ಅಮೃತಸರ/ಧರ್ಮಶಾಲಾ:ಹಿಮಾಚಲಪ್ರದೇಶದ ವಿಧಾನಸಭೆಯ ಗೇಟ್‌ನಲ್ಲಿ ಖಲಿಸ್ತಾನ ಧ್ವಜವನ್ನಿಟ್ಟ ಪ್ರಕರಣದ ಬೆನ್ನಲ್ಲೇ ಈಗ ಪಂಜಾಬ್‌ನಲ್ಲೂ ಇದೇ ಮಾದರಿಯ ಘಟನೆಗಳು ಬೆಳಕಿಗೆ ಬರಲಾರಂಭಿಸಿವೆ.
ಪಂಜಾಬ್‌ನ ಫರೀದ್‌ಕೋಟ್‌ನ ಬಾಜಿಗಾರ್ ಬಸ್ತಿಯ ಉದ್ಯಾನವೊಂದರ ಗೋಡೆ ಮೇಲೆ “ಖಲಿಸ್ತಾನ ಜಿಂದಾಬಾದ್’ ಎಂದು ಸ್ಪ್ರೇ ಪೈಂಟ್‌ನಲ್ಲಿ ಬರೆಯಲಾಗಿದೆ.
ಎಫ್ಐಆರ್ ದಾಖಲಿಸಿಕೊಂಡಿರುವ ಪೊಲೀಸರು, ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದು, ಕಿಡಿಗೇಡಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ. ಪೊಲೀಸರನ್ನು ಅಲರ್ಟ್ ಮಾಡಲಾಗಿದ್ದು, ಎಲ್ಲೆಡೆ ನಾಕಾ-ಚೆಕ್‌ಪೋಸ್ಟ್ ಕೂಡ ನಿರ್ಮಿಸಲಾಗಿದೆ.
ಹಿಮಾಚಲಪ್ರದೇಶ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯಾದ ಪಂಜಾಬ್‌ನ ಮೊರಿಂದಾ ನಿವಾಸಿ ಹರ್ವೀರ್‌ಸಿಂಗ್ ಎಂಬಾತನನ್ನು ಪೊಲೀಸರು ಬುಧವಾರವಷ್ಟೇ ಬಂಧಿಸಿದ್ದರು. ಹರ್ವೀರ್ ಜೊತೆ ಧರ್ಮಶಾಲಾಗೆ ತೆರಳಿ ಖಲಿಸ್ತಾನ ಧ್ವಜ ಹಾರಿಸಲು ನೆರವಾಗಿದ್ದ ಪರಮ್‌ಜಿತ್ ಎಂಬಾತನಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಇದೇ ಆರೋಪಿಗಳು ಏ.13ರಂದು ರೋಪಾರ್‌ನ ಉಪಆಯುಕ್ತರ ಕಚೇರಿ ಮುಂದೆಯೂ ಖಲಿಸ್ತಾನ ಧ್ವಜವನ್ನು ಹಾರಿಸಿದ್ದರು ಎಂದು ಹೇಳಲಾಗಿದೆ.
2 ಪಿಸ್ತೂಲು, ಲ್ಯಾಪ್‌ಟಾಪ್ ಪತ್ತೆ
ಮೇ 5ರಂದು ಭಾರೀ ಸ್ಫೋಟಕಗಳೊಂದಿಗೆ ಸಿಕ್ಕಿಬಿದ್ದಿದ್ದ ಪಂಜಾಬ್‌ನ ಗ್ಯಾಂಗ್‌ಸ್ಟರ್‌ಗಳ ಸಹಚರ ನೀಡಿದ ಮಾಹಿತಿ ಆಧರಿಸಿ ಪೊಲೀಸರು ಗುರುವಾರ ಫಿರೋಜ್‌ಪುರ ಗ್ರಾಮದಲ್ಲಿ ಶೋಧ ಕಾರ್ಯ ನಡೆಸಿದ್ದು, 2 ಪಿಸ್ತೂಲು, ಗುಂಡುಗಳು ಮತ್ತು ಲ್ಯಾಪ್‌ಟಾಪ್ ಅನ್ನು ವಶಪಡಿಸಿಕೊಂಡಿದ್ದಾರೆ.
ಕಳೆದ ವಾರ ಹರ್ಯಾಣದ ಕರ್ನಾಲ್‌ನ ಟೋಲ್ ಪ್ಲಾಜಾದ ಬಳಿ ವಾಹನವೊಂದರಲ್ಲಿ ಭಾರೀ ಸ್ಫೋಟಕಗಳು ಪತ್ತೆಯಾದ ಹಿನ್ನೆಲೆಯಲ್ಲಿ ಖಲಿಸ್ತಾನಿ ಉಗ್ರ ಹರ್ವಿಂದ್ ಸಿಂಗ್ ರಿಂಡಾ ಜತೆ ನಂಟು ಹೊಂದಿರುವ ಗ್ಯಾಂಗ್‌ಸ್ಟರ್‌ಗಳನ್ನು ಬಂಧಿಸಲಾಗಿತ್ತು.