Advertisement

ಅಪಹೃತ ಮಹಿಳೆ ಸಿಆರ್‌ಪಿಸಿ 164ರಡಿ ಹೇಳಿಕೆ ನೀಡಲು ಒಪ್ಪಿಗೆ: ಪ್ರಜ್ವಲ್‌ಗೆ ಸಂಕಷ್ಟ

12:06 AM May 06, 2024 | Team Udayavani |

ಬೆಂಗಳೂರು: ಮೈಸೂರಿನ ಕೆ.ಆರ್‌.ನಗರ ಠಾಣೆಯಲ್ಲಿ ದಾಖಲಾಗಿದ್ದ ಅಪಹರಣ ಪ್ರಕರಣದಲ್ಲಿ ರಕ್ಷಿಸಲಾದ ಸಂತ್ರಸ್ತೆ, ತನ್ನ ಮೇಲೆ ಸಂಸದ ಪ್ರಜ್ವಲ್‌ ಎಸಗಿರುವ ಲೈಂಗಿಕ ದೌರ್ಜನ್ಯ ಬಗ್ಗೆ ಎಸ್‌ಐಟಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

Advertisement

ಈ ಬೆನ್ನಲ್ಲೇ ಸಿಆರ್‌ಪಿಸಿ ಸೆಕ್ಷನ್‌ 164 ಅಡಿಯಲ್ಲಿ ನ್ಯಾಯಾಧೀಶರ ಎದುರು ಆಕೆಯ ಹೇಳಿಕೆಯನ್ನು ದಾಖಲಿಸಲು ಎಸ್‌ಐಟಿ ಮುಂದಾಗಿದೆ. ತನ್ನ ಮೇಲೆ ನಡೆದಿರುವ ಲೈಂಗಿಕ ದೌರ್ಜನ್ಯದ ಬಗ್ಗೆ ನ್ಯಾಯಾಧೀಶರ ಎದುರು ಹೇಳಿಕೆ ನೀಡಲು ಸಂತ್ರಸ್ತೆ ಒಪ್ಪಿಕೊಂಡಿದ್ದಾರೆ. ಹೀಗಾಗಿ ಸೋಮವಾರ ಅಥವಾ ಮಂಗಳವಾರ ಸಂತ್ರಸ್ತೆ ಹೇಳಿಕೆ ನೀಡುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

ಭಯಗೊಂಡಿರುವ ಮಹಿಳೆ
ಅಪಹರಣ ಪ್ರಕರಣದಲ್ಲಿ ಎಸ್‌ಐಟಿ ಅಧಿಕಾರಿಗಳು ಶನಿವಾರ ಮೈಸೂರಿನಲ್ಲಿ ರಕ್ಷಿಸಿದ ಮಹಿಳೆಯನ್ನು ಬೆಂಗಳೂರಿನ ಸಿಐಡಿ ಕಚೇರಿಗೆ ಕರೆ ತಂದಿದ್ದಾರೆ. ರವಿವಾರ ಈ ಬಗ್ಗೆ ಹೇಳಿಕೆ ನೀಡಲು ಭಯಭೀತಳಾದ ಹಿನ್ನೆಲೆಯಲ್ಲಿ ಆಕೆಯನ್ನು ಮಹಿಳಾ ಸಾಂತ್ವನ ಕೇಂದ್ರಕ್ಕೆ ಕರೆದೊಯ್ದು ಆಪ್ತಸಮಾಲೋಚಕರ ಮೂಲಕ ಧೈರ್ಯ ತುಂಬಲಾಗಿದೆ. ಆದರೂ ಆಕೆ ಹೇಳಿಕೆ ನೀಡಲು ಹಿಂದೇಟು ಹಾಕಿದ್ದಾರೆ. ಬಳಿಕ ಆಕೆಯ ಪುತ್ರನನ್ನು ಕರೆತಂದು ಆಕೆಯೊಂದಿಗೆ ಸ್ವಲ್ಪ ಹೊತ್ತು ಚರ್ಚಿಸಲು ಅವಕಾಶ ನೀಡಲಾಗಿತ್ತು. ಅನಂತರ ಆಕೆ ಪ್ರಜ್ವಲ್‌ ತನ್ನ ಮೇಲೆ ಎಸಗಿರುವ ಲೈಂಗಿಕ ದೌರ್ಜನ್ಯದ ಬಗ್ಗೆ ಎಸ್‌ಐಟಿಗೆ ಮಾಹಿತಿ ನೀಡಿದ್ದಾರೆ. ರೇವಣ್ಣ ತನ್ನನ್ನು ಹೇಗೆ ಅಪಹರಣ ಮಾಡಿಸಿದರು? ಸತೀಶ್‌ ಬಾಬಣ್ಣ ಎಲ್ಲೆಲ್ಲಿ ಸುತ್ತಾಡಿಸಿದರು ಎಂಬ ಬಗ್ಗೆಯೂ ತಿಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಪ್ರಜ್ವಲ್‌ ವಿರುದ್ಧ ಮತ್ತೊಂದು ಅತ್ಯಾಚಾರ ಕೇಸ್‌?
ಸಂತ್ರಸ್ತೆ ಹೇಳಿಕೆಯಿಂದ ಪ್ರಜ್ವಲ್‌ ಮತ್ತೊಂದು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈಗಾಗಲೇ ಅಪಹರಣ ಪ್ರಕರಣ ಸಂಬಂಧ ಎಚ್‌.ಡಿ.ರೇವಣ್ಣ ಬಂಧನವಾಗಿದೆ. ಈಗ ಸಂತ್ರಸ್ತೆ ಹೇಳಿಕೆ ಆಧರಿಸಿ ಪ್ರಜ್ವಲ್‌ ವಿರುದ್ಧ ಮತ್ತೊಂದು ಅತ್ಯಾಚಾರ ಪ್ರಕರಣ ದಾಖಲಿಸಲು ಎಸ್‌ಐಟಿ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಸಂತ್ರಸ್ತೆಯಿಂದ ಸಿಆರ್‌ಪಿಸಿ 164ರ ಅಡಿಯಲ್ಲಿ ಹೇಳಿಕೆ ದಾಖಲಿಸಲು ತನಿಖಾ ತಂಡ ಸಿದ್ಧತೆ ನಡೆಸಿದೆ.

