ಹುಬ್ಬಳ್ಳಿ: ಉತ್ತರ ಕನ್ನಡ ಜಿಲ್ಲೆ ಅಂಕೋಲಾದ ಖೇಣಿಯಲ್ಲಿ ಸಜ್ಜನ ಜಿಂದಾಲ್ ಒಡೆತನದ ಜೆಎಸ್‌ಡಬ್ಲ್ಯು ಇನ್‌ಫ್ರಾಸ್ಟ್ರಕ್ಚರ್ ಲಿಮಿಟೆಡ್‌ನಿಂದ ಗ್ರೀನ್ ಫೀಲ್ಡ್ ವಾಣಿಜ್ಯ ಬಂದರು ಸ್ಥಾಪಿಸುತ್ತಿರುವುದಕ್ಕೆ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಹರ್ಷ
ವ್ಯಕ್ತಪಡಿಸಿದೆ.
ಬಂದರು ಸ್ಥಾಪನೆಯು ದಕ್ಷಿಣ ಭಾರತದ ಪೂರ್ವ-ಪಶ್ಚಿಮ ಕರಾವಳಿಯಲ್ಲಿ ಹೆಚ್ಚಿನ ರಫ್ತು ವಹಿವಾಟು ಉತ್ತೇಜಿಸಲು ಪೂರಕವಾಗಿದೆ. ಮಂಗಳೂರು ಮತ್ತು ಗೋವಾದ ಮಡಗಾಂವ್‌ಗೆ ಇರುವ ಮಧ್ಯದ ಸ್ಥಳದಲ್ಲಿ ಸ್ಥಾಪಿತಗೊಳ್ಳುತ್ತಿರುವ ಈ ಬಂದರು
ಅಂದಾಜು 4,119 ಕೋಟಿ ರೂ. ವೆಚ್ಚದ ಯೋಜನೆಯಾಗಿದ್ದು, 5 ವರ್ಷಗಳಲ್ಲಿ ಕಾಮಗಾರಿ ಪೂರ್ಣಗೊಳಿಸುವ ಭರವಸೆ ನೀಡಲಾಗಿದೆ. ಬಂದರು ಕಲ್ಲಿದ್ದಲು, ಕೋಕ್‌ಗಳನ್ನು ಇಳಿಸುವಿಕೆಗೆ, ಹಂತ ಹಂತವಾಗಿ ಕಬ್ಬಿಣದ ಅದಿರು, ಸುಣ್ಣದಕಲ್ಲು
ಹಾಗೂ ಡೋಲೋಮೈಟ್‌ಗಳ ಸಾಗಾಣಿಕೆಗೆ ಉಪಯೋಗವಾಗಲಿದೆ.
ಅಂಕೋಲಾದಲ್ಲಿ ಕೊಂಕಣ ರೈಲು ಹಾದು ಹೋಗುವುದರಿಂದ ಈ ಬಂದರಿಗೆ ಮತ್ತಷ್ಟು ಅನುಕೂಲವಾಗಲಿದೆ. ಅಲ್ಲದೇ ಬಳ್ಳಾರಿ, ಹೊಸಪೇಟೆ, ಹುಬ್ಬಳ್ಳಿ, ಕಲಬುರಗಿ ಸೇರಿದಂತೆ ಉತ್ತರ ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕ ಪ್ರದೇಶಗಳಿಗೆ ಈ ಬಂದರಿನಿಂದ ಹೆಚ್ಚು ಅನುಕೂಲವಾಗಲಿದೆ.
