Advertisement

Mallikarjun Kharge: ಕುಟುಂಬ ವಿರುದ್ಧಲೋಕಾಯುಕ್ತಕ್ಕೆ ದೂರು

12:10 AM Sep 28, 2024 | Team Udayavani |

ಬೆಂಗಳೂರು: ನಗರದ ಎರಡು ಬೇರೆ-ಬೇರೆ ಪ್ರದೇಶಗಳಲ್ಲಿ ತಮ್ಮ ಅಧಿಕಾರ ಮತ್ತು ರಾಜಕೀಯ ಪ್ರಭಾವ ಬಳಸಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತವರ ಕುಟುಂಬದವರು ಸರಕಾರಿ ಸ್ವತ್ತನ್ನು ಹಂಚಿಕೆ ಮಾಡಿಸಿಕೊಂಡಿದ್ದು ಈ ಸಂಬಂಧ ತನಿಖೆ ನಡೆಸುವಂತೆ ಕೋರಿ ಬಿಜೆಪಿ ಮುಖಂಡ ಎನ್‌.ಆರ್‌. ರಮೇಶ್‌ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದಾರೆ.

Advertisement

ಶುಕ್ರವಾರ ಲೋಕಾಯುಕ್ತ ಕಚೇರಿಗೆ ತೆರಳಿ 394 ಪುಟಗಳ ದಾಖಲೆಯನ್ನು ಅಧಿಕಾರಿಗಳಿಗೆ ನೀಡಿ ಭೂ ಹಂಚಿಕೆ ಪ್ರಕರಣದ ಮಾಹಿತಿ ನೀಡಿದರು. ಕಾನೂನುಗಳನ್ನು ಗಾಳಿಗೆ ತೂರಿ ಖರ್ಗೆ ಕುಟುಂಬಸ್ಥರು “ಸಿದ್ಧಾರ್ಥ ವಿಹಾರ ಟ್ರಸ್ಟ್‌’ ಹೆಸರಿನಲ್ಲಿ ಸರಕಾರಿ ಸ್ವತ್ತನ್ನು ಮಂಜೂರು ಮಾಡಿಸಿಕೊಂಡಿದ್ದಾರೆ. ತಮ್ಮ ರಾಜಕೀಯ ಪ್ರಭಾವ ಬಳಸಿ ಕೋಟ್ಯಂತರ ರೂ. ಸರಕಾರಿ ಆಸ್ತಿ ಹಂಚಿಕೆ ಮಾಡಿಸಿಕೊಂಡಿದ್ದಾರೆ. ಈ ಸಂಬಂಧ ತನಿಖೆ ನಡೆಸಬೇಕು ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಒಂದೇ ಟ್ರಸ್ಟ್‌ 2
ಕಡೆ ಸಿಎ ನಿವೇಶನ
ಈ ವೇಳೆ ಮಾತನಾಡಿದ ಎನ್‌.ಆರ್‌. ರಮೇಶ್‌, ಖರ್ಗೆ ಕುಟುಂಬ ತಮ್ಮ ರಾಜಕೀಯ ಪ್ರಭಾವ ಬಳಸಿ ಬಿಡಿಎ ಮತ್ತು ಕೆಐಎಡಿಬಿಯಲ್ಲಿ ನಿವೇಶನ ಪಡೆದಿದೆ. “ಸಿದ್ದಾರ್ಥ ವಿಹಾರ ಟ್ರಸ್ಟ್‌’ ಸಂಸ್ಥೆ ಹೆಸರಿಗೆ 2 ಪ್ರತ್ಯೇಕ ಪ್ರದೇಶಗಳಲ್ಲಿ 2 ಪ್ರತ್ಯೇಕ ಸರಕಾರಿ ಸಂಸ್ಥೆಗಳ ಮೂಲಕ 2 ಸಿಎ ನಿವೇಶನಗಳನ್ನು ಹಂಚಿಕೆ ಮಾಡಿಸಿಕೊಳ್ಳುವ ಮೂಲಕ ಘೋರ ವಂಚನೆ ಎಸಗಿದ್ದಾರೆ ಎಂದರು.

