Advertisement

ಮೂತ್ರಪಿಂಡ ಕಾಯಿಲೆಗಳು

12:30 AM Mar 17, 2019 | |

ಮೂತ್ರಪಿಂಡ ವಿಫ‌ಲವಾದ ಸಂದರ್ಭದಲ್ಲಿ ಡಯಾಲಿಸಿಸ್‌ ಇದ್ದರೂ ಇಲ್ಲದಿದ್ದರೂ ಪಥ್ಯಾಹಾರವು ಚಿಕಿತ್ಸೆಯ ಅವಿಭಾಜ್ಯ ಅಂಗವಾಗಿರುತ್ತದೆ. ಆಹಾರ ಶೈಲಿಯಲ್ಲಿ ಪರಿವರ್ತನೆ ತರುವುದರಿಂದ ಮೂತ್ರಪಿಂಡಗಳ ಕಾರ್ಯಸಾಮರ್ಥ್ಯ ರೋಗಪೂರ್ವ ಸ್ಥಿತಿಗೆ ಮರಳುವುದು ಸಾಧ್ಯವಿಲ್ಲವಾದರೂ ಕೆಲವು ಆಹಾರಗಳನ್ನು ವರ್ಜಿಸುವ ಮೂಲಕ ಇನ್ನಷ್ಟು ಹಾನಿಗೀಡಾಗುವುದನ್ನು ತಡೆಯಬಹುದು.

Advertisement

ವಿಶೇಷವಾಗಿ, ಪ್ರೊಟೀನ್‌ ಸೇವನೆ ಕಡಿಮೆ ಮಾಡುವುದರಿಂದ ಮತ್ತು ಉಪ್ಪಿನಂಶಕ್ಕೆ ಮಿತಿ ಹೇರುವುದರಿಂದ ಆಹಾರಗಳ ಸ್ವಾದ ಮತ್ತು ರುಚಿ ಕಡಿಮೆಯಾಗುತ್ತದೆ. ಹೀಗಾಗಿ ಸ್ವತಃ ರೋಗಿ ಅಥವಾ ರೋಗಿಯ ಸಂಬಂಧಿ ಸರಿಯಾದ ಆಹಾರವನ್ನು ಸರಿಯಾದ ಸಮಯಕ್ಕೆ ಸೇವಿಸುವಂತೆ ಪ್ರೇರೇಪಿಸುವುದು ಅತ್ಯಂತ ಅಗತ್ಯವಾಗಿರುತ್ತದೆ. ಕ್ಯಾಲೊರಿ ಪೂರೈಕೆಯು ಕಡಿಮೆಯಾಗುವುದರಿಂದ ಮೂತ್ರಪಿಂಡ ವೈಫ‌ಲ್ಯಕ್ಕೆ ಒಳಗಾದ ಮಕ್ಕಳಲ್ಲಿ ಬೆಳವಣಿಗೆಯು ಕುಂಠಿತವಾಗಿರುತ್ತದೆ.

ಪಥ್ಯಾಹಾರವು ಯಾಕೆ ಮುಖ್ಯ ಮತ್ತು ಪಥ್ಯಾಹಾರವನ್ನು ಅನುಸರಿಸದೆ ಇದ್ದರೆ ಅಪಾಯಗಳೇನು ಎನ್ನುವುದನ್ನು ಪ್ರತಿಯೊಬ್ಬ ಮೂತ್ರಪಿಂಡ ರೋಗಿಯೂ ತಿಳಿದುಕೊಳ್ಳುವುದು ಅತ್ಯವಶ್ಯವಾಗಿರುತ್ತದೆ. ಶಿಫಾರಸು ಮಾಡಲಾದ ಉತ್ತಮ ಗುಣಮಟ್ಟದ ಪ್ರೊಟೀನನ್ನು ಅಷ್ಟೇ ಪ್ರಮಾಣದಲ್ಲಿ ಸೇವಿಸುವುದು ಅತ್ಯಂತ ಪ್ರಾಮುಖ್ಯ ಎನ್ನುವುದನ್ನು ರೋಗಿಯು ತಿಳಿದುಕೊಳ್ಳಬೇಕಾಗುತ್ತದೆ. ದೇಹತೂಕ ಕಾಪಾಡಿಕೊಳ್ಳುವುದಕ್ಕೆ ಮತ್ತು ಅಂಗಾಂಶ ಕ್ಯಾಟಬಾಲಿಸಮ್‌ ನಡೆಯದಂತಿರಲು ಕಡಿಮೆ ಸೋಡಿಯಂ, ಕಡಿಮೆ ಪೊಟ್ಯಾಸಿಯಂ ಮತ್ತು ಅಗತ್ಯ ಗುಣಮಟ್ಟದ ಉತ್ತಮ ದರ್ಜೆಯ ಪ್ರೊಟೀನ್‌ ಸೇವನೆ ಮುಖ್ಯವಾಗಿದೆ ಎನ್ನುವುದನ್ನು ರೋಗಿ ತಿಳಿದುಕೊಳ್ಳಬೇಕು.

