Advertisement
ಪಡುಬಿದ್ರಿ: ಇಲ್ಲಿನ ಶ್ರೀ ಖಡ್ಗೇಶ್ವರೀ ಬ್ರಹ್ಮಸ್ಥಾನವು ‘ಚಿದಂಬರ ರಹಸ್ಯಗಳ ಹೊತ್ತಿರುವ ಬಯಲು ಆಲಯ’ವಾಗಿದೆ. ಇಲ್ಲಿನ ದೈವೀ ಸಾನ್ನಿಧ್ಯವು ಗುಹ್ಯಾತಿಗುಹ್ಯವಾಗಿ ಒಂದು ಕಲ್ಲಲ್ಲಿ ನೆಲೆಗೊಂಡಿದೆ. ಇದು ಯಾವುದೇ ದೇವಾಲಯದ ಕಲ್ಪನೆಗಳಿಲ್ಲದೇ ಪ್ರಾಕೃತಿಕ ಸೊಬಗಿನ ತಾಣವಾಗಿ, ‘ಮರಳೇ’ ಪ್ರಸಾದವಾಗಿರುವ ಪಂಚ ದೈವೀಕ ಸ್ಥಾನವಾಗಿ ಮೆರೆದಿದೆ.
ಉಡುಪಿ ಪರ್ಯಾಯವಿರದ ವರ್ಷಗಳಲ್ಲಿ ಪಡುಬಿದ್ರಿ ಬ್ರಹ್ಮಸ್ಥಾನದಲ್ಲಿ ನಡೆಯುವ ದ್ವೈವಾರ್ಷಿಕ ನಡಾವಳಿ ‘ಢಕ್ಕೆಬಲಿ’ಯಂತೂ ಲಕ್ಷಾಂತರ ಜನರನ್ನು ತನ್ನೆಡೆಗೆ ಆಕರ್ಷಿಸಿಕೊಳ್ಳುತ್ತದೆ. ರಾತ್ರಿಯ ವೇಳೆ ಹೂ, ಹಣ್ಣುಗಳು, ತೆಂಗಿನ ಗರಿ, ಬಾಳೆ ದಿಂಡುಗಳಿಂದಲೇ ಸರ್ವಾಂಗ ಸುಂದರವಾಗಿ ಅಲಂಕೃತಗೊಳ್ಳುವ ಕಾನನದಲ್ಲಿನ ವಿಶೇಷ ವೇದಿಕೆಯಲ್ಲಿ ಡಮರು ಬಳಗದ ವೈದ್ಯರು ಬ್ರಹ್ಮ, ನಾಗ ದೇವರ ಚಿತ್ರವನ್ನು ಬಿಡಿಸಿದ ಬಳಿಕ ಆಚಾರ್ಯರಿಂದ ಪೂಜೆಯು ನಡೆದು ಸ್ಥಾನಿಗಳ, ಮಾನಿಗಳ ಸಮಕ್ಷಮ ಕೊರಡು(ಪಾತ್ರಿ)ಗಳಿಂದ ನಡೆವ ನರ್ತನ ಸೇವೆ ಕುರಿತಾಗಿ ಮಾರ್ತಾ ಆ್ಯಸ್ಟನ್‌ರಂತಹ ವಿದೇಶೀ ಜಾನಪದ ವಿದ್ವಾಂಸರೂ ಅಧ್ಯಯನವನ್ನು ನಡೆಸಿದ್ದಾರೆ.
