ಸುದೀಪ್ ಅವರ 46ನೇ ಚಿತ್ರ “ಮ್ಯಾಕ್ಸ್’ ಚಿತ್ರೀಕರಣ ಆರಂಭಿಸಿದ್ದು ನಿಮಗೆ ನೆನಪಿರಬಹುದು. ಆದರೆ, ಆ ನಂತರ ಆ ಚಿತ್ರದ ಯಾವ ಅಪ್‌ಡೇಟ್ ಕೂಡಾ ಬಂದಿರಲಿಲ್ಲ. ಸಿನಿಮಾ ಯಾವ ಹಂತದಲ್ಲಿದೆ, ಯಾವಾಗ ರಿಲೀಸ್ ಎಂಬ ಕುತೂಹಲ ಅಭಿಮಾನಿಗಳಲ್ಲಿತ್ತು. ಈಗ ಸುದೀಪ್ ಈ ಚಿತ್ರದ ಕುರಿತು ಅಪ್‌ಡೇಟ್ ನೀಡಿದ್ದಾರೆ. ಅದು ಚಿತ್ರೀಕರಣ ಮುಗಿಸಿರುವ ಕುರಿತು.
ಬರೋಬ್ಬರಿ 10 ತಿಂಗಳುಗಳ ಕಾಲ “ಮ್ಯಾಕ್ಸ್’ನಲ್ಲಿ ತೊಡಗಿದ್ದ ಸುದೀಪ್ ಈಗ ಚಿತ್ರೀಕರಣ ಮುಗಿಸಿರುವ ಬಗೆ ವಿಡಿಯೋವೊಂದನ್ನು ಹಾಕಿದ್ದಾರೆ. ವಿಡಿಯೋದಲ್ಲಿ ತಾವಿದ್ದ ಹೋಟೆಲ್, ಅಲ್ಲಿನ ಪರಿಸರ, ಪ್ರತಿದಿನ ಓಡಾಡುವ ದಾರಿ, ಶೂಟಿಂಗ್ ಸೆಟ್, ಮೇಕಪ್ ರೂಂ… ಸೇರಿದಂತೆ ಹಲವು ಅಂಶಗಳನ್ನು ತೋರಿಸಿದ್ದಾರೆ. ಕೊನೆಗೆ ಶೂಟಿಂಗ್ ಮುಗಿದಿರುವುದಾಗಿ ಹೇಳಿದ್ದಾರೆ.
“ಮ್ಯಾಕ್ಸ್ 10 ತಿಂಗಳ ದೀರ್ಘ ಪಯಣ. ಈ 10 ತಿಂಗಳ ಪ್ರತಿ ಕ್ಷಣವನ್ನು ನಾನು ಎಂಜಾಯ್ ಮಾಡಿದ್ದೇನೆ. ಒಳ್ಳೆಯ ತಂಡ, ಕಲಾವಿದರ ಜೊತೆ ಕೆಲಸ ಮಾಡಿದ ಖುಷಿ ಇದೆ’ ಎಂದು ಬರೆದುಕೊಂಡಿರುವ ಸುದೀಪ್, ನಿರ್ಮಾಪಕ ಧನು ಹಾಗೂ ನಿರ್ದೇಶಕ ವಿಜಯ್ ಅವರಿಗೆ ಧನ್ಯವಾದ ಹೇಳಿದ್ದಾರೆ.
ಅಂದಹಾಗೆ, “ಮ್ಯಾಕ್ಸ್’ ಚಿತ್ರ ಕೂಡಾ ಪ್ಯಾನ್ ಇಂಡಿಯಾ ಚಿತ್ರವಾಗಿದ್ದು, ಕನ್ನಡ, ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂನಲ್ಲಿ ಬಿಡುಗಡೆಯಾಗಲಿದೆ. ಈ ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತವಿದೆ.