Advertisement

ಖೋಖೋ: ಮೂಡಬಿದರೆ-ಕುರುಬೂರು ಚಾಂಪಿಯನ್‌

06:42 PM Nov 15, 2022 | Team Udayavani |

ಹಂಸಭಾವಿ: ಕೃಷಿ ಸಚಿವ ಬಿ.ಸಿ. ಪಾಟೀಲ ಜನ್ಮದಿನ ನಿಮಿತ್ತ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಖೋಖೋ ಪಂದ್ಯಾವಳಿ ಪುರುಷರ ವಿಭಾಗದಲ್ಲಿ ಮೂಡಬಿದರೆ ಆಳ್ವಾಸ ತಂಡ ಹಾಗೂ ಮಹಿಳಾ ವಿಭಾಗದಲ್ಲಿ ಕಾವೇರಿ ಕಪಿಲಾ ಕುರುಬೂರು ತಂಡಗಳು ಪ್ರಥಮ ಸ್ಥಾನ ಪಡೆದಿವೆ.

Advertisement

ಗ್ರಾಮದ ಮೃತ್ಯುಂಜಯ ಸ್ಫೋರ್ಟ್ಸ್ ಕ್ಲಬ್‌ ಹಂಸಭಾವಿ, ವಿ.ಬಿ.ಸಿ. ಪಾಟೀಲ ಅಭಿಮಾನಿ ಬಳಗ ಹಂಸಭಾವಿ, ರಾಜ್ಯ ಖೋಖೋ ಸಂಸ್ಥೆ ಮತ್ತು ಜಿಲ್ಲಾ ಖೋಖೋ ಸಂಸ್ಥೆ ಆಶ್ರಯದಲ್ಲಿ ಪಂದ್ಯಾವಳಿ ಏರ್ಪಡಿಸಲಾಗಿತ್ತು. ಪುರುಷರ ವಿಭಾಗದಲ್ಲಿ ಯಂಗ್‌ ಫಯೋನಿಕ್ಸ್‌ ಬೆಂಗಳೂರು ದ್ವಿತೀಯ, ಡಿವೈಇಎಸ್‌ ದಾವಣಗೆರೆ ತಂಡ ತೃತೀಯ ಹಾಗೂ ಭದ್ರಾವತಿ ಸರ್‌ ಎಂ.ವಿ. ತಂಡ ನಾಲ್ಕನೇ ಸ್ಥಾನ ಪಡೆದಿದ್ದು, ಪುರುಷರ ತಂಡದ ಉತ್ತಮ ದಾಳಿಗಾರ ಪ್ರಶಸ್ತಿ ಡಿವೈಇಎಸ್‌ ದಾವಣಗೆರೆ ತಂಡದ ಎಂ. ತಾಸಿನ್‌, ಉತ್ತಮ ರನ್ನರ್‌ ಪ್ರಶಸ್ತಿ ಯಂಗ್‌ ಫಯೋನಿಕ್ಸ್‌ ಬೆಂಗಳೂರು ತಂಡದ ನಂದನ್‌ ಹಾಗೂ ಆಲ್‌ ರೌಂಡರ್‌ ಆಗಿ ಮೂಡಬಿದರೆ ಆಳ್ವಾಸ ತಂಡದ ಆಟಗಾರ ಮಹಿಶ್‌ ಡಿ. ಪ್ರಶಸ್ತಿ ಪಡೆದರು.

ಮಹಿಳಾ ವಿಭಾಗದಲ್ಲಿ ಆಳ್ವಾಸ ಮೂಡಬಿದರೆ ತಂಡ ದ್ವಿತೀಯ, ಕೆಕೆಒ ಕ್ಯಾತನಹಳ್ಳಿ ತೃತೀಯ, ಅತಿಥೇಯ ಮೃತ್ಯುಂಜಯ ಸ್ಫೋರ್ಟ್ಸ್ ಕ್ಲಬ್‌ ನಾಲ್ಕನೇ ಸ್ಥಾನ ಪಡೆದವು. ಉತ್ತಮ ರನ್ನರ್‌ ಆಗಿ ಕೆಕೆಒ ಕ್ಯಾತನಹಳ್ಳಿ ತಂಡದ ಅಕ್ಷತಾ, ದಾಳಿಗಾರಳಾಗಿ ಆಳ್ವಾಸ ಮುಡಬಿದರೆಯ ಆಶಾ, ಆಲ್‌ ರೌಂಡರ್‌ ಆಗಿ ಕುರುಬೂರು ತಂಡದ ಚೈತ್ರಾ, ಬೆಸ್ಟ್‌ ಆಫ್‌ ಕಮ್ಮಿಂಗ್‌ ಆಟಗಾರ್ತಿಯಾಗಿ ಗಾಯತ್ರಿ ಪ್ರಶಸ್ತಿ ಪಡೆದರು.