Related Articles
ಬಲು ಪ್ರಾಚೀನತೆಯತ್ತ ಒಯ್ಯುವ ಈ ಬಯಲು ಆಲಯಕ್ಕೆ ಸಮುದ್ರದ ಹಿನ್ನೀರಿನಿಂದಲೇ ಪ್ರತೀ ಮಳೆಗಾಲದಲ್ಲಿ ಸ್ವಾಭಾವಿಕವಾಗಿ ಒಳ ಹಾಸಿರಬಹುದಾದ ಮರಳನ್ನು ಭೌಗೋಳಿಕ ಸ್ವರೂಪದ ಸ್ಥಿತ್ಯಂತರಗಳ ಬಳಿಕ ಇದೀಗ ಆಟಿಯ ಈ ದಿನದಂದು ಇಲ್ಲಿನ ದೇವಕಾರ್ಯವನ್ನು ನಡೆಸುವ ವ್ಯಕ್ತಿ ಮಿಂದು ಸಮುದ್ರಕ್ಕೆ ತೆರಳಿ ಅಲ್ಲಿ ಕಂಠ ಮಟ್ಟದ ನೀರು ಇರುವಲ್ಲಿಂದ ಮರಳನ್ನು ಹೊತ್ತು ತರುವ ಸಂಪ್ರದಾಯವು ಮುಂದುವರಿದಿದೆ. ಸಮುದ್ರದ ಈ ಶುದ್ಧ ಮರಳು ಬ್ರಹ್ಮಸ್ಥಾನದ ಮೂಲ ಪ್ರಸಾದವಾಗುತ್ತದೆ. ಗುಡಿ ಗೋಪುರಗಳು, ಕಾಣಿಕೆ ಡಬ್ಬಿಯಿಲ್ಲದ ಈ ತಾಣಕ್ಕೆ ಪ್ರತೀ ವರ್ಷವೂ ಈ ದಿನದಂದೇ ಸಮುದ್ರದ ಹೊಯಿಗೆ ಹಾಸಲ್ಪಟ್ಟು ರಮ್ಯತೆಯನ್ನು ಒದಗಿಸಲಾಗುತ್ತದೆ.
Advertisement
‘ಅಜಕಾಯಿ ಸೇವೆ, ಅನಾದಿಯ ಪರಂಪರೆ’‘ಅಜಕಾಯಿ’ ಸೇವೆಗೂ ಪರಂಪರೆಯ ಕಲ್ಪನೆಯನ್ನು ನಾವೀಯಬಹುದಾಗಿದೆ. ದೇಗುಲಗಳಲ್ಲಿ ಹಣ್ಣುಕಾಯಿಯ ಸಂಪ್ರದಾಯವಿದ್ದು ಬ್ರಹ್ಮಸ್ಥಾನದಲ್ಲಿ ಅದಿಲ್ಲದಿರುವುದರಿಂದ ಅನಾದಿ ಕಾಲದಿಂದಲೇ ತೆಂಗಿನ ಕಾಯಿ ಒಡೆವ ಅಜಕಾಯಿ ಸೇವೆ ನಡೆದುಬಂದಿರಬೇಕು. ಈ ಸೇವೆಗಾಗಿ ಜಿಲ್ಲೆಯ ಎಲ್ಲೆಡೆಗಳಿಂದಲೂ ಆಗಮಿಸುವ ಭಕ್ತಾದಿಗಳು ತೆಂಗಿನ ಕಾಯಿಗಳನ್ನು ಹೊತ್ತು ತರುತ್ತಾರೆ. ಸುಮಾರು 15,000ದಷ್ಟು ಒಟ್ಟಾಗುವ ಈ ಕಾಯಿಗಳನ್ನು ಊರ, ಪರವೂರ ಭಕ್ತಾದಿಗಳ ಸಮ್ಮುಖದಲ್ಲಿ ಸ್ಥಾನಿ, ಮಾನಿಗಳಿದ್ದ ದೇವತಾ ಪ್ರಾರ್ಥನೆ ನಡೆದ ಬಳಿಕ ಪಾತ್ರಿಗಳು ಪಂಚ ದೈವೀಕ ಸ್ಥಾನದ ಮಧ್ಯಭಾಗದಲ್ಲಿರುವ ಅಜಕಾಯಿ ಕಲ್ಲಿಗೆ ಒಡೆಯಲಾರಂಭಿಸುತ್ತಾರೆ. ಇದು ಸುಮಾರು ಮಧ್ಯಾಹ್ನದ ಮೂರು ಗಂಟೆಯವರೆಗೂ ಸಾಗಿ ಪರಿಸಮಾಪ್ತಿಯಾಗುತ್ತದೆ. ಬಳಿಕ ಪ್ರಸಾದ ರೂಪದಲ್ಲಿ ಕಾಯಿಗಳ ವಿತರಣೆಯೂ ನೆರೆದವರೆಲ್ಲರಿಗೂ ನಡೆಯುತ್ತದೆ. – ಆರಾಮ