Advertisement

ಖುಷ್ಕಿ ಭೂಮಿ ಕೃಷಿಕರಿಗೆ ರೈತ ಬೆಳಕಿನ ಖುಷಿ

08:15 AM Feb 17, 2018 | Team Udayavani |

“ನೇಗಿಲಯೋಗಿಯ ಹಿತಕಾಯುವ ದೀಕ್ಷೆ ತೊಟ್ಟು ನಾನು ರಾಜಕೀಯಕ್ಕೆ ಬಂದವನು’ ಎಂದು ಮುಂಗಡಪತ್ರದಲ್ಲಿ ಅನ್ನದಾತನ ಬಗ್ಗೆ ತಮಗಿರುವ ಕಾಳಜಿಯನ್ನು ವ್ಯಕ್ತಪಡಿಸಿರುವ ಮುಖ್ಯಮಂತ್ರಿಗಳು ಈ ಬಾರಿಯ ಬಜೆಟ್‌ನಲ್ಲಿ ಕೃಷಿಗೆ 5849 ಕೋಟಿ ರೂ. ಮೀಸಲಿಟ್ಟು ಅನ್ನದಾತನಿಗೆ ಹಲವಾರು ಯೋಜನೆಗಳನ್ನು ಘೋಷಿಸಿದ್ದಾರೆ.

Advertisement

 ರೈತರ ಮನೆಗಳು ಸುಖ-ಸಮೃದ್ಧಿಯಿಂದ ಸದಾ ಹಸಿರಾಗಿರಬೇಕೆಂದು ಎನ್ನುವ ಕಾಳಜಿಯನ್ನು ಪ್ರದರ್ಶಿಸುತ್ತಾ ಒಣಭೂಮಿ ರೈತ ಸಮುದಾಯದ ಹಿತ ರಕ್ಷಣೆಗೆ ಯೋಜನೆ ಪ್ರಕಟಿಸಿದ್ದಾರೆ. ಖುಷ್ಕಿ ಭೂಮಿಯ ರೈತರ ಸಂಕಷ್ಟಗಳಿಗೆ ಸ್ಪಂದಿಸಲು ಅವರಿಗೆ ನೇರ ಆದಾಯದ ನೆರವು ನೀಡುವ ” ರೈತ ಬೆಳಕು ‘ ಎಂಬ ವಿಶಿಷ್ಟ ಯೋಜನೆ ಘೋಷಿಸಲಾಗಿದೆ.

 ಈ ಯೋಜನೆಯಲ್ಲಿ ಮಳೆ ಆಶ್ರಿತ ಬೆಳೆ ಬೆಳೆಯುವ ರೈತನಿಗೆ ಗರಿಷ್ಠ 10,000 ರೂ. ಗಳ ಮಿತಿಗೊಳಪಟ್ಟು ಪ್ರತಿ ಹೆಕ್ಟೇರ್‌ಗೆ 5 ಸಾವಿರ ರೂ. ನೀಡಲಾಗುತ್ತದೆ.ಈ ಹಣವನ್ನು ರೈತರ ಬ್ಯಾಂಕ್‌ ಖಾತೆಗೆ ನೇರವಾಗಿ ವರ್ಗಾವಣೆ ಮಾಡಲಾಗುತ್ತದೆ. ಇದಕ್ಕಾಗಿ 3500 ಕೋಟಿ ರೂ. ಮೀಸಲಿಡಲಾಗಿದ್ದು 70 ಲಕ್ಷ ರೈತರು ಈ ಯೋಜನೆಯ ಪ್ರಯೋಜನ ಪಡೆಯಲಿದ್ದಾರೆ.

ಕೃಷಿ ಭಾಗ್ಯ ಯೋಜನೆಯನ್ನು ಈ ವರ್ಷವೂ ಮುಂದುವರಿಸಲಾಗಿದ್ದು ಅದಕ್ಕಾಗಿ 600 ಕೋಟಿ ರೂ. ಅನುದಾನ ತೆಗೆದಿಡಲಾಗಿದೆ.ಬರ ಪರಿಸ್ಥಿತಿ ಸಂದರ್ಭದಲ್ಲಿ ರೈತರ ನೆರವಿಗೆ ಧಾವಿಸಲು ಇರುವ ” ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫ‌ಸಲ್‌ ಬಿಮಾ ಯೋಜನೆ” ಗೆ ರಾಜ್ಯದ ವಂತಿಗೆ ಭರಿಸಲು 845 ಕೋಟಿ ರೂ. ಬಜೆಟ್‌ನಲ್ಲಿ ಮೀಸಲಿಸಲಾಗಿದೆ. ಸಾವಯವ ಕೃಷಿಗೆ ಬಜೆಟ್‌ನಲ್ಲಿ ಆದ್ಯತೆ  ಮುಖ್ಯಮಂತ್ರಿಗಳು ನೀಡಿದ್ದು 1.5 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಸಾವಯವ ಕೃಷಿ  ಕೈಗೆತ್ತಿಕೊಳ್ಳಲು 50 ಕೋಟಿ ರೂ.ಹಣ ಒದಗಿಸಲಾಗಿದೆ.ರಾಜ್ಯದಲ್ಲಿ ಬೆಳೆಯಲಾಗುತ್ತಿರುವ ಸಿರಿಧಾನ್ಯಗಳ ಪ್ರದೇಶವನ್ನು 42 ಸಾವಿರ ಹೆಕ್ಟೇರ್‌ ನಿಂದ 60 ಸಾವಿರ ಹೆಕ್ಟೇರ್‌ಗೆ ವಿಸ್ತರಿಸಲು ಬಜೆಟ್‌ನಲ್ಲಿ ಪ್ರಸ್ತಾಪಿಸಲಾಗಿದೆ.  ನೆಲಗಡಲೆಗೆ ಉತ್ತೇಜನ ನೀಡಲು 50 ಕೋಟಿ ರೂ. ವಿಶೇಷ ಪ್ಯಾಕೇಜನ್ನು ಘೋಷಿಸಲಾಗಿದೆ. ತುಮಕೂರು ಜಿಲ್ಲೆಯ ಪಾವಗಡ, ಸಿರಾ ಮತ್ತು ಮಧುಗಿರಿ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು, ಚಳ್ಳಕೆರೆ ತಾಲೂಕುಗಳ ರೈತರಿಗೆ  ಇದರ ಲಾಭ ದೊರೆಯಲಿದೆ.ಕೃಷಿ ಚಟುವಟಿಕೆಯಲ್ಲಿ ನಿರತರಾಗಿದ್ದಾಗ ಹಾವು ಕಡಿತದಿಂದ ಆಕಸ್ಮಿಕ ವಾಗಿ ಅಸುನೀಗಿದ ರೈತರ ಮತ್ತು ಕೃಷಿ ಕಾರ್ಮಿಕರ ಕುಟುಂಬಕ್ಕೆ ನೀಡಲಾಗುತ್ತಿದ್ದ ಪರಿಹಾರ ಧನವನ್ನು 2 ಲಕ್ಷ ರೂ.ಗಳಿಗೆ ದ್ವಿಗುಣ ಗೊಳಿಸಲಾಗಿದೆ. ಹಾಗೆಯೇ ಬೆಳೆ ಕಟಾವಿನ ನಂತರ ಶೇಖರಿಸಲ್ಪಟ್ಟ ಹುಲ್ಲು ಮೆದೆ,ಬಣವೆಗಳು ಅಗ್ನಿ ಆಕಸ್ಮಿಕಕ್ಕೆ ಒಳಗಾಗಿ ನಷ್ಟವಾದರೆ ನೀಡಲಾಗುವ ಪರಿಹಾರವನ್ನು 20 ಸಾವಿರಕ್ಕೆ ಹೆಚ್ಚಿಸಲಾಗಿದೆ.

ತೋಟಗಾರಿಕೆ: ತೋಟಗಾರಿಕೆ ಕ್ಷೇತ್ರಕ್ಕೆ ಒಟ್ಟು 995 ಕೋಟಿ ರೂ. ಹಣ ಮೀಸಲಿಡ ಲಾಗಿದೆ. ರಾಸಾಯನಿಕ ಔಷಧಿಗಳ ಸಿಂಪಡ‌ಣೆ ಇಲ್ಲದೆ ತೋಟಗಾರಿಕೆ ಬೆಳೆಗಳನ್ನು ಕೀಟ ಮತ್ತು ರೋಗಗಳಿಂದ ರಕ್ಷಿಸಿ ಅಧಿಕ ಇಳುವರಿ ಪಡೆಯಲು 1 ಲಕ್ಷ ಹೆಕ್ಟೇರ್‌ ನಲ್ಲಿ ಸಮಗ್ರ ಪೀಡೆ ಮತ್ತು ಸಮಗ್ರ ಪೋಷಕಾಂಶ ನಿರ್ವಹಣೆಗಾಗಿ ರೈತರಿಗೆ ನೆರವು ನೀಡಲು 10 ಕೋಟಿರೂ. ಅನುದಾನ ಇಡಲಾಗಿದೆ.

