ಇತ್ತೀಚೆಗೆ ತೆರೆಕಂಡ “ದಿಯಾ’ ಎಲ್ಲರಿಂದಲೂ ಮೆಚ್ಚುಗೆ ಪಡೆದ ಚಿತ್ರ. ಆ ಚಿತ್ರದಲ್ಲಿ “ದಿಯಾ’ ಪಾತ್ರ ನಿರ್ವಹಿಸಿದ ನಾಯಕಿ ಖುಷಿ ಬಗ್ಗೆಯೂ ಎಲ್ಲೆಡೆಯಿಂದ ಉತ್ತಮ ಮಾತುಗಳು ಕೇಳಿಬಂದಿದ್ದು ನಿಜ. ಹಾಗಾಗಿ, ಖುಷಿಯ ಮುಂದಿನ ಚಿತ್ರ ಯಾವುದು, ಯಾವ ಕಥೆ ಆಯ್ಕೆ ಮಾಡಿಕೊಂಡಿದ್ದಾರೆ. ಪಾತ್ರ ಹೇಗಿರಬೇಕೆಂದುಕೊಂಡಿದ್ದಾರೆ ಎಂಬ ಪ್ರಶ್ನೆಗೆ “ಸದ್ಯ ನಾನಿನ್ನೂ ಏನೂ ಪ್ಲಾನ್ ಮಾಡಿಲ್ಲ. ಬ್ಲಾಂಕ್ ಆಗಿದ್ದೇನೆ…’ ಎನ್ನುತ್ತಾರೆ.
“ಈಗ ಒಂದಷ್ಟು ಕಥೆ ಹುಡುಕಿ ಬರುತ್ತಿವೆಯಾದರೂ, ಯಾವುದನ್ನೂ ಕೇಳ್ಳೋಕೆ ಹೋಗಿಲ್ಲ. ಯಾಕೆಂದರೆ, “ದಿಯಾ’ ಸಿನಿಮಾದ ಕಥೆ, ಪಾತ್ರಕ್ಕಿಂತಲೂ ಚಾಲೆಂಜ್ ಎನಿಸುವ ಕಥೆ, ಪಾತ್ರ ಮಾಡಿದರೆ ಮಾತ್ರ, ನಾನು “ದಿಯಾ’ ಚಿತ್ರಕ್ಕಿಂತಲೂ ದಿ ಬೆಸ್ಟ್ ಸಿನಿಮಾ ಕೊಡಲು ಸಾಧ್ಯ. ಸದ್ಯಕ್ಕೆ ಯೋಚಿಸುತ್ತಿದ್ದೇನೆ. ಯಾಕೆಂದರೆ, ಬಂದ ಕಥೆ, ಪಾತ್ರ ಒಪ್ಪುವ ಪರಿಸ್ಥಿತಿಯಲ್ಲಿ ನಾನಿಲ್ಲ. ಜನರು ಈಗ “ದಿಯಾ’ಳನ್ನು ಮರೆತಿಲ್ಲ.
ಅವಳ ಗುಂಗಲ್ಲಿರುವ ಜನರಿಗೆ ಹೊಸದೇನೋ ಕೊಟ್ಟರೆ ಮಾತ್ರ ನಾನಿಲ್ಲಿ ಮತ್ತೂಮ್ಮೆ ಖುಷಿಯಾಗಿರಲು ಸಾಧ್ಯವಾಗುತ್ತದೆ’ ಎನ್ನುತ್ತಾರೆ ಅವರು. ಇನ್ನು, ಎಲ್ಲರಿಗೂ ಕನಸು ಇದ್ದಂತೆ ಖುಷಿಗೂ ಒಂದು ಕನಸಿದೆ. ನಟಿ ಆಗಿರುವ ಅವರಿಗೆ ಸ್ಟಾರ್ ಜೊತೆ ಕಾಣಿಸಿಕೊಳ್ಳಬೇಕೆಂಬುದೇ ಆ ಕನಸು. ಅಂದಹಾಗೆ, ಅವಕಾಶ ಸಿಕ್ಕರೆ ಯಾವ ಸ್ಟಾರ್ ಜೊತೆ ನಟಿಸೋಕೆ ಇಷ್ಟ ಎಂಬ ಪ್ರಶ್ನೆಗೆ, “ಯಶ್ ಮತ್ತು ರಕ್ಷಿತ್ ಶೆಟ್ಟಿ’ ಅಂತ ಥಟ್ಟನೆ ಉತ್ತರ ಕೊಡುತ್ತಾರೆ ಖುಷಿ.
“ಇದು ಸಾಧ್ಯವಾಗುತ್ತೋ ಇಲ್ಲವೋ ಗೊತ್ತಿಲ್ಲ. ಆಸೆ ಪಟ್ಟರೆ ತಪ್ಪಿಲ್ಲ. ಯಶ್ ಮತ್ತು ರಕ್ಷಿತ್‌ಶೆಟ್ಟಿ ಅವರ ಜೊತೆ ಅವಕಾಶ ಸಿಕ್ಕರೆ ನಟಿಸುವ ಆಸೆ ಇದೆ. ಅದು ನನ್ನ ಡ್ರೀಮ್ ಕೂಡ. “ದಿಯಾ’ ಸಿನಿಮಾ ನೋಡಿದ ರಕ್ಷಿತ್ ಶೆಟ್ಟಿ ಅವರು, ನಮ್ಮನ್ನು ಮಾತನಾಡಿಸಬೇಕು ಅಂತ ಅವರ ಸ್ಟುಡಿಯೋಗೆ ಕರೆಸಿದ್ದರು. ಆಗ ನನಗೆ ಅದು ಕನಸೋ, ನನಸೋ ಅನ್ನೋದೇ ಗೊತ್ತಾಗಲಿಲ್ಲ. ನಾನೇನಾ ರಕ್ಷಿತ್‌ಶೆಟ್ಟಿ ಅವರ ಮುಂದೆ ನಿಂತಿರೋದು ಅಂತೆನಿಸಿತು.
ಆಗ ರಕ್ಷಿತ್ ಸರ್, “ದಿಯಾ’ ಚೆನ್ನಾಗಿದೆ. ನಿಮ್ಮ ನಟನೆ ಕೂಡ ಸಖತ್ ಆಗಿದೆ’ ಅಂದರು. ಆಗ ನಾನು ಸರ್, ನಿಮ್ಮ ಜೊತೆ ಸೆಲ್ಫಿ ತೆಗೆದುಕೊಳ್ಳಲಾ’ ಅಂದಿದ್ದಕ್ಕೆ , “ಯಾಕೆ ಹಾಗೆ ಕೇಳ್ತೀರಿ. ನಾನೇ ನಿಮ್ಮನ್ನ ಕೇಳಬೇಕು. “ದಿಯಾ’ ಮೂಲಕ ಎಲ್ಲರಿಗೂ ನೀವು ಪಾತ್ರದ ಮೂಲಕ ಕಾಡಿದ್ದೀರಿ’ ಅಂದರು. ಅವರ ಜೊತೆ ಕೆಲಸ ಮಾಡ್ತೀನೋ ಇಲ್ಲವೋ ಗೊತ್ತಿಲ್ಲ. ಆದರೆ, ಹತ್ತಿರ ನಿಂತು ಮಾತಾಡಿಸಿದ್ದು ಖುಷಿ ಇದೆ’ ಎನ್ನುತ್ತಾರೆ ಖುಷಿ.