ಆಳಂದ: 14 ಲಕ್ಷ ರೂ. ವೆಚ್ಚದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಸಂಸ್ಥೆ ಯೋಜನೆಯಿಂದ ಖಜೂರಿ ಗ್ರಾಮದ ಹೊರವಲಯದಲ್ಲಿ ಕೆರೆ ಹೂಳೆತ್ತುವ ಕಾಮಗಾರಿಯನ್ನು ವಾರದಲ್ಲೇ ಆರಂಭಿಸಲಾಗುವುದು ಎಂದು ಸಂಸ್ಥೆಯ ಜಿಲ್ಲಾ ಯೋಜನಾ ನಿರ್ದೇಶಕ ಸತೀಶ ಸುವರ್ಣ ಹೇಳಿದರು.
ತಾಲೂಕಿನ ಖಜೂರಿಯಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಸಂಸ್ಥೆಯಿಂದ ಶುದ್ಧ ಗಂಗಾ ಕುಡಿಯುವ ನೀರಿನ ಘಟಕ ಸ್ಥಾಪನೆಗೆ ಹಮ್ಮಿಕೊಳ್ಳಲಾಗಿದ್ದ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕೆರೆ ಹೂಳೆತ್ತಲು ಈಗಾಗಲೇ ಅನುದಾನ ಬಿಡುಗಡೆಯಾಗಿದೆ. ವಾರದಲ್ಲೇ ಕೆರೆಯಲ್ಲಿನ ತೇವಾಂಶ ಕಡಿಮೆಯಾದರೆ ಹೂಳೆತ್ತುವ ಕಾರ್ಯ ಕೈಗೆತ್ತಿಕೊಳ್ಳಲಾಗುವುದು. ಇದರಿಂದ ನೀರಿನ ಮಟ್ಟ ಹೆಚ್ಚಾಗುತ್ತದೆ. ಅಲ್ಲದೇ, ಗ್ರಾಮೀಣ ಭಾಗದ ಜನರಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿ, ಅವರ ಆರೋಗ್ಯ ಸಂರಕ್ಷಣೆಗೆ ಒತ್ತು ನೀಡುವ ಕಾರ್ಯಕ್ಕೆ ಶುದ್ಧ ಗಂಗಾ ಘಟಕಗಳನ್ನು ಸ್ಥಾಪಿಸಿ, ಶುದ್ಧ ನೀರು ಪೂರೈಸುವ ಯೋಜನೆ ಕಾರ್ಯಗತ ಮಾಡಲಾಗುತ್ತಿದೆ. ಈ ಕುರಿತು ಗ್ರಾಮಸ್ಥರು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಹೇಳಿದರು.
ಕೋರಣೇಶ್ವರ ಮಠದ ಶ್ರೀ ಮುರುಘೇಂದ್ರ ಮಹಾಸ್ವಾಮಿಗಳು ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದರು. ಸಂಸ್ಥೆ ತಾಲೂಕು ಯೋಜನಾಧಿಕಾರಿ ಕೃಷ್ಣಪ್ಪ ಬೆಳವಣಕಿ, ಗ್ರಾಪಂ ಸದಸ್ಯ ವೈಜನಾಥ ತಡಕಲ್, ಬಸವರಾಜ ಢಗೆ, ಹನುಮಂತ ಢಗೆ, ಗ್ರಾಮದ ಶಿವಪುತ್ರ ಶಾರ್, ನಿಜಾಚರಣೆ ಶಾಲೆ ಮುಖ್ಯ ಶಿಕ್ಷಕ ಸುಭಾಷ ಹರಳಯ್ಯ, ಕೃಷಿ ಮೇಲ್ವಿಚಾರಕ ಹುಚ್ಚಪ್ಪ ಎಂ. ರೆಡ್ಡಿ, ವಲಯ ಮೇಲ್ವಿಚಾರಕ ವೆಂಕಟೇಶ, ಸೇವಾ ಪ್ರತಿನಿಧಿಗಳಾದ ಕಲಾವತಿ, ಭವನೇಶ್ವರಿ, ಸಂಘದ ಸದಸ್ಯರು, ಗ್ರಾಮಸ್ಥರು ಪಾಲ್ಗೊಂಡಿದ್ದರು.