Advertisement

ಹಿತಮಿತವಾಗಿ ನಡೆದ ಕೀಚಕವಧೆ 

06:00 AM Nov 09, 2018 | |

ಸಮಯ ಮಿತಿಯೊಳಗೆ ಸಂಕಲಿಸಿದ ಯಕ್ಷಗಾನ ಪ್ರದರ್ಶನವೊಂದು ಸಹೃದಯರ ಮೆಚ್ಚುಗೆಗೆ ಪಾತ್ರವಾಗುತ್ತದೆ ಎಂಬುದಕ್ಕೆ ಇತ್ತೀಚೆಗೆ ಕೋಟದ ಕಾರಂತ ಥೀಂ ಪಾರ್ಕಿನಲ್ಲಿ ನಡೆದ ಕೀಚಕವಧೆ ಸಾಕ್ಷಿಯಾಯಿತು. ಸ್ವತಃ ಕಲಾವಿದರಾದ ಸುಜಯೀಂದ್ರ ಹಂದೆಯವರು ಕೇಂದ್ರ ಸಂಸ್ಕೃತಿ ಇಲಾಖೆಯ ಅನುದಾನದ ನೆರವಿನೊಂದಿಗೆ ಭೀಮ ಭಾರತದ ಸರಣಿ ಪ್ರದರ್ಶನವಾಗಿ ಅತಿಥಿ ಕಲಾವಿದರಿಂದ ವಿರಾಟ ಪರ್ವದ ಕೀಚಕ ವಧೆಯನ್ನು ಸಂಯೋಜಿಸಿದ್ದರು. 

Advertisement

ಆರಂಭದಲ್ಲಿ ಪೂರ್ವರಂಗದ ಭಾಗವಾಗಿ ಚುಟುಕಾಗಿ ಪ್ರಸ್ತುತಪಡಿಸಿದ ಕುಮಾರ ಅಭಿನವ ತುಂಗರ ಪೀಠಿಕಾ ಸ್ತ್ರೀವೇಷ ರಂಗವನ್ನು ಕಟ್ಟಿಕೊಟ್ಟಿತು. ನವೀನ್‌ ಕೋಟ ಅವರ ವಿರಾಟರಾಜನ ಒಡ್ಡೋಲಗದಿಂದ ಪ್ರಸಂಗ ಆರಂಭವಾಯಿತು. ಅಜ್ಞಾತವಾಸಕ್ಕಾಗಿ ವೇಷ ಮರೆಸಿ ಬಂದ ಪಾಂಡವರಿಗೆ ಆಶ್ರಯ ನೀಡಿದ ಕಥಾಭಾಗ ಒಡ್ಡೋಲಗದ ಪೀಠಿಕಾ ಮಾತುಗಳಲ್ಲಿ ಹೊರಹೊಮ್ಮಿತು. ಶಮಂತ್‌ ಕೆ.ಎಸ್‌.ಕೋಟ ಅವರ ಸುಧೇಷ್ಣೆಯು ಸೈರೆಂದ್ರಿಯನ್ನು ಬರಮಾಡಿಕೊಳ್ಳುವ ಭಾಗದಲ್ಲಿ ರಸವತ್ತಾಗಿ ಮೂಡಿಬಂತು. 

ಅಶ್ವಿ‌ನಿ ಕೊಂಡದಕುಳಿಯವರ ಕೀಚಕ ಅಂದಿನ ಪ್ರಧಾನ ಆಕರ್ಷಣೆಯಾಗಿತ್ತು. ಒಂದು ದಿನ ಸೊಬಗಿಂದ… ಪದ್ಯಕ್ಕೆ ಕೀಚಕನ ಅಭಿವ್ಯಕ್ತಿ ಮೆಚ್ಚುವಂತಹದು. ಮೇಲಿಂದ ಮೇಲೆ ಬಿಡುವಿಲ್ಲದೆ ರಂಗಕ್ರಿಯೆಗೆ ಒಳಗಾಗಿಸುವ ಕೀಚಕನ ಪಾತ್ರ ಸುಲಭ ಸಾಧ್ಯವಾದುದಲ್ಲ. ಹೆಣ್ತನದ ಸಹಜ ಸ್ವರ ಮಾಧುರ್ಯ ಮತ್ತು ಆಂಗಿಕ ಕೋಮಲತೆಯನ್ನು ಮೀರಿ ಅಂದಿನ ಕೀಚಕ ಎಲ್ಲರ ಮನಸೂರೆಗೊಂಡಿತು. ಸುಂದರ ಕೆಂಪು ಮುಂಡಾಸಿನ ವೇಷ, ಹಿತಮಿತವಾದ ವಿಕಾರವಿಲ್ಲದ ಕುಣಿತ, ಚುಟುಕಾದ ಮಾತು ಕೀಚಕನ ಪಾತ್ರವನ್ನು ಕಟ್ಟಿಕೊಡುವಲ್ಲಿ ಯಶಸ್ವಿಯಾಯಿತು.