ತರಕಾರಿಗಳನ್ನು ಹೆಚ್ಚು ಪ್ರಮಾಣದ ನೀರಿನಲ್ಲಿ ಬೇಯಿಸಿ, ಬಳಿಕ ಬೇಯಿಸಿದ ನೀರನ್ನು ಚೆಲ್ಲಿ ಬೆಂದ ತರಕಾರಿಗಳನ್ನು ಮಾತ್ರ ಉಪಯೋಗಿಸಬೇಕಾಗುತ್ತದೆ. ತರಕಾರಿಗಳಲ್ಲಿರುವ ಪೊಟ್ಯಾಸಿಯಂ ಅಂಶ ದೇಹ ಸೇರದಂತಿರಲು ಹೀಗೆ ಮಾಡುವುದು ಅಗತ್ಯ. ಉಪ್ಪು ಹಾಕುವುದು ಅಥವಾ ಉಪ್ಪಿಗೆ ಪರ್ಯಾಯ ವಸ್ತುಗಳನ್ನು ಸೇರಿಸುವುದು ಕಡ್ಡಾಯವಾಗಿ ವಜ್ಯì.

ವಿಭಿನ್ನ ಬಗೆಯ ಮೂತ್ರಪಿಂಡ ಕಾಯಿಲೆಗಳಿಗೆ ತಕ್ಕಂತೆ ಪಥ್ಯಾಹಾರವೂ ಬದಲಾಗುತ್ತದೆ. ಇದು ದೇಹದಲ್ಲಿ ದ್ರವಾಂಶ ಉಳಿದುಕೊಳ್ಳುವುದು, ಇಲೆಕ್ಟ್ರೊಲೈಟ್‌ ಅಸಮತೋಲನ, ಇತರ ಸಹ ಅನಾರೋಗ್ಯಗಳು ಮತ್ತು ಕೊಲೆಸ್ಟರಾಲ್‌ ಮಟ್ಟವನ್ನು ಅವಲಂಬಿಸಿರುತ್ತದೆ. ವಿವಿಧ ಮೂತ್ರಪಿಂಡ ಕಾಯಿಲೆಗಳು ಹಾಗೂ ಆಯಾ ಕಾಯಿಲೆಗೆ ಅನುಸರಿಸಬೇಕಾದ ಪಥ್ಯಾಹಾರವನ್ನು ಇಲ್ಲಿ ವಿವರಿಸಲಾಗಿದೆ.

