ಉಳ್ಳಾಲ: ಭಯೋತ್ಪಾದಕರೊಂದಿಗೆ ಹೋರಾಡಿ ಸಾವನ್ನು ಗೆದ್ದು ಬಂದ ಮುಡಿಪುವಿನ ವೀರ ಯೋಧ ಸಂತೋಷ್ ಕುಲಾಲ್‌ಗೆ ಹಾವು ಕಡಿದು ಗಂಭೀರ ಸ್ಥಿತಿಯಲ್ಲಿದ್ದ ಮಾಹಿತಿ ತಿಳಿದ ಸಚಿವ ಯು.ಟಿ.ಖಾದರ್ ನಡುರಾತ್ರಿಯೇ ಆಸ್ಪತ್ರೆಗೆ ತೆರಳಿ ಔಷಧ ವ್ಯವಸ್ಥೆ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಬಂಟ್ವಾಳ ತಾಲೂಕಿನ ಕುರ್ನಾಡು ಗ್ರಾಮದ ಮುಡಿಪು ನಿವಾಸಿ ಸಂತೋಷ್ ಕುಲಾಲ್ ಕಳೆದ ವರ್ಷ ಭಯೋತ್ಪಾದಕರೊಂದಿಗೆ ಹೋರಾಡಿ ಗಂಭೀರ ಗಾಯಗೊಂಡು ಚಿಕಿತ್ಸೆ ಪಡೆದು ಗುಣಮುಖರಾಗಿ ಕರ್ತವ್ಯಕ್ಕೆ ಹಾಜರಾಗಿದ್ದರು.
ಇತ್ತೀಚೆಗೆ ಕುಟುಂಬ ಕಾರ್ಯಕ್ರಮಕ್ಕೆ ಆಗಮಿಸಿದ್ದ ಅವರು ಮನೆಯ ಕಾರ್ಯಕ್ರಮ ಮುಗಿದ ಬಳಿಕ ಭಾನುವಾರ ರಾತ್ರಿ ಬೈಕ್‌ನಲ್ಲಿ ಕುರ್ನಾಡಿಗೆ ಹೋಗಿದ್ದು, ಈ ಸಂದರ್ಭದಲ್ಲಿ ವಿಷಪೂರಿತ ಹಾವು ಕಚ್ಚಿ ಗಂಭೀರ ಸ್ಥಿತಿಯಲ್ಲಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು.
ಔಷಧಿ ಕೊರತೆ ಖಾದರ್‌ಗೆ ಕರೆ: ಖಾಸಗಿ ಆಸ್ಪತ್ರೆಯಲ್ಲಿ ಹಾವು ಕಡಿತಕ್ಕೆ ಸಂಬಂಧಿಸಿದ ಇಂಜೆಕ್ಷನ್ ಕೊಟ್ಟು ತುರ್ತು ನಿಗಾ ವಿಭಾಗದಲ್ಲಿ ಚಿಕಿತ್ಸೆ ನೀಡಲಾಗಿತ್ತು. ಆಸ್ಪತ್ರೆಯ ಸಿಬ್ಬಂದಿ ಇಂಜೆಕ್ಷನ್ ಕೊರತೆಯ ಬಗ್ಗೆ ಮಾಹಿತಿ ನೀಡಿದ್ದು, ಸಂತೋಷ್ ಅವರ ಸಹೋದರಿ ಸಚಿವ ಖಾದರ್ ಅವರಿಗೆ ದೂರವಾಣಿ ಕರೆ ವಿಷಯ ತಿಳಿಸಿದ್ದಾರೆ.
ರಾತ್ರಿ ಒಂದೂವರೆ ಗಂಟೆಗೆ ಕಾರ್ಯಕ್ರಮ ಮಗಿಸಿ ಮನೆಗೆ ಆಗಮಿಸಿದ್ದ ಖಾದರ್ ನಂತರ ಆಸ್ಪತ್ರೆಗೆ ಆಗಮಿಸಿ ವೈದ್ಯರನ್ನು ಸಂಪರ್ಕಿಸಿ ವೆನ್‌ಲಾಕ್‌ನಿಂದ ಸಂಬಂಧಿತ ಇಂಜೆಕ್ಷನ್ ಮತ್ತು ಔಷಧಿಯನ್ನು ವ್ಯವಸ್ಥೆ ಮಾಡಿದರು. ಸೋಮವಾರವೂ ಔಷಧದ ಕೊರತೆಯಾದಾಗ ಸಚಿವ ಖಾದರ್ ಅವರು ವ್ಯವಸ್ಥೆ ಮಾಡಿದ್ದಾರೆ.