ಧಾರವಾಡ: ಕಿಲ್ಲರ್ ಕಟ್ಟಡ ದುರಂತ ಪ್ರಕರಣದ ವಿಚಾರಣೆ ಕೈಗೊಂಡಿರುವ ಡಿಸಿ ದೀಪಾ ಚೋಳನ್ ಅವರು ಅಮಾನತುಗೊಂಡ ಮಹಾನಗರ ಪಾಲಿಕೆ ಅಧಿಕಾರಿಗಳ ವಿಚಾರಣೆಯನ್ನು ಶುಕ್ರವಾರ ಕೈಗೊಂಡರು.
ಏಳು ಜನ ಅಧಿಕಾರಿಗಳ ಪೈಕಿ ನಗರ ಯೋಜಕ ಮುಕುಂದ ಜೋಶಿ, ಸಹಾಯಕ ನಿರ್ದೇಶಕ ಅಶೋಕ ಗದಗ ಅವರ ವಿಚಾರಣೆ ಕೈಗೊಳ್ಳಲಾಯಿತು. ಬಿ.ವಿ. ಹಿರೇಮಠ ಎನ್ನುವವರು ವಿಚಾರಣೆಗೆ ಹಾಜರಾಗಿರಲಿಲ್ಲ.
ಅಧಿಕಾರಿಗಳಿಂದ ಸಮರ್ಪಕ ಉತ್ತರ ಸಿಗದ ಕಾರಣ ಅವರಿಗೆ ಬಿಸಿ ಮುಟ್ಟಿಸಿದ ದೀಪಾ, ವಿಚಾರಣೆ ನಡೆಸಿ ಮಾಹಿತಿ ಸಂಗ್ರಹಿಸಿದರು. ನಿರ್ಮಾಣ ಪೂರ್ವದಲ್ಲಿ ಕಟ್ಟಡಕ್ಕೆ ಯಾವುದೇ ನಿರಾಕ್ಷೇಪಣಾ ಪತ್ರ ಪಡೆದಿರುವುದಿಲ್ಲ ಎಂದು ಪಾಲಿಕೆ ಅಧಿಕಾರಿಗಳು ಮಾಹಿತಿ ನೀಡಿದರು. ಕಟ್ಟಡ ಪೂರ್ಣಗೊಳ್ಳದೇ ಅಲ್ಲಿ ಮಳಿಗೆ ಆರಂಭಿಸಲು ಪರವಾನಗಿ ಹೇಗೆ ನೀಡಲಾಯಿತು ಎಂಬ ಡಿಸಿ ಪ್ರಶ್ನೆಗಳಿಗೆ ಅಧಿಕಾರಿಗಳಿಂದ ಸಮರ್ಪಕ ಉತ್ತರ ಲಭಿಸಲಿಲ್ಲ.
ಪ್ರಶ್ನೆಗಳ ಸುರಿಮಳೆ: ಮುಕುಂದ ಜೋಶಿ ಮೇಲೆ ಜಿಲ್ಲಾಧಿಕಾರಿಗಳು ಪ್ರಶ್ನೆಗಳ ಸುರಿಮಳೆಗೈದರು. ಕೆಲವು ಕಠಿಣ ಪ್ರಶ್ನೆಗಳಿಗೆ ಹಾರಿಕೆ ಉತ್ತರ ಕೊಟ್ಟಿದ್ದು ಜಿಲ್ಲಾಧಿಕಾರಿ ದೀಪಾ ಚೋಳನ್ ಅವರ ಕೋಪಕ್ಕೆ ಕಾರಣವಾಯಿತು. ಕೂಡಲೇ ಅವರನ್ನು ತರಾಟೆಗೆ ತೆಗೆದುಕೊಂಡ ಡಿಸಿ, ನೀವು ನಿಮ್ಮ ಕಚೇರಿಗೆ ಕೆಲಸಕ್ಕೆ ಬರುವವರ ಬಳಿ ನಡೆದುಕೊಂಡಂತೆ ಇಲ್ಲಿ ನಡೆದುಕೊಳ್ಳಬೇಡಿ. ಸ್ವಲ್ಪ ಗಂಭೀರವಾಗಿ ವಿಚಾರಣೆ ಎದುರಿಸಿ. ಗಂಭಿರವಾಗಿ ಉತ್ತರ ಕೊಡುವುದನ್ನು ಕಲಿತುಕೊಳ್ಳಿ. ಇಲ್ಲವಾದರೆ ನಿಮ್ಮನ್ನು ನೇರ ಶಿಕ್ಷೆಗೆ ಗುರಿಪಡಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.