ಧಾರವಾಡ: ರಾಜ್ಯ ಒಲಿಂಪಿಕ್ಸ್ ಕ್ರೀಡಾಕೂಟದ ಖೋಖೋದ ರೋಚಕ ಫೈನಲ್ ಪಂದ್ಯದಲ್ಲಿ ಧಾರವಾಡ ತಂಡ ಗೆಲುವು ಸಾಧಿಸಿ ಚಾಂಪಿಯನ್ ಪಟ್ಟ ಪಡೆಯುವ ಮೂಲಕ ಚಿನ್ನವನ್ನು ಮುಡಿಗೇರಿಸಿಕೊಂಡಿತು.
ಇಲ್ಲಿನ ಯುಪಿಎಸ್ ಶಾಲೆಯ ಕ್ರೀಡಾಂಗಣದ ಮೈದಾನದಲ್ಲಿ ಗುರುವಾರ ನಡೆದ ಫೈನಲ್ ಪಂದ್ಯದಲ್ಲಿ ತನ್ನ ಎದುರಾಳಿಯಾಗಿದ್ದ ಬೆಳಗಾವಿ ತಂಡವನ್ನು 15-14 ಅಂಕಗಳೊಂದಿಗೆ ಸೋಲಿಸಿದ ಧಾರವಾಡ ಖೋಖೋ ಪಟುಗಳು ಬಿರುಸಿನ ಆಟ, ಕ್ರೀಡಾಪ್ರಿಯರ ಚಪ್ಪಾಳೆ, ಕೇಕೆ ಮತ್ತು ಶಿಳ್ಳೆಗಳ ಮಧ್ಯೆ ವಿಜಯದ ಮಾಲೆಯನ್ನು ತಮ್ಮ ಕೊರಳಿಗೆ ಹಾಕಿಕೊಂಡು ಚಾಂಪಿಯನ್ ಟ್ರೋμ ತಮ್ಮದಾಗಿಸಿಕೊಂಡರು.
ಧಾರವಾಡ ತಂಡದಲ್ಲಿ ಬಸವರಾಜ 2 ನಿಮಿಷ 50 ಸೆಕೆಂಡ್ ಆಟ ಆಡುವ ಮೂಲಕ ಒಬ್ಬರನ್ನು ಔಟ್ ಮಾಡಿದರೆ, ಮಹಾಂತೇಶ 1 ನಿಮಿಷ 10 ಸೆಕೆಂಡ್ ಹಾಗೂ ಮಂಜುನಾಥ 1ನಿಮಿಷ 40ಸೆಕೆಂಡ್ ಆಡಿ 3 ಹುದ್ದರಿಗಳನ್ನು ಔಟ್ ಮಾಡಿದ್ದು ಧಾರವಾಡ ತಂಡದ ಗೆಲುವಿಗೆ ವರದಾನವಾಯಿತು.
ಇನ್ನು ರನ್ನರ್ ಅಪ್ ಸ್ಥಾನ ಬೆಳಗಾವಿ ತಂಡದ ಆಟಗಾರರಾದ ರಾಜು ಪಿ.1 ನಿಮಿಷ 50 ಸೆಕೆಂಡ್ ಆಡಿ ಒಂದು ಹುದ್ದರಿ ಔಟ್ ಮಾಡಿದರೆ, ಕಿಶೋರ 1ನಿಮಿಷ 50 ಸೆಕೆಂಡ್ ಆಡಿ 3 ಹುದ್ದರಿಗಳನ್ನು ಔಟ್ ಮಾಡಿ ತಂಡವನ್ನು ಸಮಬಲದ ಹೋರಾಟಕ್ಕೆ ತಂದು ನಿಲ್ಲಿಸಿದರು.
ತುಮಕೂರಿಗೆ ಕಂಚು: ಖೋಖೋದಲ್ಲಿ ಮೂರನೇ ಸ್ಥಾನಕ್ಕಾಗಿ ಸೆಣಸಾಡಿದ ತುಮಕೂರು-ಹಾವೇರಿ ತಂಡಗಳ ಪೈಕಿ ಕೊನೆಗೆ ತುಮಕೂರು ತಂಡ 15-13 ಅಂಕಗಳಿಂದ ಜಯ ಗಳಿಸಿತು. ತುಮಕೂರಿನ ಪೈಕಿ ಭರತ್ 2 ನಿಮಿಷ 10 ಸೆಕೆಂಡ್ ಆಟವಾಡಿ 3 ಹುದ್ದರಿಗಳನ್ನು ಔಟ್ ಮಾಡಿದ್ದು, ತಂಡ ಗೆಲ್ಲುವುದಕ್ಕೆ ವರದಾನವಾಯಿತು. ಹಾವೇರಿ ತಂಡದ ಪರ ದರ್ಶನ ಮತ್ತು ಚಂದ್ರು ಉತ್ತಮ ಆಟ ಪ್ರದರ್ಶಿಸಿದರಾದರೂ ತಂಡವನ್ನು ಕಂಚಿಗೂ ತಂದು ನಿಲ್ಲಿಸುವುದು ಸಾಧ್ಯವಾಗಲಿಲ್ಲ.