ರಾಣಿಬೆನ್ನೂರ: ಮಕ್ಕಳಿಗೆ ನೀತಿ ಕಥೆ, ನಾಟಕ, ಸಂಗೀತ, ನೃತ್ಯ, ಜಾನಪದ ಹಾಡುಗಳು ಸೇರಿದಂತೆ ವಿವಿಧ ಮನರಂಜನೀಯ ಕಲೆಗಳನ್ನು ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ಕಲಿಸಲಾಗುವುದು. ರಜಾ ದಿನವನ್ನು ಮಕ್ಕಳು ಸಂತೋಷದಿಂದ ಕಳೆಯಬೇಕು ಎಂಬುದು ಸಂಸ್ಥೆಯ ಉದ್ದೇಶ ಎಂದು ಜೆಸಿಐ ಅಧ್ಯಕ್ಷೆ ಪುಷ್ಪಾ ಬಾದಾಮಿ ಹೇಳಿದರು.
ಸೋಮವಾರ ಇಲ್ಲಿನ ಗೌರಿಶಂಕರ ನಗರದ ಗೌರಿಶಂಕರ ದೇವಸ್ಥಾನದಲ್ಲಿ ಜೆಸಿಐ ಸಂಸ್ಥೆಯ ವತಿಯಿಂದ ಏರ್ಪಡಿಸಿದ್ದ ಮಕ್ಕಳ ಬೇಸಿಗೆ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳ ಶೈಕ್ಷಣಿಕ ಅಭಿವೃದ್ಧಿ ಪೂರಕವಾಗಿ ಶಿಬಿರ ನಡೆಸಲಾಗುವುದು ಎಂದರು.
ಶಾಲೆಗಳಲ್ಲಿ ಮಕ್ಕಳು ರೋಬೋಟ್‌ಗಳಂತಾಗಿ ಹೊರಗಿನ ಪ್ರಪಂಚದ ಜ್ಞಾನದಿಂದ ವಂಚಿತರಾಗುತ್ತಾರೆ. ಅದರಿಂದ ಅವರನ್ನು ಹೊರತಂದು ಸಂತಸಮಯದ ವಾತಾವರಣ ನಿರ್ಮಿಸಲಾಗುವುದು. ಇದರಿಂದ ಮಕ್ಕಳ ಮನಸ್ಸು ಹಗುರಾಗಿ ಉಲ್ಲಾಸದ ಕಾಲ ಕಳೆಯಲು ಸಾಧ್ಯ ಎಂದರು.
ಚಿತ್ರ ಕಲಾವಿದ ನಾಮದೇವ ಕಾಗದಾರ, ಚಿತ್ರಗಳಿಗೆ ಬಣ್ಣ ತುಂಬುವ ಕುರಿತು ಮಕ್ಕಳಿಗೆ ತರಬೇತಿ ನೀಡಿದರು. ಎನ್.ಡಿ. ಸಚ್ಚಿದಾನಂದ, ಲೀಲಾ ಗುಡಿಹಾಳ, ಗೀತಾ ಕೆರೂರ, ಪ್ರಕಾಶ ಬನ್ನಿಕೋಡ, ಶ್ರುತಿ ಬಾದಾಮಿ ಇದ್ದರು. ಶಿಬಿರದಲ್ಲಿ 50 ಮಕ್ಕಳು ಪಾಲ್ಗೊಂಡಿದ್ದರು.