ಸಮಾರೋಪ ಸಮಾರಂಭದಲ್ಲಿ ಕೃಷಿ ಸಚಿವ ಬಿ.ಸಿ.ಪಾಟೀಲ ಮಾತನಾಡಿ, ಯುವ ಶಕ್ತಿ ದುಶ್ಚಟಗಳಿಗೆ ಬಲಿಯಾಗಿ ಜೀವನ ಹಾಳು ಮಾಡಿಕೊಳ್ಳುತ್ತಿದೆ. ಭಾರತದ ಭವಿಷ್ಯ ನಿರ್ಮಿಸಲು ಯುವಕರನ್ನು ಬಲಿಷ್ಠ ಮಾಡಬೇಕೆನ್ನುವ ಉದ್ದೇಶದಿಂದ ತಾಲೂಕಿನಲ್ಲಿ ಈ ರೀತಿಯ ಕ್ರೀಡೆ ಆಯೋಜಿಸಿದ್ದೇನೆ ಎಂದರು.

ರಾಜ್ಯ ಖೋಖೋ ಸಂಸ್ಥೆ ಅಧ್ಯಕ್ಷ ಲೋಕೇಶ್ವರ ಮಾತನಾಡಿ, ಸಚಿವರು ಈ ತರಹದ ಪಂದ್ಯಾವಳಿ ಪ್ರತಿ ವರ್ಷ ನಡೆಸಿಕೊಡಬೇಕು. ಒಂದು ಕ್ರೀಡಾ ಸಂಸ್ಥೆಗೆ ಮ್ಯಾಟಿನ ವ್ಯವಸ್ಥೆ ಶಾಸಕರ ಅನುದಾನದಲ್ಲಿ ಕಲ್ಪಿಸಬೇಕು. ನಮ್ಮ ಖೋಖೋ ಸಂಸ್ಥೆಗೆ ಪೋಷಕರಾಗುವಂತೆ ಮನವಿ ಮಾಡಿದಾಗ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದರು.

Advertisement

ಕುರುಬೂರಿನ ಕಾವೇರಿ ಕಪಿಲಾ ತಂಡದ ಆಟಗಾರ್ತಿ ವೀಣಾ ಎಂ. ಗೆ ಸಚಿವ ಬಿ.ಸಿ. ಪಾಟೀಲ ವೈಯಕ್ತಿವಾಗಿ 50 ಸಾವಿರ ರೂ. ಬಹುಮಾನ ನೀಡಿದರು. ಈ ವೇಳೆ ದೊಡ್ಡಗೌಡ ಪಾಟೀಲ, ಎನ್‌.ಸಿ. ಅಕ್ಕಿ, ಮೃತ್ಯುಂಜಯ ಹುಚಗೊಂಡ್ರ, ರಾಜು ಹುಚಗೊಂಡ್ರ, ಗಜೇಂದ್ರ ಎಲಿ, ರಾಜ್ಯ ಖೋಖೋ ಸಂಸ್ಥೆ ಉಪಾಧ್ಯಕ್ಷ ಶಿವಯೋಗಿ ಎಲಿ, ಹಾವೇರಿ ಖೋಖೋ ಸಂಸ್ಥೆ ಅಧ್ಯಕ್ಷ ಕರ್ಜಗಿ, ಅಶೋಕ ರಾಮನಗೌಡ್ರ, ಶಿವಯೋಗಿ ಬಸಪ್ಪನವರ, ಮುಸ್ತುಫಾ ಪ್ಯಾಟಿ, ಲಿಂಗರಾಜ ಎಲಿ, ಅಶೋಕ ತಿಳವಳ್ಳಿ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next