ವಿಜಯ ಗಾಣಿಗ ಬೀಜಮಕ್ಕಿಯವರ ಸೈರಂದ್ರಿ ಮೋಹಕವಾಗಿತ್ತು. ರಂಗದಲ್ಲಿ ಆಗಾಗ ತನ್ನ ಅಭಿವ್ಯಕ್ತಿಯಲ್ಲಿ ಹಿಂದೆ ಆಗಿಹೋದ ಹಿರಿಯ ಕಲಾವಿದರ ಛಾಯೆ ಇದೆ.ಕೊಂಡದಕುಳಿಯವರ ವಲಲ ಭೀಮ ಪ್ರಸಂಗಕ್ಕೊಂದು ಹೊಸ ಓಘವನ್ನು ನೀಡುವಲ್ಲಿ ಕಾರಣವಾಯಿತು. ಜುಟ್ಟು ಹೊಂದಿರುವ ಬೋಳುತಲೆಯ, ದೊಡ್ಡ ಮೀಸೆಯ, ಮೈ ಬಿಟ್ಟ ವಲಲನ ಆಹಾರ್ಯ ಅವರದೆ ಹೊಸ ಕಲ್ಪನೆ. ಕೀಚಕನನ್ನು ಕೊಲ್ಲುವಂತೆ ಭೀಮಸೇನನನ್ನು ಪ್ರೇರೇಪಿಸಿ ಅಣಿಗೊಳಿಸುವ ಭೀಮ ಸೈರೆಂದ್ರಿಯರ ಉಭಯಸಂಕಟದ ಗಂಭೀರ ಭಾಗದ ರಸವತ್ತಾದ ಸಂವಾದವನ್ನು ತಿಳಿಹಾಸ್ಯದೊಂದಿಗೆ ಬೆಳೆಸಿದ ಕಲಾವಿದರೀರ್ವರೂ ಅಭಿನಂದನೀಯರು. ಕೀಚಕನ ಪಾತ್ರದಲ್ಲಿ ಮಗಳು, ವಲಲನ ಪಾತ್ರದಲ್ಲಿ ತಂದೆ ಅಂದಿನ ಆಟದ ಮತ್ತೂಂದು ವಿಶೇಷ. ಕೀಚಕ ಮತ್ತು ವಲಲನ ಯುಧœ ಭಾಗವನ್ನು ಮೊಟಕುಗೊಳಿಸಿದ ಕಾರಣ ಆ ಭಾಗವನ್ನು ಕಾದು ಕುಳಿತ ಪ್ರೇಕ್ಷಕರ ನಿರೀಕ್ಷೆ ಹುಸಿಯಾಯಿತು. ಹಾಸ್ಯಗಾರ ಹಾಲಾಡಿ ಸತೀಶ್‌ರವರ ವಿಜಯನ ಪಾತ್ರವೂ ಸಮಯೋಚಿತವಾಗಿತ್ತು. ಹೆಚ್ಚು ಪುನರಾವರ್ತನೆ ಯಿಲ್ಲದ, ಹಳತರೊಂದಿಗೆ ಹೊಸತನ್ನು ಮೈಗೂಡಿಸಿಕೊಂಡು, ರಸಭಾವಗಳಿಗನುಗುಣವಾಗಿ, ಸಂದಭೋìಚಿತ ರಾಗ ತಾಳಗಳಲ್ಲಿ ಯಕ್ಷಗಾನೀಯವಾಗಿ ಹಾಡಿದ ಯುವಭಾಗವತ ಚಂದ್ರಕಾಂತ ಮೂಡುಬೆಳ್ಳೆ, ಮದ್ದಳೆ, ಚಂಡೆಯಲ್ಲಿ ಸಹಕರಿಸಿದ ರಾಘವೇಂದ್ರ ಹೆಗಡೆಯಲ್ಲಾಪುರ, ಕೋಟ ಶಿವಾನಂದರು ಪ್ರಸಂಗದ ಒಟ್ಟು ಅಂದಕ್ಕೆ ಪೂರಕರಾಗಿ ದುಡಿದವರು. 

ತಾ ಮೇಲೂ, ತಾ ಮೇಲೂ ಎನ್ನದೇ ಎಲ್ಲಾ ಕಲಾವಿದರ ಸಾಂ ಕ ಪ್ರಯತ್ನವೇ ರಂಗದ ಒಟ್ಟಂದದ ಪರಿಣಾಮಕ್ಕೆ ಕಾರಣವಾಗುತ್ತದೆ ಎಂಬುದು ಕೀಚಕವಧೆಯ ಯಶಸ್ಸಿನ ಗುಟ್ಟು. ಕಣ್ಣು ಕುಕ್ಕುವ ಜಗಮಗಿಸುವ ಬಣ್ಣ ಬಣ್ಣದ ದೀಪಗಳಿಲ್ಲದೇ ಪ್ರದರ್ಶನ ಹಿತವಾಯಿತು. 

Advertisement

ರಾಜೀವ ಬಿ. 

Advertisement

Udayavani is now on Telegram. Click here to join our channel and stay updated with the latest news.

Next