ಬೆಂಗಳೂರು: ಇತ್ತೀಚೆಗೆ ಕೋರಮಂಗಲ ಪೇಯಿಂಗ್ ಗೆಸ್ಟ್‌ಗೆ ನುಗ್ಗಿ ತನ್ನ ಪ್ರೀತಿಗೆ ಅಡ್ಡಿಯಾಗಿದ್ದ ಪ್ರೇಯಸಿಯ ಸ್ನೇಹಿತೆಯನ್ನು ಬರ್ಬರವಾಗಿ ಹತ್ಯೆಗೈದಿದ್ದ ಪ್ರಕರಣ ಸಂಬಂಧ ತನಿಖೆ ಪೂರ್ಣ ಗೊಳಿಸಿರುವ ಕೋರ ಮಂಗಲ ಠಾಣೆ ಪೊಲೀಸರು, ಶನಿವಾರ 39ನೇ ಎಸಿಎಂಎಂ ಕೋರ್ಟ್‌ಗೆ ಆರೋಪಪಟ್ಟಿ ಸಲ್ಲಿಸಿದ್ದಾರೆ. ಈ ಮೂಲಕ ಭಾರತೀಯ ನ್ಯಾಯ ಸಂಹಿತಾ(ಬಿಎನ್‌ಎಸ್) ಕಾಯ್ದೆ ಅಡಿಯಲ್ಲಿ ದಾಖಲಾಗಿರುವ ಪ್ರಕರಣದಲ್ಲಿ ನಗರ ಪೊಲೀಸರು ಮೊದಲ ಆರೋಪಪಟ್ಟಿ ಸಲ್ಲಿಸಿದ್ದಾರೆ.
ಜುಲೈ 23ರಂದು ಬಿಹಾರ ಮೂಲದ ಕೃತಿ ಕುಮಾರಿಯನ್ನು ಮಧ್ಯಪ್ರದೇಶ ಮೂಲದ ಆರೋಪಿ ಅಭಿಷೇಕ್ ಆಕೆಯ ಪಿಜಿಗೆ ನುಗ್ಗಿ ಕತ್ತು ಕೊಯ್ದು ಹತ್ಯೆಗೈದಿದ್ದ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಕೋರಮಂಗಲ ಠಾಣೆ ಪೊಲೀಸರು, ಆರೋಪಿಯನ್ನು ಬಂಧಿಸಿ, ಪ್ರಕರಣ ನಡೆದು 40 ದಿನಗಳೊಳಗೆ ಸುಮಾರು 1205 ಪುಟಗಳ 85 ಸಾಕ್ಷಿಗಳ ಹೇಳಿಕೆಯನ್ನು ಉಲ್ಲೇಖೀಸಿ ಆರೋಪಪಟ್ಟಿ ಸಲ್ಲಿಸಿದ್ದಾರೆ. ತನ್ನ ಪ್ರೇಯಸಿ ಜತೆ ಮದುವೆಯಾಗಲು ಕೃತಿ ಅಡ್ಡಿಪಡಿಸಿದ್ದಳು ಎಂಬ ಉದ್ದೇಶದಿಂದಲೇ ಅಭಿಷೇಕ್ ಆಕೆಯನ್ನು ಕತ್ತುಕೊಯ್ದು ಹತ್ಯೆಗೈದಿದ್ದಾನೆ ಎಂದು ಆರೋಪಪಟ್ಟಿಯಲ್ಲಿ ಉಲ್ಲೇಖೀಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಏನಿದು ಪ್ರಕರಣ?: ಬಿಹಾರ ಮೂಲದ ಕೃತಿ ಕುಮಾರಿ, ಕಳೆದ ನಾಲ್ಕೈದು ವರ್ಷಗಳಿಂದ ಬೆಂಗಳೂ ರಿನಲ್ಲೇ ವಾಸವಾಗಿದ್ದು, ನಗರದ ಕಾಲೇಜೊಂದರಲ್ಲಿ ಎಂಬಿಎ ಪದವಿ ಪಡೆದುಕೊಂಡಿದ್ದಾರೆ. ಕೆಲ ತಿಂಗಳಿಂದ ನಗರದ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಳು. ಇದೇ ಕಂಪನಿಯಲ್ಲಿ ಕೆಲ ಮಾಡುತ್ತಿದ್ದ ಮಧ್ಯಪ್ರದೇಶ ಮೂಲದ ಯುವತಿಯ ಪರಿಚಯವಾಗಿದೆ. ಬಳಿಕ ಇಬ್ಬರು ಕೆಲ ದಿನಗಳ ಹಿಂದಷ್ಟೇ ವಿ.ಆರ್.ಲೇಔಟ್‌ನಲ್ಲಿರುವ ಪಿಜಿಗೆ ಬಂದು ವಾಸವಾಗಿದ್ದರು. ಇಲ್ಲಿಂದಲೇ ಕೆಲಸಕ್ಕೆ ಹೋಗುತ್ತಿದ್ದರು. ಕೊಲೆಯಾದ ಕೃತಿ ಸ್ನೇಹಿತೆ ಮತ್ತು ಆರೋಪಿ ಪ್ರೀತಿಸುತ್ತಿದ್ದರು. ಆದರೆ, ಆರೋಪಿ ಕೆಲಸಕ್ಕೆ ಹೋಗುತ್ತಿರಲಿಲ್ಲ. ಈ ವಿಚಾರ ತಿಳಿದ ಕೃತಿ ತನ್ನ ಸ್ನೇಹಿತೆಗೆ ಈ ವಿಚಾರ ತಿಳಿಸಿದ್ದಳು. ಈ ನಡುವೆ ಕೆಲ ದಿನಗಳ ಹಿಂದೆ ಪಿಜಿ ಸಮೀಪದಲ್ಲೇ ಪ್ರೇಮಿಗಳ ನಡುವೆ ಜಗಳವಾಗಿದೆ. ಈ ವೇಳೆ ಕೃತಿ ಕೂಡ ಸ್ಥಳದಲ್ಲಿದ್ದು ಜಗಳ ಬಿಡಿಸಿದ್ದಾಳೆ. ಅಲ್ಲದೆ, ಕೃತಿ, ತನ್ನ ಸ್ನೇಹಿತೆಗೆ, ಈ ರೀತಿ ಅಸಭ್ಯ ವರ್ತನೆ ತೋರುವ ಯುವಕನ ಮದುವೆ ಆಗದಂತೆ ಸಲಹೆ ನೀಡಿದ್ದಳು. ಈ ವಿಚಾರ ತಿಳಿದ ಆರೋಪಿ, ಜುಲೈ 23ರಂದು ಸುಮಾರು 11.30ರ ಸುಮಾರಿಗೆ 3ನೇ ಮಹಡಿಯಲ್ಲಿರುವ ಕೃತಿ ಕೋಣೆಗೆ ಹೋಗಿ ಏಕಾಏಕಿ ಆಕೆಯ ಕತ್ತನ್ನು ಎರಡ್ಮೂರು ಬಾರಿ ಕೊಯ್ದು ಹತ್ಯೆಗೈದು ಪರಾರಿಯಾಗಿದ್ದ. ಜುಲೈ 26ರಂದು ಆರೋಪಿ ಅಭಿಷೇಕ್‌ನನ್ನು ಬಂಧಿಸಲಾಗಿತ್ತು.