ಕನ್ನಡದಲ್ಲೀಗ ಹೊಸಬರು ಒಂದು ಚಿತ್ರ ಮಾಡಿ ಬಿಡುಗಡೆ ಮಾಡುವುದೇ ದೊಡ್ಡ ಕಷ್ಟ ಆಗಿರುವಾಗ, ಕನ್ನಡ ಸೇರಿದಂತೆ ಮೂರು ಭಾಷೆಯಲ್ಲೂ ಚಿತ್ರೀಕರಣ ನಡೆಸಿ ಬಿಡುಗಡೆ ಮಾಡುವುದು ದೊಡ್ಡ ಸಾಹಸವೇ ಸರಿ. ಹೌದು, ಅಂಥದ್ದೊಂದು ಕೆಲಸಕ್ಕೆ ಕಾರಣವಾಗಿರುವುದು “ಖನನ’ ಎಂಬ ಹೊಸಬರ ಚಿತ್ರ. ಇದು ಕನ್ನಡ, ತೆಲುಗು ಮತ್ತು ತಮಿಳು ಭಾಷೆಯಲ್ಲಿ ತಯಾರಾಗಿದೆ. ಹಾಗಾಗಿ ಇತ್ತೀಚೆಗೆ ಮೂರು ಭಾಷೆಯಲ್ಲೂ ಆಡಿಯೋ ಸಿಡಿ ಹೊರಬಂದಿದ್ದು ವಿಶೇಷ. ಫಿಲಂ ಚೇಂಬರ್‌ನ ಭಾ.ಮ.ಹರೀಶ್ ಕನ್ನಡ ಭಾಷೆಯ ಹಾಡು ಬಿಡುಗಡೆ ಮಾಡಿದರೆ, ಲಹರಿ ವೇಲು ಅವರು ತೆಲುಗು ಹಾಗು ತಮಿಳು ಭಾಷೆಯ ಆಡಿಯೋ ಬಿಡುಗಡೆ ಮಾಡಿ “ಮೂರು ಭಾಷೆಯಲ್ಲೂ ಚಿತ್ರ ಯಶಸ್ಸು ಗಳಿಸಲಿ’ ಎಂದು ಚಿತ್ರತಂಡಕ್ಕೆ ಶುಭಹಾರೈಸಿದರು.
ನಿರ್ದೇಶಕ ರಾಧಾ ಅವರಿಗೆ ಇದು ಮೊದಲ ಚಿತ್ರ. ಚಿತ್ರಕಥೆ, ಸಂಭಾಷಣೆಯೊಂದಿಗೆ ನಿರ್ದೇಶನ ಮಾಡಿರುವ ಅವರು, ಚಿತ್ರ ರೆಡಿಯಾಗಲು ಸಹಕರಿಸಿದ ನಿರ್ಮಾಪಕ ಶ್ರೀನಿವಾಸ್ ಅವರಿಗೆ ಕೃತಜ್ಞತೆ ಸಲ್ಲಿಸಿದರು. “ಖನನ’ ಸಂಸ್ಕೃತ ಪದ. ಹೂತಾಕು ಅಥವಾ ಮುಚ್ಚಾಕು ಎಂಬ ಅರ್ಥವಿದೆ. ಸಸ್ಪೆನ್ಸ್ ಥ್ರಿಲ್ಲರ್ ಕಥೆಯಾಗಿದ್ದು, ನಿತ್ಯ ಬದುಕಿನಲ್ಲಿ ನಡೆಯುವ ಒಂದು ಸನ್ನಿವೇಶದ ಎಳೆ ಈ ಚಿತ್ರದಲ್ಲಿದೆ. ನಾವು ಮಾಡಿದ ಪಾಪ ಶಾಪವಾಗಿ ಹಿಂಬಾಲಿಸುತ್ತದೆ. ಕೊನೆಯಲ್ಲೊಂದು ಪ್ರತಿಫಲವೂ ಸಿಗುತ್ತದೆ. ಅದು ಘೋರವಾಗಿರುತ್ತೋ ಅಥವಾ ನೆಮ್ಮದಿ ಕೊಡುವಂತಿರುತ್ತದೆಯೋ ಎಂಬುದು ಸಾರಾಂಶ’ ಎಂದರು.
