Advertisement

ಮಂಗಳೂರು ಅಂ.ವಿಮಾನ ನಿಲ್ದಾಣ ಖಾಸಗೀಕರಣಕ್ಕೆ ಖಾದರ್‌ ಆಕ್ಷೇಪ

09:04 AM Dec 01, 2018 | Team Udayavani |

ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಖಾಸಗೀಕರಣ ಮಾಡಿದರೆ ಎದುರಾಗುವ ಸಾಧಕ-ಬಾಧಕಗಳ ಕುರಿತಂತೆ ಚರ್ಚೆಯನ್ನೇ ನಡೆಸದೆ ಕೇಂದ್ರ ಸರಕಾರ ನಿರ್ಧಾರ ಕೈಗೊಂಡಿರುವುದು ಸರಿಯಲ್ಲ ಎಂದು ಸಚಿವ ಯು.ಟಿ. ಖಾದರ್‌ ಆಕ್ಷೇಪಿಸಿದ್ದಾರೆ.

Advertisement

ಮಂಗಳೂರಿನಲ್ಲಿ ಶುಕ್ರವಾರ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ವಿಚಾರ ಕುರಿತು ಈಗಾಗಲೇ ಸಚಿವ ಆರ್‌.ವಿ. ದೇಶಪಾಂಡೆ ಅವರ ಜತೆಗೆ ಚರ್ಚಿಸಲಾಗಿದೆ. ಮುಖ್ಯಮಂತ್ರಿ ಜತೆಗೆ ಈ ಕುರಿತು ಮಾತುಕತೆ ನಡೆಸಿ, ರಾಜ್ಯದಿಂದ ಆಕ್ಷೇಪ ಸಲ್ಲಿಸಲಾಗುವುದು. ಲೋಕಸಭಾ ಅಧಿವೇಶನದಲ್ಲಿ ಸ್ಥಳೀಯ ಸಂಸದರು ಆಕ್ಷೇಪ ದಾಖಲಿಸುವಂತೆ ಅವರನ್ನು ಭೇಟಿ ಮಾಡಿ ಆಗ್ರಹಿಸಲಾಗುವುದು ಎಂದರು. 

ಯಾವ ಕಾರಣಕ್ಕಾಗಿ ಮಂಗಳೂರು ವಿಮಾನ ನಿಲ್ದಾಣವನ್ನು ಖಾಸಗೀಕರಣಗೊಳಿಸಲಾಗುತ್ತಿದೆ ಎಂಬುದನ್ನು ಕೇಂದ್ರ ಸರಕಾರ ಇನ್ನೂ ಸ್ಪಷ್ಟಪಡಿಸಿಲ್ಲ. ಇದರಿಂದ ವಿಮಾನ ನಿಲ್ದಾಣ ವ್ಯವಸ್ಥೆಯಲ್ಲಿ ಮಹತ್ವದ ಏರುಪೇರಾಗುವ ಸಾಧ್ಯತೆ ಎಂದರು. 

ನಿರಾಶ್ರಿತರ ಸೂರಿಗೆ ಶಿಲಾನ್ಯಾಸ
ಕೊಡಗು ಅತಿವೃಷ್ಟಿ ನಿರಾಶ್ರಿತರಿಗೆ ಮಾದರಿ ಸೂರು ಯೋಜನೆಗೆ ಸಿಎಂ ಡಿ.7ರಂದು ಶಿಲಾನ್ಯಾಸ ನೆರವೇರಿಸಲಿದ್ದಾರೆ. ಪ್ರಕೃತಿ ದುರಂತದಿಂದ ಸುಮಾರು 840 ಕುಟುಂಬಗಳು ಬೀದಿಪಾಲಾದ ಕುಟುಂಬಗಳಿಗೆ ಸೂರು ನಿರ್ಮಾಣ ತನಕ ಮಾಸಿಕ ತಲಾ 10 ಸಾವಿರ ರೂ. ಬಾಡಿಗೆ ಮೊತ್ತವನ್ನು ನೀಡಲು ಸಿಎಂ ಒಪ್ಪಿಗೆ ನೀಡಿದ್ದಾರೆ ಎಂದು ಖಾದರ್‌ ಹೇಳಿದರು.