Advertisement

ಅಕ್ಯೂಟ್‌ ಗ್ಲಾಮ್ಯುರಲೊನೆಫ್ರೈಟಿಸ್‌ನಲ್ಲಿ ಹೆಚ್ಚು ಕಾಬೊìಹೈಡ್ರೇಟ್‌, ಕಡಿಮೆ ಇಲೆಕ್ಟ್ರೊಲೈಟ್‌ ಪೂರಕ ಆಹಾರಗಳನ್ನು ನೀಡುವ ಮೂಲಕ ರೋಗಿಯ ಸ್ಥಿತಿಯನ್ನು ಸುಧಾರಿಸಲು ಪ್ರಯತ್ನಿಸಲಾಗುತ್ತದೆ. ಪ್ರೊಟೀನ್‌ ಸೇವನೆಯು ಆರಂಭದಲ್ಲಿ ದಿನಕ್ಕೆ 40 ಗ್ರಾಂ ಮೀರದಂತಿದ್ದು, ಬಳಿಕ ಕ್ರಮೇಣವಾಗಿ ರೋಗಿಯ ತಾಳಿಕೆಯನ್ನು ಅನುಸರಿಸಿ ಹೆಚ್ಚಿಸಲಾಗುತ್ತದೆ. ದೇಹದಲ್ಲಿ ದ್ರವಾಂಶ ಉಳಿದುಕೊಳ್ಳುವುದು ಮತ್ತು ಅಧಿಕ ರಕ್ತದೊತ್ತಡ ಇದ್ದರೆ ದೈನಿಕ ಸೋಡಿಯಂ ಸೇವನೆಯನ್ನು 500ರಿಂದ 1,000 ಮಿ.ಗ್ರಾಂ.ಗೆ ಮಿತಗೊಳಿಸಲಾಗುತ್ತದೆ. ದ್ರವಾಹಾರ ಸೇವನೆಯು 500ರಿಂದ 1,000 ಮಿ.ಲೀ. ಅಷ್ಟೇ ಇರಬೇಕಾಗುತ್ತದೆ. ಹೆಚ್ಚು ಜೈವಿಕ ಮೌಲ್ಯ ಹೊಂದಿರುವ, ವಿಶೇಷವಾಗಿ ಮೊಟ್ಟೆಯ ಬಿಳಿ ಭಾಗ, ಕೆನೆ ತೆಗೆದ ಹಾಲಿನಂತಹ ಆಹಾರಗಳಿಗೆ ಹೆಚ್ಚು ಒತ್ತು ನೀಡಲಾಗುತ್ತದೆ. ಬಟಾಣಿ, ಬೀನ್ಸ್‌, ಒಣ ಬೀನ್ಸ್‌, ಶೇಂಗಾಗಳನ್ನು ವರ್ಜಿಸಲಾಗುತ್ತದೆ. ಕೆನೆ ತೆಗೆದ ಹಾಲನ್ನು ಸೀಮಿತ ಪ್ರಮಾಣದಲ್ಲಿ ಉಪಯೋಗಿಸಬಹುದು. ಆದರೆ ಎಲ್ಲ ಉಪ್ಪು ಹಾಕಿ ತಯಾರಿಸಿದ ಎಲ್ಲ ಆಹಾರಗಳನ್ನು ಕಡ್ಡಾಯವಾಗಿ ವರ್ಜಿಸಬೇಕು. ಅಡುಗೆ ಸೋಡಾವೂ ಸೋಡಿಯಂನ ಒಂದು ರೂಪವಾಗಿದ್ದು, ಅದನ್ನು ಉಪಯೋಗಿಸಿ ತಯಾರಿಸುವ ಬೇಕರಿ ತಿಂಡಿ ತಿನಿಸುಗಳ ಸೇವನೆಯನ್ನೂ ಮಿತಗೊಳಿಸಬೇಕಾಗುತ್ತದೆ.

ಕ್ರಾನಿಕ್‌ ಗ್ಲಾಮ್ಯುರಲೊನೆಫ್ರೈಟಿಸ್‌ನಲ್ಲಿ, ಸಾಕಷ್ಟು ಕಾಬೊìಹೈಡ್ರೇಟ್‌ಗಳು ಮತ್ತು ಕೊಬ್ಬುಗಳನ್ನು ಒದಗಿಸಲಾಗುತ್ತದೆ. ಕ್ಯಾಲೊರಿ ಪ್ರಮಾಣವು ದೈನಿಕ 2000ರಿಂದ 3000 ಕೆಸಿಎಎಲ್‌ ಆಗಿರುತ್ತದೆ. ದೇಹದಲ್ಲಿ ದ್ರವಾಂಶ ಉಳಿದುಕೊಳ್ಳುತ್ತಿದ್ದರೆ ದೈನಿಕ ಸೋಡಿಯಂ ಸೇವನೆಯ ಮಿತಿಯು 500ರಿಂದ 1000 ಮಿ.ಗ್ರಾಂ ಆಗಿರುತ್ತದೆ; ದೇಹದಲ್ಲಿ ದ್ರವಾಂಶ ಉಳಿದುಕೊಳ್ಳದಿದ್ದರೂ ಸೋಡಿಯಂ ಸೇವನೆಯ ಮೇಲೆ ಲಘು ಮಿತಿ ಇರಲೇ ಬೇಕಾಗುತ್ತದೆ.

