Advertisement

ಜಿ.ಪಂ., ತಾ.ಪಂ. ಹಂತದಲ್ಲೂ ಕೆ 2 ಪಾವತಿ

12:22 PM Jul 13, 2018 | |

ಉಡುಪಿ: ಸರಕಾರದ ಸೇವೆಗಳು ಪಾರದರ್ಶಕ ಮತ್ತು ತ್ವರಿತವಾಗಿ ಜಾರಿಗೊಳಿಸಲು ರಾಜ್ಯ ಮಟ್ಟದಲ್ಲಿ ಅನುಷ್ಠಾನದಲ್ಲಿರುವ “ಖಜಾನೆ-2′ (ಕೆ2) ಆನ್‌ಲೈನ್‌ ಪಾವತಿ ಪದ್ಧತಿ ಜಿಲ್ಲಾ ಮಟ್ಟದಲ್ಲಿ ಜಾರಿಗೆ ಬರಲಿದೆ. ಈ ಸಂಬಂಧ ಉಡುಪಿ ಮತ್ತು ಬೀದರ್‌ ಜಿಲ್ಲೆಗಳನ್ನು ಪ್ರಾಯೋಗಿಕ ಜಿಲ್ಲೆಗಳೆಂದು (ಪೈಲಟ್‌ ಡಿಸ್ಟ್ರಿಕ್ಟ್) ಆಯ್ಕೆ ಮಾಡಲಾಗಿದೆ. “ಕೆ2 ಪದ್ಧತಿ’ ಅಂತಾರಾಷ್ಟ್ರೀಯ ಹಣಕಾಸು ನಿರ್ವಹಣ ವ್ಯವಸ್ಥೆ (ಐಎಫ್ಎಂಎಸ್‌)ಗೆ ಅನುಗುಣವಾಗಿ ಅನುಷ್ಠಾನ ಗೊಳ್ಳುತ್ತಿದೆ. ರಾಜ್ಯ ಮಟ್ಟದಲ್ಲಿ ಈ ಪದ್ಧತಿ 2 ವರ್ಷಗಳಿಂದಲೇ ಜಾರಿಗೆ ಇದ್ದು, ಕೇಂದ್ರ ಸರಕಾರ ಈಗಾಗಲೇ ಈ ಪದ್ಧತಿ ಅಳವಡಿಸಿದೆ. ಮುಂದಿನ ಆರ್ಥಿಕ ವರ್ಷದಿಂದ ಗ್ರಾ.ಪಂ. ಮಟ್ಟದಲ್ಲಿಯೂ ಅನುಷ್ಠಾನಗೊಳಿಸಲು ಸರಕಾರ ಸಿದ್ಧತೆ ನಡೆಸಿದೆ.

Advertisement

ಉಡುಪಿಯಲ್ಲಿ ಜು. 16ರಿಂದ ಜಾರಿ
ಉಡುಪಿ ಜಿಲ್ಲೆಯಲ್ಲಿ ಈ ವ್ಯವಸ್ಥೆ ಜು.16ರಿಂದ ಜಾರಿಗೆ ಬರಲಿದ್ದು, ಜಿ.ಪಂ.ನ ಪ್ರತಿಯೊಂದು ಇಲಾಖೆಯಲ್ಲಿ ಮೂವರು ಅಧಿಕಾರಿಗಳಿಗೆ ತರಬೇತಿ ನೀಡಲಾಗಿದೆ. ತಾಲೂಕು ಹಂತದಲ್ಲಿ ತರಬೇತಿ ನಡೆಯುತ್ತಿದೆ.  ಮೊದಲ ಹಂತದಲ್ಲಿ ವೇತನ ಹೊರತುಪಡಿಸಿ ಇತರ ಬಿಲ್‌ಗ‌ಳು, ಜಿ.ಪಂ./ತಾ.ಪಂ. ವ್ಯಾಪ್ತಿಯ ಶಿಕ್ಷಣ, ಸಮಾಜ ಕಲ್ಯಾಣ, ಮೀನುಗಾರಿಕೆ, ಹಿಂದು ಳಿದ ವರ್ಗಗಳ ಇಲಾಖೆ, ಕೃಷಿ ಮತ್ತು ತೋಟಗಾರಿಕೆ ಇಲಾಖೆ, ವಸತಿ ನಿಲಯಗಳ ನಿರ್ವಹಣೆ ವೆಚ್ಚ, ಕಾಮಗಾರಿಗಳ ಮೊತ್ತಗಳು, ಫ‌ಲಾನುಭವಿಗಳಿಗೆ ದೊರೆಯುವ ಸಹಾಯಧನ ಹಾಗೂ ಇತರ ಹಣಕಾಸು ಸೌಲಭ್ಯಗಳು ಹೊಸ ಪದ್ಧತಿಯಂತೆಯೇ ಪಾವತಿಯಾಗಲಿವೆ.

