Advertisement

Politics: ಒಣ ಪ್ರತಿಷ್ಠೆಗಾಗಿ ಖೂಬಾ-ಚವ್ಹಾಣ ದಂಗಲ್‌

08:13 PM Aug 17, 2023 | Team Udayavani |

ಕೇಂದ್ರ ಸಚಿವ ಸಂಸದ ಭಗವಂತ ಖೂಬಾ ಮತ್ತು ಔರಾದ್‌ ಶಾಸಕ ಪ್ರಭು ಚವ್ಹಾಣ ನಡುವಿನ ವಾಕ್‌ ಸಮರ ವಿಧಾನಸಭೆ ಚುನಾವಣೆ ನಂತರ ತಾರಕಕ್ಕೇರಿದೆ. ಲೋಕಸಭೆ ಚುನಾವಣೆ ಹೊಸ್ತಿಲಲ್ಲಿ ಶಿಸ್ತಿನ ಪಕ್ಷ ಎಂದೆನಿಸಿಕೊಂಡಿರುವ ಬಿಜೆಪಿಯಲ್ಲಿ ಅಶಿಸ್ತು ತಲೆದೋರಿದೆ. ಒಣ ಪ್ರತಿಷ್ಠೆಗಾಗಿ ಇಬ್ಬರು ನಾಯಕರ ನಡುವಿನ ದಂಗಲ್‌ ಕಮಲ ಪಡೆ ನಾಯಕರಿಗೆ ತಲೆಬಿಸಿಯಾಗಿಸಿದೆ.

Advertisement

ಸಚಿವ ಖೂಬಾ ಮತ್ತು ಶಾಸಕ ಚವ್ಹಾಣ ಇಬ್ಬರ ತವರು ಕ್ಷೇತ್ರ ಔರಾದ. ಈ ಕ್ಷೇತ್ರದ ರಾಜಕೀಯವೇ ಈ ಇಬ್ಬರು ನಾಯಕರು ಮತ್ತು ಬಿಜೆಪಿ ಪಕ್ಷದೊಳಗೆ ಕಿಡಿ ಹೊತ್ತಲು ಕಾರಣವಾಗಿದೆ. ಕಳೆದ ಐದಾರು ವರ್ಷಗಳಿಂದ ನಡೆಯುತ್ತಿದ್ದ ಮುಸುಕಿನ ಗುದ್ದಾಟ, ಮನಸ್ತಾಪ ಈಗ ಚುನಾವಣೆ ಫಲಿತಾಂಶದ ಬಳಿಕ ಎಲ್ಲೆ ಮೀರಿದೆ. ಹತ್ಯೆ ಸಂಚು ಆರೋಪ ಮತ್ತು ಪರಸ್ಪರ ಮಾನನಷ್ಟ ಮೊಕದ್ದಮೆ ಹೂಡುವ ಘೋಷಣೆವರೆಗೆ ತಲುಪಿದೆ.

ಔರಾದ ಕ್ಷೇತ್ರದಲ್ಲಿ ಈಗ ಇಬ್ಬರೂ ಪ್ರಬಲ ನಾಯಕರಾಗಿ ಬೆಳೆದಿದ್ದು, 2018ರ ಚುನಾವಣೆ ನಂತರ ಇಬ್ಬರ ನಡುವೆ ಮನಸ್ತಾಪ ಹೆಚ್ಚಾಗುತ್ತಲೇ ಇತ್ತು. ಇದರಿಂದಾಗಿ ಕ್ಷೇತ್ರದಲ್ಲಿ ಎರಡು ಬಣಗಳಾಗಿ ಗುದ್ದಾಟ ಹೆಚ್ಚಿಸಿತು. ಸಂದರ್ಭ ಸಿಕ್ಕಾಗಲೆಲ್ಲ ಹಾವು- ಮುಂಗುಸಿಯಂತೆ ಹರಿಹಾಯ್ದುಕೊಳ್ಳುತ್ತಾ ಬಂದಿದ್ದರು. ವಿಧಾನಸಭೆ ಚುನಾವಣೆ ಹೊತ್ತಿನಲ್ಲಿ ಚವ್ಹಾಣ ಜತೆಗೆ ಗುರುತಿಸಿಕೊಂಡಿದ್ದ ಮತ್ತು ಪಕ್ಷದ ಕೆಲ ಪ್ರಮುಖರು ಖೂಬಾ ಆಪ್ತ ವಲಯದಲ್ಲಿ ಕಾಣಿಸಿಕೊಂಡ ಜತೆಗೆ ಕೆಲವರು ಬಹಿರಂಗವಾಗಿ ಕಾಂಗ್ರೆಸ್‌ ಪರ ಕೆಲಸ ಮಾಡಿದ್ದರು. ಈ ಎಲ್ಲ ಬೆಳವಣಿಗೆಗಳೇ ಈಗ ಖೂಬಾ ಮತ್ತು ಚವ್ಹಾಣ ನಡುವಿನ ಕಲಹ ಕಾವೇರಲು ಕಾರಣವಾಗಿದೆ.

