Advertisement

ಕಿಡ್ನಾಪ್‌ ಪ್ರಕರಣ: ಮನೆಗೆ ಮರಳಿದ ನಗರಸಭೆ ಸದಸ್ಯ ಮರಿದೇವ್‌!

12:47 PM May 21, 2017 | Team Udayavani |

ಹರಿಹರ: ಅಪರಣಕ್ಕೀಡಾಗಿದ್ದ ಇಲ್ಲಿನ 4ನೇ ವಾಡ್‌ನ ನಗರಸಭೆ ಸದಸ್ಯ ಕೆ.ಮರಿದೇವ್‌ ಶನಿವಾರ ಮನೆಗೆ ಮರಳಿ ಬಂದಿದ್ದು, ಕಿಡ್ನಾಪ್‌ ಪ್ರಕರಣಕ್ಕೆ ಕೌಟುಂಬಿಕ ಕಾರಣದ ತೇಪೆ ಹಚ್ಚಲಾಗುತ್ತಿದೆ ಎಂಬ ಅನುಮಾನ ಮೂಡಿದೆ. 

Advertisement

ಶನಿವಾರ ರಾತ್ರಿ 8-30ರ ವೇಳೆಗೆ ನಗರ ಪೊಲೀಸ್‌ ಠಾಣೆಯಲ್ಲಿ ಮರಿದೇವ್‌ ಅವರನ್ನು ವಿಚಾರಣೆ ನಡೆಸಲಾಗಿದ್ದು, ಅಂದು ಪತ್ನಿಯೊಂದಿಗೆ ಜಗಳವಾಡಿಕೊಂಡಿದ್ದು, ಅದೆ ವೇಳೆಗೆ ತನ್ನ ಸ್ನೇಹಿತರು ಬಂದಿದ್ದರಿಂದ ಏನು ಮಾಡಬೇಕೆಂದು ತೋಚದೆ ಅವರೊಂದಿಗೆ ಪ್ರವಾಸ ತೆರಳಿದ್ದೆ ಎಂದು ಮರಿದೇವ್‌ ತಿಳಿಸಿದ್ದಾರೆ ಎನ್ನಲಾಗುತ್ತಿದೆ.

ಹೈಕೋರ್ಟ್‌ ಅರ್ಜಿ ವಾಪಾಸ್‌: ಮೇ 11ರಂದು ತನ್ನ ಪತಿಯನ್ನು ಯಾರೋ ಅಪಹರಿಸಿದ್ದು,  ಹುಡುಕಿಕೊಡುವಂತೆ ಕೋರಿ ಮೇ 15ರಂದು ಮರಿದೇವ್‌ ಪತ್ನಿ ಸುಮಿತ್ರಾ ಹೈಕೋರ್ಟ್‌ನಲ್ಲಿ ಹೇಬಿಯಸ್‌ ಕಾರ್ಪಸ್‌ ರಿಟ್‌ ಅರ್ಜಿ ಸಲ್ಲಿಸಿದ್ದರು. ಕೆ.ಮರಿದೇವರನ್ನು ಹುಡುಕಿ 24 ಗಂಟೆಯೊಳಗೆ ನ್ಯಾಯಾಲಯದ ಮುಂದೆ ಹಾಜರುಪಡಿಸುವಂತೆ ಕೋರ್ಟ್‌ ಜಿಲ್ಲಾ ಪೊಲೀಸರಿಗೆ ಸೂಚನೆ ನೀಡಿದ್ದರಿಂದ ಪೊಲೀಸರಿಗೆ ಪೀಕಲಾಟ ಶುರುವಾಗಿತ್ತು.

ಆದರೆ ಈ ನಿಮಿತ್ತ ಗುರುವಾರದಂದು ನಡೆದ ಕಲಾಪದಲ್ಲಿ ಅರ್ಜಿದಾರರ ಪರ ವಕೀಲರು ಅಪಹರಣಕ್ಕೀಡಾಗಿದ್ದ ಕೆ.ಮರಿದೇವ ಅವರ ಪತ್ನಿಯೊಂದಿಗೆ ಫೋನ್‌ನಲ್ಲಿ ಮಾತನಾಡಿದ್ದು, ತಾವು ಸುರಕ್ಷಿತವಾಗಿದ್ದು ಶೀಘ್ರ ಮನೆಗೆ ಬರುವುದಾಗಿ ತಿಳಿಸಿ ದ್ದಾರೆಂದು ಅμàಡವಿಟ್‌ ಸಲ್ಲಿಸಿದ್ದರು. 