ಏನಿದು?
ಆನ್‌ಲೈನ್‌ ಮೂಲಕ ನಡೆಯುವ ಈ ಪಾವತಿ ಪ್ರಕ್ರಿಯೆಯಲ್ಲಿ ಮಧ್ಯವರ್ತಿಗಳಿಗೆ ಅವಕಾಶವಿಲ್ಲ. ಸರಕಾರದ ವಿವಿಧ ಯೋಜನೆಗಳ ಫ‌ಲಾನುಭವಿಗಳು ಹಾಗೂ ವಿವಿಧ ಇಲಾಖೆಗಳಿಗೆ ಸರಕು ಸಾಮಗ್ರಿಗಳ ಪೂರೈಸುವವರ ಖಾತೆಗೆ ನೇರವಾಗಿ ಹಣ ಜಮೆಯಾಗಲಿದೆ. ಜಿಲ್ಲಾ ಖಜಾನೆಯಿಂದ ಚೆಕ್‌ ನೀಡುವ ಪದ್ಧತಿ ಸಂಪೂರ್ಣ ರದ್ದುಗೊಳ್ಳಲಿದೆ. 
ಜಿ.ಪಂ., ತಾ.ಪಂ. ಆಡಳಿತದಲ್ಲಿ ಆರ್ಥಿಕ ಶಿಸ್ತು, ಪಾರದರ್ಶಕತೆ ತರುವಲ್ಲಿ ಈ ಪದ್ಧತಿ ಮಹತ್ವದ ಪಾತ್ರ ವಹಿಸುವ ನಿರೀಕ್ಷೆಯಿದೆ. ಉಡುಪಿ ಮತ್ತು ಬೀದರ್‌ ಜಿಲ್ಲೆಗಳಲ್ಲಿ ಸಂಪೂರ್ಣ ವಾಗಿ ಕಾರ್ಯಗತಗೊಂಡ ಬಳಿಕ ಉಳಿದ ಎಲ್ಲ ಜಿಲ್ಲೆ ಮತ್ತು ತಾಲೂಕು ಹಂತದಲ್ಲಿ ಜಾರಿಯಾಗಲಿದೆ. ಈ ಹಿಂದೆ “ಆಧಾರ್‌’ಗೂ ಉಡುಪಿ ಜಿಲ್ಲೆ ಪೈಲಟ್‌ ಯೋಜನೆ ಜಿಲ್ಲೆಯಾಗಿ ಆಯ್ಕೆಯಾಗಿತ್ತು.

ಕೆ 2: ಪ್ರಯೋಜನವೇನು?
  *ಖಾತೆಗೆ ನೇರ ಪಾವತಿ
   * ತ್ವರಿತ ವಿಲೇವಾರಿ
  *  ಮಧ್ಯವರ್ತಿಗಳಿಗೆ ಅವಕಾಶವಿಲ್ಲ
  *  ಭ್ರಷ್ಟಾಚಾರಕ್ಕೆ  ಕಡಿವಾಣ 
  *  ಸಿಬಂದಿಯ ಕಾರ್ಯ ಹೊರೆಯ ಇಳಿಕೆ

ಸಿದ್ಧತೆ ನಡೆದಿದೆ
ಜಿ.ಪಂ. ಮತ್ತು ತಾ.ಪಂ. ಮಟ್ಟದಲ್ಲಿ ಕೆ 2 ಪಾವತಿ ವ್ಯವಸ್ಥೆ ಜಾರಿಗೆ ಜಿಲ್ಲಾ ಖಜಾನೆ ಸಿದ್ಧತೆ ನಡೆಸಿದೆ. ಜು. 16ರಿಂದ ಪರೀಕ್ಷಾರ್ಥವಾಗಿ ಆರಂಭವಾಗಿ ಬಳಿಕ ಪೂರ್ಣ ಪ್ರಮಾಣದಲ್ಲಿ ಜಾರಿಗೊಳ್ಳಲಿದೆ. ಜಿಲ್ಲಾ ಪಂಚಾಯತ್‌ ಮತ್ತು ತಾ.ಪಂ.ಗಳಿಂದ ಆಗುವ ಎಲ್ಲಾ ಪಾವತಿಗಳು (ವೇತನ ಹೊರತುಪಡಿಸಿ) ಆನ್‌ಲೈನ್‌ ಮುಖಾಂತರವೇ ನಡೆಯಲಿವೆ. 
– ಸಾವಿತ್ರಿ, ಜಿಲ್ಲಾ ಖಜಾನಾಧಿಕಾರಿ

Advertisement

ಆರ್ಥಿಕ ಶಿಸ್ತು 
ಎಲ್ಲ ರೀತಿಯ ಪಾವತಿ ಪ್ರಕ್ರಿಯೆಗಳು ಆನ್‌ಲೈನ್‌ನಲ್ಲೇ ನಡೆಯಲು ಖಜಾನೆ – 2 ನೆರವಾಗುತ್ತದೆ. ಇದರಿಂದಾಗಿ 
ಆರ್ಥಿಕ ಶಿಸ್ತಿನೊಂದಿಗೆ ಖರ್ಚು ವೆಚ್ಚಗಳ ಪೂರ್ಣ ಮಾಹಿತಿ ದೊರೆಯುತ್ತದೆ.
– ಶಿವಾನಂದ ಕಾಪಶಿ
ಸಿಇಒ, ಉಡುಪಿ ಜಿ.ಪಂ.

*ಸಂತೋಷ್‌ ಬೊಳ್ಳೆಟ್ಟು

Advertisement

Udayavani is now on Telegram. Click here to join our channel and stay updated with the latest news.

Next