Advertisement

ಅಪರೂಪದ ಹಣ್ಣುಗಳಾದ ಪ್ಯಾಷನ್‌ ಹಣ್ಣು,ರಾಂಬೂತಾನ್‌, ದುರಿಯನ್‌,ಡ್ರಾಗನ್‌ ಹಣ್ಣು, ಲಿಚ್ಚಿ, ಮ್ಯಾಂಗೋಸ್ಟೀನ್‌,ಆಪಲ್‌ ಬರ್‌,ಬೇಳ್ಳೆಹಣ್ಣು,ನೇರಳೆ,ಸ್ಟ್ರಾಬೆರಿ,ಬೀಜ ರಹಿತ ಸೀತಾಫ‌ಲ ಮತ್ತು ಸೀಬೆಯ ತಳಿ ಬೆಳೆಯಲು ಕೆಂದ್ರ ಪುರಸðತ ಯೋಜನೆ ಜತೆಗೆ ರಾಜ್ಯವಲಯದಿಂದಲೂ ಬಜೆಟ್‌ನಲ್ಲಿ ಆದ್ಯತೆ ನೀಡಲಾಗಿದೆ.

ಮೃತ ರೈತರ ಸಾಲ ಮನ್ನಾ 
ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ಬೆಳೆ ಸಾಲ ಪಡೆದ ರೈತರು ಮೃತಪಟ್ಟರೆ ಅವರು ಪಡೆದ ಸಾಲದಲ್ಲಿ 1 ಲಕ್ಷ ರೂ. ತನಕ ಸಾಲದ ಹಣ ಮನ್ನಾ ಮಾಡುವ ಯೋಜನೆ ಜಾರಿಗೆ ತರುವುದನ್ನು ಬಜೆಟ್‌ನಲ್ಲಿ ಘೋಷಿಸಲಾಗಿದೆ.ಅಪೆಕ್ಸ್‌ ಬ್ಯಾಂಕ್‌ ಮತ್ತು ಡಿ.ಸಿ.ಸಿ. ಬ್ಯಾಂಕ್‌ಗಳ ಸಹಭಾಗಿತ್ವದಲ್ಲಿ ಈ ಯೋಜನೆಗೆ ತಗಲುವ ವೆಚ್ಚ ಭರಿಸಲಾಗುತ್ತದೆ.

ತೆಂಗಿನ ತೋಟ ಪುನಶ್ಚೇತನ 
3 ವರ್ಷಗಳ ಬರಗಾಲದಿಂದಾಗಿ ಹಾನಿಗೀಡಾದ ತೆಂಗಿನ ತೋಟಗಳ ರಕ್ಷಣೆಗೆ ಯೋಜನೆ ಜಾರಿಗೆ ತರಲಾಗುತ್ತದೆ. ತೆಂಗು ಬೆಳೆಗಾರರ ಹಿತ ಕಾಪಾಡಲು 5 ವರ್ಷಗಳಿಗೆ ಅನ್ವಯವಾಗುವಂತೆ ಸಮಗ್ರ ನಿರ್ವಹಣಾ ಪದ್ಧತಿಯಡಿ ಸಮಗ್ರ ಕೀಟ, ಪೋಷಕಾಂಶ ನಿರ್ವಹಣೆ, ಮರುನಾಟಿ ಮೂಲಕ ತೆಂಗಿನ ತೋಟ ಪುನಶ್ಚೇತನಗೊಳಿಸುವ ಯೋಜನೆ ಜಾರಿಗೆ ತರುವ ಕುರಿತು ಪ್ರಸ್ತಾಪಿಸಲಾಗಿದೆ.