ಪತ್ನಿ ಯೂಟರ್ನ್: ಬಾಂಗ್ಲಾ ಬಡಾವಣೆ ತಮ್ಮ ನಿವಾಸಕ್ಕೆ ನಾಲ್ವರು ಅಪರಿಚಿತರು ಬಂದಾಗ ಅವರೆಲ್ಲರೂ ಕಾಂಗ್ರೆಸ್‌ ಪಕ್ಷದವರಾಗಿದ್ದು, ಅವರೊಂದಿಗೆ ಹೋಗಿ ಬರುವುದಾಗಿ ತಿಳಿಸಿದ್ದ ಪತಿ ಮರಳಿ ಬಂದಿಲ್ಲ. ಮೇ 18ರಂದು ನಗರಸಭೆ ಅಧ್ಯಕ್ಷರ ಅವಿಶ್ವಾಸ ಮಂಡನಾ ಸಭೆ ಹಿನ್ನೆಲೆಯಲ್ಲಿ ತಮ್ಮ ಗಂಡನ ಅಪಹರಣವಾಗಿರುವ ಅನುಮಾನವಿದೆ ಎಂದು ದೂರಿನಲ್ಲಿ ವಿವರಿಸಿದ್ದ ಪತ್ನಿ ಸುಮಿತ್ರಾ, ಈಗ ತಾನು ತಪ್ಪಾಗಿ ದೂರು ನೀಡಿದ್ದು, ವಾಪಾಸ್‌ ಪಡೆಯುವುದಾಗಿ ಪೊಲೀಸರಿಗೆ ತಿಳಿಸಿದ್ದಾರೆನ್ನಲಾಗುತ್ತಿದೆ. 

Advertisement

ತಂತ್ರ, ಪ್ರತಿತಂತ್ರವೇ?: ನಗರಸಭೆಯ 24 ಸದಸ್ಯರು ಕಾಂಗ್ರೆಸ್‌ ಪಕ್ಷದ ಸದಸ್ಯೆಯಾದ ಅಧ್ಯಕ್ಷೆ ಆಶಾ ವಿರುದ್ಧ ಅವಿಶ್ವಾಸ ವ್ಯಕ್ತಪಡಿಸಿ ಸಲ್ಲಿಸಿದ್ದ ಅರ್ಜಿ ಆಧರಿಸಿ ಮೇ 18ಕ್ಕೆ ಅವಿಶ್ವಾಸ ನಿರ್ಣಯ ಮಂಡನಾ ಸಭೆ ನಿಗದಿಯಾಗಿತ್ತು. ಅವಿಶ್ವಾಸ ನಿರ್ಣಯ ಗೆಲ್ಲಲು ಆಶಾ ವಿರೋಧಿ ಗುಂಪು ಕಸರತ್ತು ನಡೆಸಿದ್ದರೆ, ಸೋಲಿಸಲು ಆಶಾ ಬೆಂಬಲಿಗರು ಹರಸಾಹಸ ನಡೆಸಿದ್ದರು.

ಈ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಮುಖಂಡರು ಅಂದರೆ ಅವಿಶ್ವಾಸದ ವಿರುದ್ಧವಾಗಿರುವ ಗುಂಪು ತನ್ನ ಪತಿಯ ಅಪಹರಣ ನಡೆಸಿರಬಹುದು ಎಂಬ ಅನುಮಾನವನ್ನು ಸ್ವತಃ ಮರಿದೇವ ಅವರ ಪತ್ನಿ ದೂರಿನಲ್ಲಿ ವ್ಯಕ್ತಪಡಿಸಿದ್ದರು. 

ಇದೆ ರೀತಿ ಅಧ್ಯಕ್ಷೆ ಆಶಾ ಮರಿಯೋಜಿರಾವ್‌ ಹಲವು ವಿಪಕ್ಷ ಸದಸ್ಯರನ್ನು ಬಲೆಗೆ ಬೀಳಿಸಿಕೊಂಡು, ಪ್ರವಾಸಕ್ಕೂ ಕಳುಹಿಸಿಕೊಡುವ ಮೂಲಕ ಅವಿಶ್ವಾಸ ನಿರ್ಣಯಕ್ಕೆ ವಿರುದ್ಧವಾಗಿ ಮತ ಚಲಾಯಿಸುವಂತೆ  ತಂತ್ರ ಹೆಣೆದಿದ್ದರಿಂದ ಅನಿವಾರ್ಯವಾಗಿ ಸಭೆ ಮುಂದೂಡಲು ಅಪಹರಣ ಪ್ರಹಸನದ ಪ್ರತಿತಂತ್ರ ರೂಪಿಸಿರಬಹುದು ಎಂಬ ಸಂಶಯವೂ ಮೂಡಿದೆ. ತನಿಖೆಯಿಂದ ಮಾತ್ರ ಸತ್ಯಾಸತ್ಯತೆ ಹೊರಬರಲಿದೆ. 

Advertisement

Udayavani is now on Telegram. Click here to join our channel and stay updated with the latest news.

Next