2014ರಲ್ಲಿ ಈ ಟ್ರಸ್ಟ್‌ ಮೂಲಕ ಶಿಕ್ಷಣ ಉದ್ದೇಶಕ್ಕಾಗಿ ಬಿಟಿಎಂ ಲೇಔಟ್‌ನಲ್ಲಿ 4ನೇ ಹಂತದಲ್ಲಿ 30 ವರ್ಷಗಳ ಗುತ್ತಿಗೆ ಅವಧಿಗೆ ಬಿಡಿಎ ನಿವೇಶನ ಪಡೆದಿದ್ದು ಇದನ್ನು ಮರೆ ಮಾಚಿದೆ. ಈಗ ಯಲಹಂಕ ಬಳಿಯ ಬಾಗಲೂರಿನಲ್ಲಿ ಕೆಐಎಡಿಬಿ Hi -Tech Defence and Aerospace Park ಪ್ರದೇಶದಲ್ಲಿ ಖರ್ಗೆ ಕುಟುಂಬ ಸಿದ್ಧಾರ್ಥ ವಿಹಾರ ಟ್ರಸ್ಟ್‌ಗೆ 5 ಎಕರೆ ವಿಸ್ತೀರ್ಣದ ಸಿಎ ನಿವೇಶನ ಹಂಚಿಕೆ ಮಾಡಿಸಿಕೊಂಡಿದೆ ಎಂದು ಆರೋಪಿಸಿದರು.

ಈ ಹಿಂದೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಬಿಟಿಎಂ ಲೇಔಟ್‌ನಲ್ಲಿ ಸಿದ್ಧಾರ್ಥ ವಿಹಾರ ಟ್ರಸ್ಟ್‌ಗೆ ಸಿಎ ನಿವೇಶನ ನೀಡಲಾಗಿತ್ತು. ಈ ಎಲ್ಲ ನಿಯಮಗಳನ್ನು ಗಾಳಿಗೆ ತೂರಿ ಖರ್ಗೆ ಪುತ್ರ ರಾಹುಲ್‌ ಖರ್ಗೆ ಅವರಿಗೆ ಬಾಗಲೂರಿನಲ್ಲಿ ಸಿಎ ನಿವೇಶ ಮಂಜೂರು ಮಾಡಲಾಗಿದೆ. ಕಾನೂನು ಗಾಳಿ ತೂರಿ ಜಾಗ ಮಂಜೂರು ಮಾಡಿರುವ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಡಾ| ಎಸ್‌. ಸೆಲ್ವಕುಮಾರ್‌ ಜತೆಗೆ ಸ್ವಜನ ಪಕ್ಷಪಾತ ತೋರಿರುವ ಬೃಹತ್‌ ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ್‌ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.

Advertisement

ಶೀಘ್ರ ರಾಜ್ಯಪಾಲರ ಭೇಟಿ
ಇದೊಂದು ಕೋಟ್ಯಂತರ ರೂ. ಭೂ ಹಗರಣವಾಗಿದ್ದು, ರಾಜ್ಯಪಾಲರನ್ನು ಭೇಟಿ ಮಾಡಿ ತನಿಖೆಗೆ ಅನುಮತಿ ನೀಡುವಂತೆ ಮನವಿ ಮಾಡುತ್ತೇನೆ. ಈಗಾಗಲೇ ರಾಜ್ಯಪಾಲರ ಭೇಟಿಗೆ ಸಮಯ ಕೇಳಲಾಗಿದೆ. ಸೋಮವಾರ ಅವಕಾಶ ನೀಡುವ ನಿರೀಕ್ಷೆಯಿದೆ ಎಂದು ಪಾಲಿಕೆ ಮಾಜಿ ಸದಸ್ಯರೂ ಆಗಿರುವ ರಮೇಶ್‌ ತಿಳಿಸಿದರು.

ಸಿದ್ದುಗೆ ನಮ್ಮ ಬೆಂಬಲ
ಮುಡಾ ಪ್ರಕರಣದಲ್ಲಿ ಕಾನೂನು ಅದರ ಕ್ರಮವನ್ನು ಕೈಗೊಳ್ಳುತ್ತದೆ. ಸಂದರ್ಭ ಬಂದಾಗ ನಾವೂ ಪರಿಶೀಲಿಸುತ್ತೇವೆ. ಈಗಂತೂ ಏನೇನೂ ಇಲ್ಲ. ನಾವೀಗ ಸಿಎಂ ಸಿದ್ದರಾಮಯ್ಯ ಅವರನ್ನು ಬೆಂಬಲಿಸುತ್ತೇವೆ.
– ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next