ಹೊಸತೇನಿದೆ?
3500 ಕೋಟಿ ರೂ ವೆಚ್ಚದಲ್ಲಿ ರೈತ ಬೆಳಕು ಹೊಸ ಯೋಜನೆ ಜಾರಿ- 70 ಲಕ್ಷ ರೈತರಿಗೆ ಅನುಕೂಲ 
ಪ್ರತಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಕೃಷಿ ಸಹಕಾರಿ ಸಂಘ ಸ್ಥಾಪನೆ 
ಕೃಷಿ ಉತ್ಪನ್ನ ಮಾರುಕಟ್ಟೆಗಳಲ್ಲಿ ತಲಾ 5 ಕೋಟಿ ರೂ ವೆಚ್ಚದಲ್ಲಿ ಗೋದಾಮು ನಿರ್ಮಾಣ
ಸಿರಿಧಾನ್ಯಕ್ಕೆ ಹೆಚ್ಚಿನ ಉತ್ತೇಜನ- ಬೆಳೆ ಪ್ರದೇಶ 60 ಸಾವಿರ ಹೆಕ್ಟೇರ್‌ಗೆ ವಿಸ್ತರಣೆ
ಹಾವು ಕಡಿದು ಅಸುನೀಗಿದ ರೈತರ, ಕೃಷಿ ಕಾರ್ಮಿಕರ ಪರಿಹಾರ ಧನ 2ಲಕ್ಷಕ್ಕೇರಿಕೆ
 ಹುಲ್ಲು,ಬಣವೆ ಅಗ್ನಿ ಅನಾಹುತ ನಷ್ಟ ಪರಿಹಾರ ದ್ವಿಗುಣ- 20 ಸಾವಿರಕ್ಕೆ ಹೆಚ್ಚಳ
ಎಪಿಎಂಸಿ ಗಳ 1000 ಹಮಾಲರಿಗೆ ವಸತಿ ಸೌಲಭ್ಯ ಯೋಜನೆ

ಯಂತ್ರೋಪಕರಣಕ್ಕೆ ನೆರವು
ನೇರ ಭತ್ತ ಬಿತ್ತನೆ ಪದ್ಧತಿಯಿಂದ ಶೇ.35 ರಷ್ಟು ನೀರಿನ ಉಳಿತಾಯವಾಗುವುದರಿಂದ  ನೀರಾವರಿ ಅಚ್ಚುಕಟ್ಟು ಪ್ರದೇಶದಲ್ಲಿ ಈ ಪದ್ಧತಿಯಡಿ ಭತ್ತ ಬೆಳೆಯಲು ಬಜೆಟ್‌ನಲ್ಲಿ ಪ್ರೋತ್ಸಾಹ ನೀಡಲಾಗಿದೆ.ಕಬ್ಬು ಬೆಳೆಯಲ್ಲಿ ಲಾಭವನ್ನು ಹೆಚ್ಚಿಸಲು, ಕೂಲಿ ಕಾರ್ಮಿಕರ ಕೊರತೆ ನೀಗಿಸಲು ಯಂತ್ರೋಪಕರಣಗಳ ಬಳಕೆಗೆ ಆದ್ಯತೆ ನೀಡಲಾಗಿದೆ. ಅದಕ್ಕಾಗಿ ಕಬ್ಬು ಕಟಾವು ಯಂತ್ರಗಳಿಗೆ ಸಹಾಯಧನ ನೀಡಲು 20 ಕೋಟಿ ರೂಪಾಯಿ ಹಣ ಒದಗಿಸಲಾಗಿದೆ.

ಕೃಷಿ ಭಾಗ್ಯ: ಕೃಷಿ ಭಾಗ್ಯ ಯೋಜನೆ ಈ ವರ್ಷವೂ ಮುಂದುವರಿಕೆ.  600 ಕೋಟಿ ರೂ. ಅನುದಾನ
50 ಕೋಟಿ: ಅನುದಾನ 1.5 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಸಾವಯವ ಕೃಷಿ  ಕೈಗೆತ್ತಿಕೊಳ್ಳಲು 50 ಕೋಟಿ ರೂ. ಅನುದಾನ
995 ಕೋಟಿ  ಮೀಸಲು: ತೋಟಗಾರಿಕೆ ಕ್ಷೇತ್ರಕ್ಕೂ ಬಜೆಟ್‌ನಲ್ಲಿ ಆದ್ಯತೆ ಕೊಡಲಾಗಿದ್ದು  ಒಟ್ಟು 995 ಕೋಟಿ ರೂ.  ಮೀಸಲು 

Advertisement

Udayavani is now on Telegram. Click here to join our channel and stay updated with the latest news.

Next