ಕಲಬುರಗಿ: ಚುನಾವಣ ಬಹಿರಂಗ ಪ್ರಚಾರದ ಕೊನೆಯ ದಿನದಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಮತದಾರರಲ್ಲಿ ಭಾವನಾತ್ಮಕವಾಗಿ ಮನವಿ ಮಾಡಿದ್ದಾರೆ. ಕರ್ನಾಟಕದ ಭೂಮಿ ಪುತ್ರನಾಗಿರುವ ನನ್ನನ್ನು ಎಐಸಿಸಿ ಅಧ್ಯಕ್ಷರನ್ನಾಗಿ ಮಾಡಿದ್ದಕ್ಕೆ ಹೆಮ್ಮೆ ಪಡಬೇಕು.ನನಗೆ 81 ವರ್ಷ ವಯಸ್ಸಾಗಿದ್ದು, ಯಾರಾದರೂ ನನ್ನನ್ನು ಮುಗಿಸಲು ಬಯಸಿದರೆ, ಅವರು ಮಾಡಬಹುದು. ನನ್ನ ಕೊನೆಯ ಉಸಿರು ಇರುವವರೆಗೂ ಬಡವರಿಗಾಗಿ ಹೋರಾಡುವುದನ್ನು ಮುಂದುವರಿಸುತ್ತೇನೆ ಮತ್ತು ಅವರ ಹಿತಾಸಕ್ತಿಗಳನ್ನು ರಕ್ಷಿಸಲು ಪ್ರಯತ್ನಿಸುತ್ತೇನೆ ಎಂದು ಹೇಳಿದ್ದಾರೆ.
ಕಲಬುರಗಿಯಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ”ಯಾರೂ ನನ್ನನ್ನು ಸುಲಭವಾಗಿ ಮುಗಿಸಲು ಸಾಧ್ಯವಿಲ್ಲ. “ನನ್ನನ್ನು ರಕ್ಷಿಸಲು ಬಾಬಾಸಾಹೇಬರ ಸಂವಿಧಾನವಿದೆ, ಕಲಬುರಗಿ ಮತ್ತು ಕರ್ನಾಟಕದ ಜನರು ನನ್ನ ಹಿಂದೆ ಇದ್ದಾರೆ. ಈಗ ಎಐಸಿಸಿ ಅಧ್ಯಕ್ಷರಾದ ನಂತರ ದೇಶದ ಜನತೆ ನನ್ನ ಬೆನ್ನಿಗಿದ್ದಾರೆ. ನೀವು ನನ್ನನ್ನು ಮತ್ತು ನನ್ನ ಕುಟುಂಬವನ್ನು ಮುಗಿಸಬಹುದು … ನಾನು ಹೋದರೆ, ಬೇರೆಯವರು ಹೊರಹೊಮ್ಮಬಹುದು”ಎಂದರು.
ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಠೋಡ್ ಅವರು ಖರ್ಗೆ, ಅವರ ಪತ್ನಿ ಮತ್ತು ಅವರ ಇಡೀ ಕುಟುಂಬವನ್ನು ಅಳಿಸಿಹಾಕಲು ಸಂಚು ರೂಪಿಸಲಾಗಿದೆ ಎಂದು ಕಾಂಗ್ರೆಸ್ ಆರೋಪಿಸಿತ್ತು.ಖರ್ಗೆ, ಅವರ ಪತ್ನಿ ಮತ್ತು ಮಕ್ಕಳನ್ನು ನಿರ್ನಾಮ ಮಾಡುವುದಾಗಿ ಕನ್ನಡದಲ್ಲಿ ಹೇಳಿರುವ ಆಡಿಯೋ ರೆಕಾರ್ಡಿಂಗ್ ಅನ್ನು ಹಂಚಿಕೊಂಡಿತ್ತು.
“ನನ್ನನ್ನು ಮುಗಿಸಲು ಬಿಜೆಪಿ ನಾಯಕರ ಮನಸ್ಸಿಗೆ ಬಂದಿರಬಹುದು ಎಂದು ತೋರುತ್ತದೆ. ಇಲ್ಲದೇ ಹೋದರೆ ಖರ್ಗೆ ಮತ್ತು ಕುಟುಂಬವನ್ನು ಮುಗಿಸಬೇಕು ಎಂದು ಹೇಳುವ ಧೈರ್ಯ ಯಾರಿಗಿದೆ? ಅವರು ಹೇಳಬೇಕಾದರೆ ಬಿಜೆಪಿಯ ಕೆಲವು ನಾಯಕರು ಅವರ ಹಿಂದೆ ಇರಬೇಕು, ಇಲ್ಲದಿದ್ದರೆ ಹೇಳುವುದಿಲ್ಲ” ಎಂದರು.
ರಾಥೋಡ್ ಅವರು ಆರೋಪಗಳನ್ನು ಸಾರಾಸಗಟಾಗಿ ತಿರಸ್ಕರಿಸಿ, “ಇದೆಲ್ಲ ಸುಳ್ಳು. ಅವರು ಕೆಲವು ನಕಲಿ ಆಡಿಯೋವನ್ನು ಪ್ಲೇ ಮಾಡುತ್ತಿದ್ದಾರೆ. ಸೋಲಿನ ಭೀತಿಯಿಂದ ಕಾಂಗ್ರೆಸ್ ಆಧಾರ ರಹಿತ ಆರೋಪ ಮಾಡುತ್ತಿದೆ” ಎಂದು ಪ್ರತಿಕ್ರಿಯೆ ನೀಡಿದ್ದಾರೆ.