ಹನೂರು: ದೇವಾಲಯಕ್ಕೆ ಆಗಮಿಸುವ ಭಕ್ತಾದಿಗಳಿಗೆ ರಸ್ತೆ, ಶೌಚಾಲಯ, ನೀರು ಸೇರಿದಂತೆ ಮೂಲಭೂತ ಸೌಕರ್ಯಕ್ಕೆ ಸಮಸ್ಯೆಯಾಗದಂತೆ ಕ್ರಮವಹಿಸಬೇಕು ಎಂದು ಜಿಲ್ಲಾಧಿಕಾರಿ ಡಾ|ಎಂ.ಆರ್.ರವಿ ಅಧಿಕಾರಿಗಳಿಗೆ ಸೂಚಿಸಿದರು.
ತಾಲೂಕಿನ ಸುಳ್ವಾಡಿ ಗ್ರಾಮದ ಕಿಚ್ಚುಗುತ್ತಿ ಮಾರಮ್ಮ ದೇವಾಲಯಕ್ಕೆ ಭೇಟಿ ನೀಡಿ ಪೂರ್ವಭಾವಿ ಸಿದ್ಧತೆಗಳನ್ನು ಪರಿಶೀಲನೆ ನಡೆಸಿ ಅಧಿಕಾರಿಗಳ ಸಭೆ ನಡೆಸಿದರು.
ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿ ಗಳು ಸುಳ್ವಾಡಿ ಕಿಚ್ಚುಗುತ್ತಿ ಮಾರಮ್ಮ ದೇವಾಲಯವನ್ನು ಮತ್ತೆ ತೆರೆದು ಭಕ್ತಾದಿಗಳ ದರ್ಶನಕ್ಕೆ ಅನುವು ಮಾಡಿ ಕೊಡಲುಸರ್ಕಾರದಿಂದಆದೇಶವಾಗಿದೆ. ಈ ಹಿನ್ನೆಲೆ ಅಕ್ಟೋಬರ್ 20 ರಿಂದ 24ರವರೆಗೆ ಧಾರ್ಮಿಕ ದತ್ತಿ ಇಲಾಖೆಯ ಪ್ರಧಾನ ಆಗಮಿಕರ ಸಮ್ಮುಖದಲ್ಲಿ ವಿಧಿ ವಿಧಾನಗಳೊಂದಿಗೆ ಪೂಜಾಕೈಂಕರ್ಯಗಳು ನಡೆಯಲಿದ್ದು, 24ರಂದು ಕುಂಭಾಭಿಷೇಕ ನೆರವೇರಲಿದೆ. ಬಳಿಕ ಸಾರ್ವಜನಿಕರ ದರ್ಶನಕ್ಕೆ ಮುಕ್ತಗೊಳಿಸಲಾಗುವುದು. ಈ ಹಿನ್ನೆಲೆ ದೇವಾಲಯಕ್ಕೆ ಆಗಮಿಸುವ ಭಕ್ತಾದಿಗಳಿಗೆ ಮುಖ್ಯ ರಸ್ತೆಯಿಂದ ಸಮರ್ಪಕ ರಸ್ತೆ, ಬೀದಿ ದೀಪ, ಕುಡಿಯುವ ನೀರು,ಶೌಚಾಲಯ ಸೇರಿದಂತೆ ಅಗತ್ಯ ಮೂಲಭೂತ ಸೌಕರ್ಯ ಕಲ್ಪಿಸಬೇಕು ಎಂದರು.
ಇದೇ ವೇಳೆ ಈಗಾಗಲೇ ಪ್ರಗತಿಯಲ್ಲಿರುವ ಬಣ್ಣ ಬಳಿಯುವ ಕಾರ್ಯವನ್ನು ಪರಿಶೀಲನೆ ನಡೆಸಿದರು. ಬಳಿಕ ದೇವಾಲಯದ ಸಿಸಿಟಿವಿ ಕ್ಯಾಮರಾಗಳು ಕಾರ್ಯನಿರ್ವ ಹಿಸುತ್ತಿರುವ ಬಗ್ಗೆ ಪರಿಶೀಲನೆ ನಡೆಸಿ ಅಧಿಕಾರಿಗಳಿಂದಅಗತ್ಯ ಮಾಹಿತಿ ಪಡೆದರು. ಸಭೆಯಲ್ಲಿ ಉಪವಿಭಾಗಾಧಿಕಾರಿ ಗಿರೀಶ್ ದಿಲೀಪ್ ಬಡೋಲೆ,ತಹಶೀಲ್ದಾರ್ ಕುನಾಲ್, ತಾಪಂ ಇಒ ರಾಜು, ಉಪತಹ ಸೀಲ್ದಾರ್ ಸುರೇಖಾ, ಎಇಇ ಸುರೇಂದ್ರ, ಗ್ರಾಮಲೆಕ್ಕಾಧಿಕಾರಿ ವಿನೋದ್ ಇದ್ದರು.
ವಿಷ ಪ್ರಸಾದ ಪ್ರಕರಣ: ಕಿಚ್ಚುಗುತ್ತಿ ಮಾರಮ್ಮ ದೇವಾಲಯದಲ್ಲಿ 2018ರ ಡಿಸೆಂಬರ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಕ್ತರಿಗೆ ನೀಡುವ ಪ್ರಸಾದದಲ್ಲಿ ವಿಷ ಬೆರೆಸಿದ್ದರಿಂದ 17 ಮಂದಿ ಮೃತಪಟ್ಟಿದ್ದರು. 100ಕ್ಕೂ ಅಧಿಕ ಭಕ್ತರು ಅಸ್ವಸ್ಥಗೊಂಡಿದ್ದರು.ಅಂದಿನಿಂದದೇವಾಲಯವನ್ನು ಮುಚ್ಚಲಾಗಿತ್ತು. ಈ ವಿಷ ಪ್ರಸಾದ ಪ್ರಕರಣವು ರಾಜ್ಯವನ್ನೇ ಬೆಚ್ಚಿ ಬೀಳಿಸಿತ್ತು.