ಚುನಾವಣೆ ಸಂದರ್ಭ ಖೂಬಾ ಅವರು ಕ್ಷೇತ್ರದಲ್ಲಿ ನನ್ನ ಪರವಾಗಿ ಕೆಲಸ ಮಾಡಲಿಲ್ಲ, ನನ್ನನ್ನು ಸೋಲಿಸಲು ಕಾಂಗ್ರೆಸ್‌ ಪರ ಕೆಲಸ ಮಾಡುವ ಮೂಲಕ ಪಕ್ಷದ್ರೋಹಿಯಾಗಿದ್ದಾರೆ ಎಂಬುದು ಶಾಸಕ ಚವ್ಹಾಣರ ಆರೋಪ. ಸಚಿವ ಖೂಬಾ ಈ ಆರೋಪಗಳನ್ನು ತಳ್ಳಿ ಹಾಕಿದ್ದಾರೆ. ಪ್ರಚಾರಕ್ಕೆ ಬರುವುದಾಗಿ ಕೇಳಿಕೊಂಡರೂ ಬೇಡ ಎಂದಿದ್ದಾರೆ. ಕ್ಷೇತ್ರದಲ್ಲಿ ಕಾರ್ಯಕರ್ತರನ್ನು ಕಡೆಗಣಿಸುತ್ತ ಬಂದಿದ್ದರಿಂದ ಅವರೆಲ್ಲರೂ ದೂರವಾಗಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಈ ಬೆಳವಣಿಗೆ ನಡುವೆ ಶಾಸಕ ಚವ್ಹಾಣ ಅವರು ಸಚಿವ ಖೂಬಾ ವಿರುದ್ಧ ಹತ್ಯೆ ಸಂಚು ಆರೋಪ ಹೊರಿಸಿರುವುದು ಕೇಸರಿ ಪಡೆಯಲ್ಲಿ ಕೋಲಾಹಲವನ್ನೇ ಎಬ್ಬಿಸಿದೆ. ಈ ಹೇಳಿಕೆಗೆ ಆಕ್ರೋಶಗೊಂಡಿರುವ ಖೂಬಾ ಅವರು, ಚವ್ಹಾಣ ವಿರುದ್ಧ ನೂರು ಕೋಟಿ ರೂ. ಮಾನಹಾನಿ ಕೇಸ್‌ ಹಾಕುವುದಾಗಿ ಹೇಳಿದ್ದಲದೆ, ಹತ್ಯೆ ಸಂಚಿನ ಆರೋಪದ ತನಿಖೆಗಾಗಿ ಎಸ್ಪಿಗೆ ಪತ್ರವನ್ನೂ ಬರೆದಿದ್ದಾರೆ. ಇತ್ತ ಶಾಸಕ ಚವ್ಹಾಣ ಸಹ ಖೂಬಾ ವಿರುದ್ಧ 200 ಕೋಟಿ ರೂ. ಮೊಕದ್ದಮೆ ಹಾಕುತ್ತೇನೆ, ಪಕ್ಷ ದ್ರೋಹ ಮಾಡಿರುವ ಬಗ್ಗೆ ದಾಖಲೆ ಸಹಿತ ಸಾಬೀತು ಮಾಡುತ್ತೇನೆ ಎಂದು ಸವಾಲು ಹಾಕಿದ್ದಾರೆ. ಖೂಬಾ ಬದಲಿ ಗೆ ಸಾಮಾನ್ಯ ಕಾರ್ಯಕರ್ತನಿಗೆ ಲೋಕಸಭೆ ಟಿಕೆಟ್‌ ನೀಡಬೇಕೆಂದು ಒತ್ತಾಯಿಸಿದ್ದಾರೆ.

Advertisement

ಇಬ್ಬರು ನಾಯಕರ ನಡುವೆ ಭಿನ್ನಮತವನ್ನು ಆರಂಭದಲ್ಲೇ ಪಕ್ಷದ ಚೌಕಟ್ಟಿನಲ್ಲಿ ಬಗೆಹರಿಸಿಕೊಳ್ಳಬೇಕಾಗಿತ್ತು. ವರಿಷ್ಠರು ಮಧ್ಯ ಪ್ರವೇಶಿಸಿ ಗುದ್ದಾಟ ನಿಯಂತ್ರಿಸುವ ಪ್ರಯತ್ನಕ್ಕೆ ಮುಂದಾಗದ ಕಾರಣ ಇದು ದೊಡ್ಡದಾಗಿ ಬೆಳೆದಿದೆ. ಲೋಕಸಭಾ ಚುನಾವಣೆ ವರ್ಷದಲ್ಲಿ ನಾಯಕರು ಕಚ್ಚಾಡುತ್ತಿರುವುದು ಬಿಜೆಪಿ ಕಾರ್ಯಕರ್ತರಲ್ಲಿ ತಳಮಳ ಹೆಚ್ಚುತ್ತಿದ್ದರೆ, ಕಾಂಗ್ರೆಸ್‌ ಪಾಳಯಕ್ಕೆ ಹಿಗ್ಗುವಂತೆ ಮಾಡಿದೆ.

ಶಶಿಕಾಂತ ಬಂಬುಳಗೆ

Advertisement

Udayavani is now on Telegram. Click here to join our channel and stay updated with the latest news.

Next