ದೇಶದ ಒಟ್ಟು ಬಂದರು ಸರಕುಗಳ: ಪೈಕಿ ರಾಜ್ಯ ಕೇವಲ ಶೇ.4.5 ವಹಿವಾಟು ನಿರ್ವಹಿಸುತ್ತಿದೆ. 2035ರ ವೇಳೆಗೆ ಕರ್ನಾಟಕದ ಬಂದರು ಸರಕು 117 ಮಿಲಿಯನ್ ಮೆಟ್ರಿಕ್ ಟನ್ ತಲುಪುವ ನಿರೀಕ್ಷೆ ಇದ್ದು, ಇದಕ್ಕೆ ಪೂರಕವಾಗಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಹೊಸ ವಾಣಿಜ್ಯ ಬಂದರು ನಿರ್ಮಾಣವಾಗುತ್ತಿದೆ. ಇದಕ್ಕೆ ಮತ್ತಷ್ಟು ಪೂರಕವಾಗಿ ರಫ್ತು ಉತ್ತೇಜಿಸುವ ಹಾಗೂ ಪ್ರವಾಸೋದ್ಯಮಕ್ಕೆ ಅನುಕೂಲವಾಗುವ ಉದ್ದೇಶದಿಂದ ಈಗಾಗಲೇ ಪ್ರಸ್ತಾವನೆಯಲ್ಲಿರುವ ಹುಬ್ಬಳ್ಳಿ-ಅಂಕೋಲಾ ರೈಲ್ವೆ ಮಾರ್ಗ ಪ್ರಾರಂಭಿಸಿದಲ್ಲಿ ಹೆಚ್ಚಿನ ಅನುಕೂಲವಾಗಲಿದೆ. ಕೇಂದ್ರ ಹಾಗೂ ರಾಜ್ಯ ಸರಕಾರಗಳು ಈ ಯೋಜನೆಗಿರುವ ಕಾನೂನು ಹಾಗೂ ಪರಿಸರ ಸಂಬಂಧಿ ತೊಡಕುಗಳನ್ನು ನಿವಾರಿಸಿ ಶೀಘ್ರವಾಗಿ ಹುಬ್ಬಳ್ಳಿ-ಅಂಕೋಲಾ ರೈಲ್ವೆ ಯೋಜನೆ
ಪ್ರಾರಂಭಿಸಬೇಕೆಂದು ಸಂಸ್ಥೆಯ ಅಧ್ಯಕ್ಷ ಎಸ್.ಪಿ. ಸಂಶಿಮಠ ತಿಳಿಸಿದ್ದಾರೆ.
ಕರ್ನಾಟಕ ಸರಕಾರ ಹಾಗೂ ಕರ್ನಾಟಕ ಕಡಲು ಅಭಿವೃದ್ಧಿ ಮಂಡಳಿಯಿಂದ ಬಂದರು ನಿರ್ಮಾಣಕ್ಕೆ ಅನುಮತಿ ಪಡೆದುಕೊಂಡಿರುವ ಜೆಎಸ್‌ಡಬ್ಲೂ ಕಂಪನಿಯು ಎರಡು ವರ್ಷಗಳಲ್ಲಿ ಇಲಾಖೆಗಳಿಗೆ ಸಂಬಂಧಿ ಸಿದ ಅನುಮತಿ ಸೇರಿದಂತೆ ಎಲ್ಲ ರೀತಿ ಕಾನೂನು ಪ್ರಕ್ರಿಯೆ ಮುಗಿಸಿ, ಮುಂದಿನ ಮೂರು ವರ್ಷಗಳಲ್ಲಿ ಕಾಮಗಾರಿ ಪೂರ್ಣಗೊಳಿಸಿ, 6ನೇ
ವರ್ಷದಿಂದ ಬಂದರು ಕಾರ್ಯಾರಂಭ ಮಾಡಿದಲ್ಲಿ ಈ ಭಾಗ ಅಭಿವೃದ್ಧಿ ಹೊಂದುವುದರೊಂದಿಗೆ ಹೆಚ್ಚಿನ ರಫ್ತು
ವಹಿವಾಟಿಗೆ ಅನುಕೂಲವಾಗಲಿದೆ ಎಂದು ಸಂಸ್ಥೆ ಉಪಾಧ್ಯಕ್ಷರಾದ ಸಂದೀಪ ಬಿಡಸಾರಿಯಾ, ಪ್ರವೀಣ ಅಗಡಿ, ವೀರೇಶ ಸಿ.ಮೊಟಗಿ, ಗೌರವ ಕಾರ್ಯದರ್ಶಿ ರವೀಂದ್ರ ಎಸ್. ಬಳಿಗಾರ, ಗೌರವ ಕಾರ್ಯದರ್ಶಿ ಮಹೇಂದ್ರ ಸಿಂಘಿ ತಿಳಿಸಿದ್ದಾರೆ.