ಏನಿದು ಪ್ರಕರಣ?
ಅಪಹರಣ ಸಂಬಂಧ ಸಂತ್ರಸ್ತೆಯ ಪುತ್ರ ಮೈಸೂರಿನ ಕೆ.ಆರ್‌.ನಗರ ಪೊಲೀಸ್‌ ಠಾಣೆಯಲ್ಲಿ ಮೇ 2ರಂದು ದೂರು ನೀಡಿದ್ದರು. ಈ ದೂರಿನ ಮೇರೆಗೆ ಮಾಜಿ ಸಚಿವ ಎಚ್‌.ಡಿ.ರೇವಣ್ಣ ಮತ್ತು ಅವರ ಆಪ್ತ ಸತೀಶ್‌ ಬಾಬಣ್ಣ ವಿರುದ್ಧ ಅಪಹರಣ ಆರೋಪದಡಿ ಎಫ್ಐಆರ್‌ ದಾಖಲಾಗಿತ್ತು. ಈ ಸಂಬಂಧ ಈಗಾಗಲೇ ಇಬ್ಬರನ್ನು ಬಂಧಿಸಲಾಗಿದೆ. ಸಂತ್ರಸ್ತೆ ಈ ಹಿಂದೆ ಎಚ್‌.ಡಿ.ರೇವಣ್ಣ ಅವರ ಹೊಳೆನರಸೀಪುರದ ಮನೆಯಲ್ಲಿ ಮನೆಗೆಲಸ ಮಾಡಿಕೊಂಡಿದ್ದಾಗ ಪ್ರಜ್ವಲ್‌ ಬೆದರಿಸಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವ ಆರೋಪವೂ ಕೇಳಿ ಬಂದಿದೆ. ಈ ಬಗ್ಗೆ ಸಂತ್ರಸ್ತೆಯ ಪುತ್ರ ದೂರಿನಲ್ಲೂ ಉಲ್ಲೇಖಿಸಿದ್ದಾರೆ. ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ಕಾಳೇನಹಳ್ಳಿಯ ರೇವಣ್ಣನ ಆಪ್ತ ರಾಜಗೋಪಾಲ್‌ ಎಂಬಾತನ ತೋಟದ ಮನೆಯಲ್ಲಿ ಸಂತ್ರಸ್ತೆ ಇರುವ ಜಾಡು ಹಿಡಿದ ಎಸ್‌ಐಟಿ ಅಧಿಕಾರಿಗಳು ಶನಿವಾರ ಆಕೆಯನ್ನು ರಕ್ಷಿಸಿ, ಬೆಂಗಳೂರಿಗೆ ಕರೆ ತಂದಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next