ನೆಫ್ರಾಟಿಕ್‌ ಸಿಂಡ್ರೋಮ್‌ನಲ್ಲಿ, ದೇಹದಲ್ಲಿ ದ್ರವಾಂಶ ಉಳಿದುಕೊಳ್ಳುತ್ತಿದ್ದರೆ ಸೋಡಿಯಂ ಸೇವನೆಯು ಸಾಮಾನ್ಯವಾಗಿ ದೈನಿಕ 2 ಗ್ರಾಂಗಿಂತ ಕಡಿಮೆ ಇರಬೇಕಾಗುತ್ತದೆ. ದಿನಕ್ಕೆ ಪ್ರೊಟೀನ್‌ ಸೇವನೆಯು 120 ಗ್ರಾಂ ಇರಬೇಕಾಗುತ್ತದೆ ಮತ್ತು ಹೆಚ್ಚು ಕ್ಯಾಲೊರಿ, ಅಂದರೆ ಪ್ರತೀ ಕಿ.ಗ್ರಾಂ ದೇಹತೂಕಕ್ಕೆ 50ರಿಂದ 60 ಕೆಸಿಎಎಲ್‌ ಬೇಕಾಗುತ್ತದೆ.

ನೆಫೊÅಸೆಲೆರೋಸಿಸ್‌ನಲ್ಲಿ, ಬೊಜ್ಜು ಹೊಂದಿರುವ ರೋಗಿಗಳಿಗೆ ತೂಕ ಇಳಿಸಿಕೊಳ್ಳುವುದಕ್ಕೆ ಶಿಫಾರಸು ಮಾಡಲಾಗುತ್ತದೆ. ಸಹಜ ಪ್ರೊಟೀನ್‌ ಸೇವನೆಯ ಜತೆಗೆ ಕಡಿಮೆ ಸೋಡಿಯಂ ಇರುವ ಪಥ್ಯಾಹಾರ ಯಶಸ್ಸು ಕಾಣುತ್ತದೆ. ಮೂತ್ರಪಿಂಡ ವೈಫ‌ಲ್ಯ ಪ್ರಕರಣಗಳಲ್ಲಿ, ರೋಗಿಯ ಶಕ್ತಿ ಅಗತ್ಯಗಳನ್ನು ಪೂರೈಸುವುದಕ್ಕಾಗಿ ಪ್ರೊಟೀನ್‌ ಕೆಟಬಾಲಿಸಮ್‌ ತಡೆಯಲು ಹೆಚ್ಚು ಕ್ಯಾಲೊರಿ ಸೇವನೆ ಅಗತ್ಯವಾಗಿರುತ್ತದೆ. ಡಯಾಲಿಸಿಸ್‌ಗೆ ಒಳಪಡುತ್ತಿಲ್ಲದ ರೋಗಿಯಲ್ಲಿ, ಆರಂಭಿಕವಾಗಿ ದೈನಿಕ 20-40 ಗ್ರಾಂಗಳಷ್ಟು ಕಡಿಮೆ ಪ್ರೊಟೀನ್‌ ಉಳ್ಳ ಪಥ್ಯಾಹಾರವನ್ನು ಶಿಫಾರಸು ಮಾಡಲಾಗುತ್ತದೆ. ವಿಸರ್ಜನೆಯಾಗುವ ಮೂತ್ರದ ಪ್ರಮಾಣವನ್ನು ಅನುಸರಿಸಿ ದ್ರವಾಹಾರ ಸೇವನೆಯ ಮಿತಿ ಹಾಕಲಾಗುತ್ತದೆ; ನಿರ್ದಿಷ್ಟ ರೋಗಿಯ ರಕ್ತ ಪರೀಕ್ಷೆ ವರದಿಯನ್ನು ಆಧರಿಸಿ ಪೊಟ್ಯಾಸಿಯಂ ಮಿತಿಯನ್ನು ವ್ಯಕ್ತಿ ನಿರ್ದಿಷ್ಟವಾಗಿ ಹಾಕಲಾಗುತ್ತದೆ. ದಿನಕ್ಕೆ ಸೋಡಿಯಂ ಸೇವನೆಯ ಮಿತಿ ಸಾಮಾನ್ಯವಾಗಿ 500ರಿಂದ 1000 ಎಂಜಿ ಆಗಿರುತ್ತದೆ.

