ಷಿಣ ಕೊರಿಯಾ ಮೂಲದ ಆನ್ ಲೈನ್ ಪತ್ರಿಕೆ ಡೈಲಿ ಎನ್ ಕೆ ವರದಿ ಮಾಡಿದೆ.
ಮಾನವ ಹಕ್ಕು ಉಲ್ಲಂಘನೆ ಎಂಬುದಾಗಿ ಅಂತಾರಾಷ್ಟ್ರೀಯ ಸಮುದಾಯ ಆರೋಪಿಸಿ ಒತ್ತಡ ಹೇರಿದ ನಂತರ ಉತ್ತರ ಕೊರಿಯಾ ಮರಣದಂಡನೆ ವಿಧಿಸುತ್ತಿದ್ದರೂ ಕೂಡಾ ಅದರ ಮಾಹಿತಿ ಹೊರ ಬೀಳುತ್ತಿಲ್ಲ ಎಂದು ವರದಿ ಹೇಳಿದೆ.