Advertisement

ಕೆಐಎಎಲ್‌ಗೆ ದಶಕದ ಸಂಭ್ರಮ

11:53 AM May 25, 2018 | Team Udayavani |

ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (ಕೆಐಎಎಲ್‌) ಈಗ ದಶಮಾನೋತ್ಸವದ ಸಂಭ್ರಮ. 2008ರ ಮೇ 24ರಂದು ಆರಂಭಗೊಂಡ ಪ್ರತಿಷ್ಠಿತ ಈ ವಿಮಾನ ನಿಲ್ದಾಣವು ಇಂದು ದಕ್ಷಿಣ ಭಾರತದಲ್ಲಿ ಅತಿ ಹೆಚ್ಚು ಪ್ರಯಾಣಿಕರ ದಟ್ಟಣೆ ಹೊಂದಿರುವ ನಿಲ್ದಾಣಗಳಲ್ಲಿ ಒಂದಾಗಿದೆ.

Advertisement

ದಾಖಲೆ ಪ್ರಮಾಣದ ಪ್ರಯಾಣಿಕರ ಓಡಾಟ ಮತ್ತು ಅತ್ಯಧಿಕ ಸರಕು ಸಾಗಣೆ, ಅತ್ಯಾಧುನಿಕ ತಂತ್ರಜ್ಞಾನಗಳ ಅಳವಡಿಕೆ ಸೇರಿದಂತೆ ಈ ಅವಧಿಯಲ್ಲಿ ಹಲವಾರು ಮೈಲುಗಲ್ಲುಗಳನ್ನು ಸಾಧಿಸಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಎಲ್ಲರಿಗೂ ಅಚ್ಚುಮೆಚ್ಚು.

ಇದೇ ಕಾರಣಕ್ಕೆ ನಿಲ್ದಾಣಕ್ಕೆ ಈಗಾಗಲೇ ಹೆಲಿಟ್ಯಾಕ್ಸಿ ಬಂದಿದೆ. ಬೆಂಗಳೂರು-ಪಾಟ್ನಾ, ಬೆಂಗಳೂರು-ರಾಂಚಿ ನಡುವೆ ಜೆಟ್‌ ಏರ್‌ವೆàಸ್‌ ಹಾರಾಟ ನಡೆಸಲಿದೆ. ಮುಂದಿನ ದಿನಗಳಲ್ಲಿ ಮೆಟ್ರೋ, ಉಪನಗರ ರೈಲು ಬಂದು ಸೇರಿಕೊಳ್ಳಲಿದೆ. ಈಗ ಇನ್ನೂ ಒಂದು ಹೆಜ್ಜೆ ಮುಂದೆಹೋಗಿ ಬಯೋಮೆಟ್ರಿಕ್‌ ಆಧಾರಿತ ತಂತ್ರಜ್ಞಾನ ಪರಿಚಯಿಸಲು ಮುಂದಾಗಿದೆ. 

ಇದರಿಂದ ವಿಮಾನ ಪ್ರಯಾಣಿಕರು ಮುದ್ರಿತ ಟಿಕೆಟ್‌, ಗುರುತಿನ ಚೀಟಿಯನ್ನು ಕೈಯಲ್ಲಿ ಹಿಡಿದು ಸರದಿಯಲ್ಲಿ ನಿಲ್ಲುವ ಅವಶ್ಯಕತೆ ಇಲ್ಲ. ಆನ್‌ಲೈನ್‌ಲ್ಲಿ ಟಿಕೆಟ್‌ ಬುಕ್‌ ಮಾಡಿ, ಬಯೋಮೆಟ್ರಿಕ್‌ ಯಂತ್ರದಲ್ಲಿ ಬೆರಳು ಒತ್ತಿ ಒಳಗೆ ಪ್ರವೇಶಿಸಬಹುದು.

ಅಲ್ಲಿಂದ ನಿಲ್ದಾಣದಲ್ಲಿನ ಕ್ಯಾಮೆರಾಗಳು ಅಟೋಮೆಟಿಕ್‌ ಆಗಿ ನಿಮ್ಮ ಮುಖ ಸ್ಕ್ಯಾನ್‌ ಮಾಡುತ್ತವೆ. ಆಗ ತಾನಾಗಿಯೇ ಬೋರ್ಡಿಂಗ್‌ ಪಾಸ್‌ ಗೇಟುಗಳು ತೆರೆದುಕೊಳ್ಳುತ್ತವೆ. ಇಂತಹದ್ದೊಂದು ಅತ್ಯಾಧುನಿಕ ವ್ಯವಸ್ಥೆಯನ್ನು “ಆಧಾರ್‌’ ಮೂಲಕ ಸಾಕಾರಗೊಳಿಸಲಾಗುತ್ತಿದೆ. 

