ನವದೆಹಲಿ: ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯಲ್ಲಿ ಶಿಕ್ಷೆಗೆ ಗುರಿಯಾಗಿರುವ ರಾಹುಲ್ ಗಾಂಧಿ ಒಬಿಸಿಗಳನ್ನು ಅವಮಾನಿಸಿದ್ದಾರೆ ಎಂಬ ಬಿಜೆಪಿಯ ಆರೋಪದ ಬಗ್ಗೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭಾನುವಾರ ವಾಗ್ದಾಳಿ ನಡೆಸಿದ್ದು, ನೀರವ್ ಮೋದಿ ಮತ್ತು ಲಲಿತ್ ಮೋದಿಯಂತಹ ಪರಾರಿಯಾಗಿರುವ ವಂಚಕರನ್ನು ಟೀಕಿಸಿದರೆ ಆಡಳಿತ ಪಕ್ಷಕ್ಕೆ ಏಕೆ ನೋವಾಗಿದೆ ಎಂದು ಪ್ರಶ್ನಿಸಿದ್ದಾರೆ.
ರಾಜ್‌ಘಾಟ್‌ನ ಹೊರಗೆ ಕಾಂಗ್ರೆಸ್‌ನ ದಿನವಿಡೀ ನಡೆದ “ಸಂಕಲ್ಪ ಸತ್ಯಾಗ್ರಹ” ದಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಖರ್ಗೆ, ಪ್ರಜಾಪ್ರಭುತ್ವವನ್ನು ಉಳಿಸಲು ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್‌ನೊಂದಿಗೆ ನಿಂತಿದ್ದಕ್ಕಾಗಿ ಎಲ್ಲಾ ವಿರೋಧ ಪಕ್ಷಗಳಿಗೆ ಧನ್ಯವಾದ ಹೇಳಿದರು.
“ಇದು ಕೇವಲ ಒಂದು ಸತ್ಯಾಗ್ರಹ ಆದರೆ ದೇಶದಾದ್ಯಂತ ಹಲವಾರು ಸತ್ಯಾಗ್ರಹಗಳು ನಡೆಯುತ್ತವೆ. ಸಂವಿಧಾನ, ಪ್ರಜಾಪ್ರಭುತ್ವ ಮತ್ತು ವಾಕ್ ಸ್ವಾತಂತ್ರ್ಯವನ್ನು ಉಳಿಸಲು ನಾವು ಯಾವುದೇ ತ್ಯಾಗವನ್ನು ಮಾಡುತ್ತೇವೆ ಎಂದರು.
ಈಗ ಒಬಿಸಿ ಬಗ್ಗೆ ಮಾತನಾಡುತ್ತಾರೆ, ಲಲಿತ್ ಮೋದಿ ಒಬಿಸಿ, ನೀರವ್ ಮೋದಿ ಒಬಿಸಿ, ಮೆಹುಲ್ ಚೋಕ್ಸಿ ಒಬಿಸಿ, ಅವರು ಜನರ ಹಣ ಹಿಡಿದು ಓಡಿಹೋದರು. ಅವರು ಪಲಾಯನವಾದಿಗಳಾಗಿದ್ದರೆ ಅವರನ್ನು ಟೀಕಿಸಿದರೆ ನಿಮಗೇಕೆ ನೋವಾಗುತ್ತದೆ. ದೇಶ ಉಳಿಸುವ ಕೆಲಸ ಮಾಡುವವರನ್ನು ಬಿಜೆಪಿಯವರು ಶಿಕ್ಷಿಸುತ್ತೀರಿ ಮತ್ತು ದೇಶವನ್ನು ಲೂಟಿ ಮಾಡುವವರನ್ನು ವಿದೇಶಕ್ಕೆ ಕಳುಹಿಸುತ್ತೀರಿ ಎಂದು ಕಿಡಿ ಕಾರಿದರು.
“ರಾಹುಲ್ ಗಾಂಧಿ ಅವರು ಈ ದೇಶದ ಜನರಿಗಾಗಿ, ಮಹಿಳೆಯರಿಗಾಗಿ, ಯುವಕರಿಗಾಗಿ, ನಿರುದ್ಯೋಗ ಮತ್ತು ಹಣದುಬ್ಬರದ ವಿರುದ್ಧ ಹೋರಾಡುತ್ತಿದ್ದಾರೆ. ಬಿಜೆಪಿ ಸರ್ಕಾರ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಪಕ್ಷ ದುರ್ಬಲವಾಗಿದೆ ಎಂದು ಭಾವಿಸುತ್ತಾರೆ ಆದರೆ ಯಾರಾದರೂ ಅಹಂಕಾರದಿಂದ ನಮ್ಮನ್ನು ತುಳಿಯಲು ಪ್ರಯತ್ನಿಸಿದರೆ, ನಾವು ತಕ್ಕ ಉತ್ತರವನ್ನು ನೀಡುತ್ತೇವೆ ಎಂಬುದನ್ನು ಅವರು ತಿಳಿದುಕೊಳ್ಳಬೇಕು” ಎಂದರು.
”ಕೋಲಾರದಲ್ಲಿ ಹೇಳಿದ್ದಕ್ಕೆ ಸೂರತ್‌ನಲ್ಲಿ ಕೇಸ್ ಹಾಕಿದ್ದಾರೆ. ನಿಮಗೆ ಧೈರ್ಯವಿದ್ದರೆ ಕರ್ನಾಟಕದಲ್ಲಿ ಪ್ರಕರಣ ದಾಖಲಿಸಬೇಕಿತ್ತು. ಅದಾನಿ ವಿಚಾರವನ್ನು ಸಂಸತ್ತಿನಲ್ಲಿ ಮತ್ತೆ ಪ್ರಸ್ತಾಪಿಸುವ ಭಯದಲ್ಲಿ ಬಿಜೆಪಿಯವರು ಬಾಯಿ ಮುಚ್ಚಿಸಲು ಮುಂದಾಗಿದ್ದಾರೆ’ ಎಂದು ಆರೋಪಿಸಿದರು.