ಕ್ರಾನಿಕ್‌ ರೀನಲ್‌ ಫೈಲ್ಯೂರ್‌ನಲ್ಲಿ ದ್ರವಾಹಾರ, ಸೋಡಿಯಂ, ಪೊಟ್ಯಾಸಿಯಂ ಮತ್ತು ಪಾಸ್ಫರಸ್‌ಗಳ ಮೇಲೆ ಮಿತಿ ಹೇರಲಾಗುತ್ತದೆ. ಸರಿಯಾದ ಪ್ರಮಾಣದಲ್ಲಿ ಕ್ಯಾಲೊರಿ ಒದಗಣೆ, ಮೂತ್ರದ ಮೂಲಕ ಪ್ರೊಟೀನ್‌ ಹೊರಹೋಗುತ್ತಿರುವ ಪ್ರಮಾಣವನ್ನು ಅವಲಂಬಿಸಿ ಪ್ರೊಟೀನ್‌ ನಿಯಂತ್ರಣ, ಸೋಡಿಯಂ, ಪೊಟ್ಯಾಸಿಯಂ ಮತ್ತು ದ್ರವಾಹಾರ ಸೇವನೆಯ ಮೇಲೆ ನಿಯಂತ್ರಣ, ಪಾಸೆ#àಟ್‌ ಮತ್ತು ಕ್ಯಾಲ್ಸಿಯಂ, ಕಬ್ಬಿಣಾಂಶ, ಟ್ರೇಸ್‌ ಖನಿಜಗಳು ಮತ್ತು ವಿಟಮಿನ್‌ ಬಿಗಳ ಮೇಲೆ ನಿಯಂತ್ರಣ ಹಾಕಲಾಗುತ್ತದೆ.
ಕ್ಯಾಲೊರಿ ಅಗತ್ಯಗಳನ್ನು ಪೂರೈಸುವುದಕ್ಕಾಗಿ ದಿನಕ್ಕೆ 1800-2000 ಕೆಸಿಎಎಲ್‌ ಕ್ಯಾಲೊರಿ ಸೇವನೆಯನ್ನು ಸಾಮಾನ್ಯವಾಗಿ ಶಿಫಾರಸು ಮಾಡಲಾಗುತ್ತದೆ. ಇದನ್ನು ಅನ್ನ, ಗೋಧಿ, ರವಾ, ಸಾಗು, ಜೋಳ ಮತ್ತು ಓಟ್ಸ್‌ಗಳನ್ನು ಮಿತ ಪ್ರಮಾಣದಲ್ಲಿ ಸೇವಿಸುವ ಮೂಲಕ ಪೂರೈಸಿಕೊಳ್ಳಬಹುದು. ಕ್ಯಾಲೊರಿ ಹೆಚ್ಚಿಸಲು ಜೇನುತುಪ್ಪ ಮತ್ತು ಸಕ್ಕರೆಯನ್ನು ಕೂಡ ಉಪಯೋಗಿಸಬಹುದಾಗಿದೆ. ರೋಗಿ ಅಧಿಕ ದೇಹತೂಕ ಹೊಂದಿದ್ದರೆ, ಮಧುಮೇಹ ಹೊಂದಿದ್ದರೆ ಆಗ ಕಡಿಮೆ ಗ್ಲೆ„ಸೇಮಿಕ್‌ ಇಂಡೆಕ್ಸ್‌ ಇರುವ ಆಹಾರ ಸೇವಿಸಬೇಕಿದ್ದು, ಹೀಗಾಗಿ ಕ್ಯಾಲೋರಿ ಸೇವನೆಯು ವ್ಯಕ್ತಿ ನಿರ್ದಿಷ್ಟವಾಗಿರುತ್ತದೆ.

– ಮುಂದುವರಿಯುವುದು

– ಅರುಣಾ ಮಲ್ಯ
ಪಥ್ಯಾಹಾರ ತಜ್ಞೆ, 
ಕೆಎಂಸಿ ಆಸ್ಪತ್ರೆ, ಮಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next