Advertisement

ಶೇ. 17.6ರಷ್ಟು ಪ್ರಗತಿ: ಹತ್ತನೇ ವರ್ಷ ಅಂದರೆ 2017-18ನೇ ಸಾಲಿನಲ್ಲಿ ಕೆಐಎಎಲ್‌ ಶೇ.17.6ರಷ್ಟು ಪ್ರಗತಿ ಸಾಧಿಸಿದೆ. ಆದರೆ, ನೆರೆಯ ಚೆನ್ನೈ ವಿಮಾನ ನಿಲ್ದಾಣವು ಇದೇ ಅವಧಿಯಲ್ಲಿ ಶೇ. 10ರಷ್ಟು ಬೆಳವಣಿಗೆ ಹೊಂದಿದೆ. ಇದು ನಿಲ್ದಾಣದ ಅಭಿವೃದ್ಧಿ ವೇಗಕ್ಕೆ ಒಂದು ಸಣ್ಣ ಉದಾಹರಣೆ ಎನ್ನುತ್ತಾರೆ ನಿಗಮದ ಅಧಿಕಾರಿಗಳು.  

26ಕ್ಕೆ ಏರ್‌ಪೋರ್ಟ್‌ ಹಬ್ಬ: ಹತ್ತು ವರ್ಷ ತುಂಬಿದ ಹಿನ್ನೆಲೆಯಲ್ಲಿ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಂಭ್ರಮ ಮನೆ ಮಾಡಿದೆ. ಈ ಹಿನ್ನೆಲೆಯಲ್ಲಿ ಮೇ 26ರಂದು “ಬಿಎಲ್‌ಆರ್‌ ಏರ್‌ಪೋರ್ಟ್‌ ಹಬ್ಬ’ ಏರ್ಪಾಡಾಗಿದೆ. ಅಂದು ಮಧ್ಯಾಹ್ನ 2ಕ್ಕೆ ವಿಮಾನ ನಿಲ್ದಾಣದ ಹಜ್‌ ಟರ್ಮಿನಲ್‌ನಲ್ಲಿ ಈ ಹಬ್ಬ ನಡೆಯಲಿದೆ. 

ಖ್ಯಾತ ಕಲಾವಿದರು ಸಭಿಕರನ್ನು ರಂಜಿಸಲಿದ್ದಾರೆ. ವಿವಿಧ ವಿಷಯಗಳ ಮೇಲೆ ನಡೆಯುವ ಕಾರ್ಯಾಗಾರಗಳು, ಆಹಾರ ಮೇಳಗಳು, ಫ್ಲಿಯಾ ಮಾರುಕಟ್ಟೆ, ಕಿಡ್ಸ್‌ ಜೋನ್‌, ಗೇಮರ್ ಪ್ಯಾರಡೈಸ್‌ ಸೇರಿದಂತೆ ಮತ್ತಿತರ ಕಾರ್ಯಕ್ರಮಗಳು ಮನರಂಜನೆಯ ರಸದೌತಣ ಉಣಬಡಿಸಲಿವೆ. 

ಗಾಯಕ ಶಾನ್‌, ಡಿಜೆ ಜಸ್‌ಮೀತ್‌, ಪರ್ಯಾಯ ರಾಕ್‌ ಬ್ಯಾಂಡ್‌ ಕಾಲ್ಪನಿಕ್‌ ಥಿಯರಿ, ಜಂಬೆ ಕಲೆಕ್ಟಿವ್‌, ಪ್ರಮುಖ ಗಾಯಕ-ಬರಹಗಾರ ಲೊಯಸುಂ, ಬೆಂಗಳೂರು ಮೂಲದ ಸಂಗೀತ ತಂಡ ಸಾಗರ್‌ಶಾಸಿ, ಉನ್ನತ ಲ್ಯಾಟಿನ್‌ ಬ್ಯಾಂಡ್‌ ಅರ್ಟಿಸನಾಟೊ ಪಲ್ಸೊ, ಮಲ್ಟಿ ಜನರೆ ಇಂಡಿ ಬ್ಯಾಂಡ್‌ ಮನ್ನಾತ್‌, ಬೆಂಗಳೂರು ರಾಕ್‌ ಬ್ಯಾಂಡ್‌ ಆತ್ಮಾ, ಸೊಲೊ ಕಲಾವಿದೆ ಸೌಂದರ್ಯ ಹಬ್ಬದ ಪ್ರಮುಖ ಆಕರ್ಷಣೆ ಆಗಲಿದ್ದಾರೆ. ಈ ಹಬ್ಬ ಮಧ್ಯರಾತ್ರಿಯವರೆಗೂ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next