ನಾಯಕ ಆರ್ಯವರ್ಧನ್‌ಗೆ ಇದು ಮೊದಲ ಚಿತ್ರ. ಐಟಿ ಕ್ಷೇತ್ರದಲ್ಲಿದ್ದ ಅವರಿಗೆ ನಟನೆ ಆಸಕ್ತಿ ಇತ್ತು. ಕಾಲೇಜು ದಿನಗಳಿಂದಲೂ ಸಿನಿಮಾ ಹುಚ್ಚು ಹೆಚ್ಚಿಸಿಕೊಂಡಿದ್ದ ಅವರಿಗೆ ನಿರ್ದೇಶಕರು ಈ ಕಥೆ ಹೇಳಿದಾಗ, ಏನೂ ಅರ್ಥ ಆಗಲಿಲ್ಲವಂತೆ. ಕೊನೆಗೆ ಎಲ್ಲವನ್ನೂ ಅರ್ಥಮಾಡಿಕೊಂಡ ಬಳಿಕ “ಖನನ’ ಚಿತ್ರ ಮಾಡಿದೆ. ಇಲ್ಲಿ ನಾಯಿ ಒಂದು ಪ್ರಮುಖ ಪಾತ್ರ ಮಾಡಿದೆ. ನಿರ್ದೇಶಕರ ಕಲ್ಪನೆಗೆ ತಕ್ಕಂತೆ ಚಿತ್ರ ಮೂಡಿಬಂದಿದೆ. ಮೊದಲ ಚಿತ್ರವಾದ್ದರಿಂದ ನಿಮ್ಮೆಲ್ಲರ ಸಹಕಾರ ಇರಲಿ’ ಎಂದರು ಆರ್ಯವರ್ಧನ್.
ನಿರ್ಮಾಪಕ ಶ್ರೀನಿವಾಸ್ ಅವರಿಗೆ ಚಿತ್ರರಂಗ ಹೊಸದಲ್ಲ. ಎರಡು ದಶಕಗಳಿಂದಲೂ ಕ್ಯಾಮೆರಾ ಬಾಡಿಗೆ ಕೊಡುವ ಕಾಯಕ ಮಾಡುತ್ತಿರುವ ಶ್ರೀನಿವಾಸ್, ತಮ್ಮ ಪುತ್ರ ಆರ್ಯವರ್ಧನ್‌ಗಾಗಿ ಮಾಡಿದ ಚಿತ್ರವಿದು. ನನಗೂ ಚಿಕ್ಕಂದಿನಿಂದ ಸಿನಿಮಾ ಆಸಕ್ತಿ ಇತ್ತು. ಆ ಆಸೆ ಮಗನ ಮೂಲಕ ಈಡೇರಿದೆ. ಮಗ ಎಲ್ಲವನ್ನೂ ಕರಗತ ಮಾಡಿಕೊಂಡೇ ಕ್ಯಾಮೆರಾ ಮುಂದೆ ನಿಂತಿದ್ದಾನೆ. ಚಿತ್ರ ಚೆನ್ನಾಗಿ ಬಂದಿದೆ. ತಡವಾಗಲು ಕಾರಣ ಸೆನ್ಸಾರ್ ಮಂಡಳಿ ಬೇಗ ಚಿತ್ರಕ್ಕೆ ಅಸ್ತು ಅನ್ನಲಿಲ್ಲ. ಮೊದಲು “ಎ’ಪ್ರಮಾಣ ಪತ್ರ ಕೊಟ್ಟರು. ಆ ಬಳಿಕೆ ನಾವು ರಿವೈಸಿಂಗ್ ಕಮಿಟಿಗೆ ಹೋಗಿ ‘ಯು/ಎ’ ಪ್ರಮಾಣ ಪತ್ರ ಪಡೆದುಕೊಂಡೆವು’ ಎಂದು ವಿವರ ಕೊಟ್ಟರು ಅವರು.
ಚಿತ್ರಕ್ಕೆ ಕುನ್ನಿ ಗುಡಿಪಾಟಿ ಸಂಗೀತ ನೀಡಿದ್ದು, ಕಥೆಗೆ ಪೂರಕ ಹಾಡುಗಳಿವೆ. ಚಿತ್ರದಲ್ಲಿ ಯೋಗೇಶ್, ಮಹೇಶ್ ಸಿದ್ದು, ಅವಿನಾಶ್, ಓಂ ಪ್ರಕಾಶ್‌ರಾವ್, ವಿನಯ ಪ್ರಸಾದ್ ಇತರರು ನಟಿಸಿದ್ದಾರೆ. ಚಿತ್ರಕ್ಕೆ ರಮೇಶ್ ತಿರುಪತಿ ಛಾಯಾಗ್ರಹಣವಿದೆ.