Advertisement

ಪ್ರಾಣಿ ಬಲಿ ಕಾನೂನು ಬಾಹಿರ: ದಯಾನಂದ ಸ್ವಾಮೀಜಿ

04:16 PM Mar 20, 2022 | Team Udayavani |

ಚಳ್ಳಕೆರೆ: ಪ್ರತಿ ವರ್ಷ ನಾಯಕನಹಟ್ಟಿ ಗುರು ತಿಪ್ಪೇರುದ್ರಸ್ವಾಮಿ ರಥೋತ್ಸವದ ನಂತರ ಭಕ್ತರು ಸಂಪ್ರದಾಯವೆಂದು ಹೇಳಿ ಪ್ರಾಣಿ ಬಲಿ ಮಾಡುತ್ತಿರುವುದು ಕಾನೂನು ಬಾಹಿರ. ಜಿಲ್ಲಾಡಳಿತ ಕೂಡಲೇ ಪ್ರಾಣಿ ಬಲಿಯನ್ನು ತಡೆಯಬೇಕೆಂದು ವಿಶ್ವ ಪ್ರಾಣಿ ಕಲ್ಯಾಣ ಮಂಡಳಿಯ ರಾಜ್ಯಾಧ್ಯಕ್ಷ ದಯಾನಂದ ಸ್ವಾಮೀಜಿ ಒತ್ತಾಯಿಸಿದರು.

Advertisement

ಶನಿವಾರ ಇಲ್ಲಿನ ತಾಲೂಕು ಕಚೇರಿ ಆವರಣದಲ್ಲಿ ನಡೆದ ಜಾಗೃತಿ ಜಾಥಾ ಸಂದರ್ಭದಲ್ಲಿ ಅವರು ಮಾತನಾಡಿದರು. ಪ್ರತಿ ವರ್ಷ ನಾಯಕನಹಟ್ಟಿ ಹಾಗೂ ಗೌರಸಮುದ್ರ ಜಾತ್ರೆಯಂದು ವಿಶ್ವ ಪ್ರಾಣಿ ಕಲ್ಯಾಣಮಂಡಳಿ ವತಿಯಿಂದ ಪ್ರಾಣಿ ಬಲಿ ತಡೆಯುವ ನಿಟ್ಟಿನಲ್ಲಿ ಜಾಥಾ ನಡೆಸಲಾಗುತ್ತಿದೆ. ಸಾರ್ವಜನಿಕರು ಈ ಕಾರ್ಯಕ್ಕೆ ಸಹಕರಿಸಬೇಕು ಎಂದರು.

ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದ ತಹಶೀಲ್ದಾರ್‌ ಎನ್‌. ರಘುಮೂರ್ತಿ, ಜಿಲ್ಲಾಧಿಕಾರಿಗಳ ಸೂಚನೆಯಂತೆ ದೇವಸ್ಥಾನದ ಮೂರು ಕಿಮೀ ವ್ಯಾಪ್ತಿಯಲ್ಲಿ ಪ್ರಾಣಿ ಬಲಿ ನಿಷೇಧಿಸಲಾಗಿದೆ. ಈಗಾಗಲೇ ಇದಕ್ಕೆ ಸಂಬಂಧಪಟ್ಟಂತೆ ಸಾರ್ವಜನಿಕವಾಗಿ ಮನವಿ ಸಹ ಮಾಡಲಾಗಿದೆ. ನಾಯಕನಹಟ್ಟಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಟಾಂಟಾಂ ಮೂಲಕ ಜಾಗೃತಿ ಮೂಡಿಸಲಾಗಿದೆ ಎಂದು ತಿಳಿಸಿದರು.

ಡಿವೈಎಸ್ಪಿ ಕೆ.ವಿ. ಶ್ರೀಧರ್‌ ಮಾತನಾಡಿ, ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಈಗಾಗಲೇ ಪೋಸ್ಟರ್‌ ಗಳನ್ನು ಹಾಕಿ ಪ್ರಾಣಿ ಬಲಿ ನೀಡದಂತೆ ಭಕ್ತರಲ್ಲಿ ಮನವಿ ಮಾಡಲಾಗಿದೆ. ಪೊಲೀಸ್‌ ಇಲಾಖೆ ಜಾಗೃತವಾಗಿದ್ದು, ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆ ನಡೆಸಿ ವಾಹನಗಳನ್ನು ಬಿಡಲಾಗುತ್ತಿದೆ. ದೇವಸ್ಥಾನದ ಸುತ್ತಮುತ್ತ ಬಂದೋಬಸ್ತ್ ಏರ್ಪಡಿಸಿದ್ದು, ಪ್ರಾಣಿ ಬಲಿಗೆ ಯತ್ನಿಸಿದವರಿಗೆ ಕಾನೂನು ಕ್ರಮದ ಎಚ್ಚರಿಕೆ ನೀಡಲಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next