ಕೊಡಗು ನಿರಾಶ್ರಿತರಿಗೆ ತಲಾ 9.45 ಲಕ್ಷ ರೂ. ವೆಚ್ಚದಲ್ಲಿ ಮನೆ ನಿರ್ಮಿಸಲಾಗುವುದು. ರಸ್ತೆ, ಚರಂಡಿ, ನೀರು, ವಿದ್ಯುತ್‌ ಸೌಲಭ್ಯಕ್ಕೆ ಕಂದಾಯ ಇಲಾಖೆ 32 ಕೋಟಿ ರೂ. ಅನುದಾನ ನೀಡಿದೆ. ವಿವಿಧ ಗ್ರಾಮಗಳ 4 ಕಡೆಗಳಲ್ಲಿ ಮಾದರಿ ಮನೆ ನಿರ್ಮಾಣ ಆರಂಭಗೊಂಡಿದೆ. ಒಟ್ಟು 6 ಮಾದರಿಯ ಮನೆಗಳನ್ನು ನಿರ್ಮಿಸಲಾಗಿದೆ. ರಾಜೀವ್‌ ಗಾಂಧಿ ವಸತಿ ನಿಗಮದಿಂದ ಸಿಂಗಾಪುರ ಮಾದರಿಯ ಸಿಮೆಂಟ್‌ ಮನೆಗಳನ್ನು ನಿರ್ಮಿಸಲಾಗಿದೆ. ಸಂತ್ರಸ್ತರು ತಮಗೆ ಬೇಕಾದ ಮಾದರಿಯನ್ನು ಆಯ್ಕೆ ಮಾಡಲು ಅವಕಾಶ ಇದೆ ಎಂದರು. 

Advertisement

ವಿಧಾನ ಪರಿಷತ್‌ ಸದಸ್ಯ ಹರೀಶ್‌ ಕುಮಾರ್‌, ಮಾಜಿ ಸಚಿವ ಅಭಯಚಂದ್ರ ಜೈನ್‌, ಯುವ ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಮಿಥುನ್‌ ರೈ, ಮುಖಂಡರಾದ ಈಶ್ವರ್‌ ಉಳ್ಳಾಲ್‌, ಸದಾಶಿವ ಉಳ್ಳಾಲ್‌ ಉಪಸ್ಥಿತರಿದ್ದರು.

ಅಕ್ರಮ ಕಟ್ಟಡ; ಎಂಜಿನಿಯರ್‌ಗಳಿಗೂ ಶಿಕ್ಷೆ
ಅಕ್ರಮ ಕಟ್ಟಡ ನಿರ್ಮಾಣ ಮಾಡುವ ಮಾಲಕರ ಜತೆಗೆ ಇನ್ನು ಮುಂದೆ ಅನುಮತಿ ನೀಡಿದ ಎಂಜಿನಿಯರ್‌ಗಳಿಗೂ ಶಿಕ್ಷೆಯಾಗಲಿದೆ. ನಗರ ಯೋಜನ ಕಾಯ್ದೆಗೆ ತಿದ್ದುಪಡಿ ತರಲು ಕರಡು ರೂಪಿಸಿದ್ದು, ಬೆಳಗಾವಿ ಅಧಿವೇಶನದಲ್ಲಿ ಮಂಡಿಸಿ ಅನುಮೋದನೆ ಪಡೆಯಲಾಗುವುದು. ಈ ತಿದ್ದುಪಡಿ ಪ್ರಕಾರ ನಿಯಮ ಉಲ್ಲಂ ಸಿ ಕಟ್ಟಡ ನಿರ್ಮಿಸಿದ ಇಂಜಿನಿಯರ್‌ ಬೇರೆ ಕಡೆ ವರ್ಗಾವಣೆ ಹೊಂದಿದ್ದರೂ ಶಿಕ್ಷೆ ಅನುಭವಿಸಬೇಕಾಗುತ್ತದೆ’ ಎಂದು ಸಚಿವ ಖಾದರ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next