ನವಲಗುಂದ: ಕಳಸಾ-ಬಂಡೂರಿಗಾಗಿ ಎಲ್ಲ ರೀತಿಯ ಹೋರಾಟ ಮಾಡಿ ಸಾಕಾಗಿದೆ. ನಮ್ಮನ್ನು ಗಡಿಪಾರು ಮಾಡುವುದು ಬೇಡ, ಯಾವುದೇ ತಂಟೆ-ತಕರಾರಿಲ್ಲದೇ ನಾವೇ ಬಂಧನಗೊಳಗಾಗುತ್ತೇವೆ ದಯವಿಟ್ಟು ನಮ್ಮನ್ನು ನಮ್ಮನ್ನು ಜೈಲಿಗೆ ಅಟ್ಟಿಬಿಡಿ. ಹೀಗೆಂದು ಪರಿಪರಿಯಾಗಿ ಬೇಡಿಕೊಂಡವರು ಕಳಸಾ ಬಂಡೂರಿ-ಮಹದಾಯಿ ಹೋರಾಟದಲ್ಲಿ ಪಾಲ್ಗೊಂಡ ರೈತರು.
ಪಕ್ಷಾತೀತ ಹೋರಾಟ ಸಮಿತಿ ಸೋಮವಾರ ಹಮ್ಮಿಕೊಂಡ ಜೈಲ್‌ಭರೋ, ಗಡಿಪಾರು ಚಳವಳಿ ಹಾಗೂ ರೈತ ಜಾಗೃತಿ ಸಮಾವೇಶದಲ್ಲಿ ಪಾಲ್ಗೊಂಡ ರೈತರಿಗೆ ಜೈಲ್‌ಭರೋ ಕಾರ್ಯಕ್ರಮ ಕೈಬಿಡುವಂತೆ ಹೇಳಲು ಬಂದಿದ್ದ ಉಪ ವಿಭಾಗಾಧಿಧಿಕಾರಿ ಮಹೇಶ ಕರ್ಜಗಿ ಅವರಿಗೆ ಈ ರೀತಿಯಾಗಿ ಹೇಳಿಕೊಂಡರು.
ಕೋರ್ಟ್ ಕಚೇರಿಗೆ ಅಲೆದಾಡಲು ಹಣವಿಲ್ಲದೇ ನರಳಾಡುತ್ತಿದ್ದೇವೆ. ಸರಕಾರ ನಮ್ಮ ಮೇಲೆ ಹಾಕಿರುವ ಪ್ರಕರಣಗಳು ಹಿಂಪಡೆಯುವ ಅವಶ್ಯಕತೆ ಇಲ್ಲ. ಪೊಲೀಸರ ಬೆದರಿಕೆಗಳಿಂದ ದಿನಾ ಸಾಯುವ ಬದಲು ಒಂದೇ ಸಾರಿ ಸಾಯುತ್ತೇವೆ ಎಂದರು. ಮನವಿ ಕೊಡಿ ಸರಕಾರಕ್ಕೆ ತಲುಪಿಸಿ ನಿಮ್ಮಗೆ ನ್ಯಾಯ ದೊರಕಿಸಿಕೊಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.
ಅದಕ್ಕೆ ರೈತ ಹೋರಾಟಗಾರರು ಸರಕಾರಕ್ಕೆ ಮನವಿ ನೀಡಿ ಸಾಕಾಗಿದೆ ಮತ್ತೆ ಮನವಿ ನೀಡಲು ಸಿದ್ಧರಿಲ್ಲ. ಹೀಗಾಗಿಲ್ಲ ರೈತರನ್ನು ಜೈಲಿಗೆ ಹಾಕಿ ಎಂದು ಪಟ್ಟು ಹಿಡಿದರು. ಈ ವೇಳೆ ಮಾತನಾಡಿದ ಉಪ ವಿಭಾಗಾಧಿಕಾರಿ ಮಹೇಶ ಕರ್ಜಗಿ, ಕಳಸಾ-ಬಂಡೂರಿ ವಿಷಯ ನಮ್ಮ ಕೈಯಲ್ಲಿ ಇಲ್ಲ. ಇದ್ದರೆ ನಿಮ್ಮ ಜೊತೆ ನಾವೂ ಬಂದು ತರಲು ನಿಲ್ಲುತ್ತಿದ್ದೆವು.
ಆದರೆ ಸರಕಾರಗಳ ಕೈಯಲ್ಲಿರುವುದರಿಂದ ನಾನೇನೂ ಮಾಡಲು ಸಾಧ್ಯವಿಲ್ಲ. ಹೀಗಾಗಿ ನಮ್ಮ ಕೈಯಲ್ಲಿರುವ ಗಡಿಪಾರುದಂಥ ವಿಷಯಗಳನ್ನು ಈಗಾಗಲೇ ತಾತ್ಕಾಲಿಕವಾಗಿ ಕೈ ಬಿಡಲಾಗಿದೆ. ಹೀಗಾಗಿ ಹಠ ಬಿಡಬೇಕೆಂದು ಮನವಿ ಮಾಡಿದರು. ರೈತರು ಅದಕ್ಕೊಪ್ಪಲಿಲ್ಲ. ಶಾಸಕ ಎನ್.ಎಚ್.ಕೋನರಡ್ಡಿ ಸಮಾಧಾನಪಡಿಸಿ ಮನವಿ ಮಾಡಿದ್ದರಿಂದ ಪಟ್ಟು ಸಡಿಲಿಸಿದರು.
ಡಿವೈಎಸ್‌ಪಿ ಚಂದ್ರಶೇಖರ, ತಹಶೀಲ್ದಾರ ನವೀನ ಹುಲ್ಲೂರ, ಸಿಪಿಐ ಪಿ.ಪಿ.ದಿವಾಕರ, ಗಿರೀಶ ಮಟ್ಟೆಣ್ಣವರ, ಪಕ್ಷಾತೀತ ಹೋರಾಟಸಮಿತಿ ಅಧ್ಯಕ್ಷ ಲೋಕನಾಥ ಹೆಬಸೂರ, ಸುಭಾಸಚಂದ್ರಗೌಡ ಪಾಟೀಲ, ವೀರಣ್ಣ ಮಳಗಿ ಮತ್ತಿತರರು ಇದ್ದರು.