ಹುಬ್ಬಳ್ಳಿ: ಶೋಷಣೆ ಮುಕ್ತ ಸಮಾನತೆಯ ಸಮಾಜ ನಿರ್ಮಾಣಕ್ಕಾಗಿ ಸಾಲು ಸಾಲಾಗಿ ಸಂಸ್ಥೆಗಳನ್ನು ಕಟ್ಟಿ ಬೆಳೆಸಿರುವ ದಿ| ಕೆ.ಎಚ್. ಪಾಟೀಲರಿಗೆ ನುಡಿನಮನ ಬದಲು ಅವರ ಕನಸು ನನಸಾಗಿಸುವ ಕಾರ್ಯ ಮಾಡಬೇಕಾಗಿದೆ ಎಂದು ಮುಳ್ಳಳ್ಳಿ ಮಠದ ಶ್ರೀ ಚೆನ್ನವೀರ ಶಿವಯೋಗಿ ಸ್ವಾಮೀಜಿ ಹೇಳಿದರು.
ಸಹಕಾರ ರಂಗದ ಭೀಷ್ಮ ದಿ| ಕೆ.ಎಚ್. ಪಾಟೀಲರ 25ನೇ ಪುಣ್ಯಸ್ಮರಣೆ ನಿಮಿತ್ತ ಗುರುವಾರ ಮಹಾನಗರ ಪಾಲಿಕೆ ಈಜುಕೊಳದ ಮುಂಭಾಗದಲ್ಲಿರುವ ಅವರ ಪ್ರತಿಮೆಗೆ ಗೌರವ ಸಲ್ಲಿಸಿ ಅವರು ಮಾತನಾಡಿದರು. ಕೆ.ಎಚ್.ಪಾಟೀಲರು ನೇರ ನಡೆ-ನುಡಿಯ ಮೂಲಕ ಧಿಶ್ರೀಮಂತ ನಾಯಕರಾಗಿದ್ದರು.
ರೈತರ ಬಗ್ಗೆ ಉದಾತ್ತ ಚಿಂತನೆ ಮಾಡಿದ್ದ ಅವರು, ರೈತರು ಬೆಳೆದ ಬೆಳೆಗಳಿಗೆ ತಾವೇ ಬೆಲೆ ನಿರ್ಧರಿಸುವಂತಾದಾಗ ಮಾತ್ರ ರೈತರ ಕಲ್ಯಾಣ ಸಾಧ್ಯವೆಂದು ಪ್ರತಿಪಾದಿಸುತ್ತಿದ್ದರು. ಅಧಿಕಾರ ಇಲ್ಲದಿದ್ದಾಗಲೂ ಸಂಸ್ಥೆಗಳನ್ನು ಕಟ್ಟಿ, ಬೆಳೆಸಿ, ಬಾಳಿ ಬದುಕಿದವರು ಎಂದರು.
ಕೆ.ಎಚ್. ಪಾಟೀಲರ ಪುತ್ರ, ಸಚಿವ ಎಚ್.ಕೆ.ಪಾಟೀಲ ಅಧಿಕಾರ ಇಲ್ಲದಿದ್ದಾಗ ಆರಂಭಿಸಿದ ಶುದ್ಧ ಕುಡಿಯುವ ನೀರಿನ ಆಂದೋಲನ ಇಂದು ರಾಜ್ಯಕ್ಕೆ ಅಲ್ಲ ದೇಶಾದ್ಯಂತ ಹರಡಿದೆ ಎಂದರು. ಮುಸ್ಲಿಂ ಧರ್ಮಗುರು ಮೌಲಾನಾ ಮಹ್ಮದ ಅಲಿ ಖಾಜಿ ಮಾತನಾಡಿ, ದಿ| ಕೆ.ಎಚ್.ಪಾಟೀಲ ಧೈರ್ಯವಂತ ನಾಯಕರಾಗಿದ್ದರು.
ಜನಹಿತ ಬಂದಾಗ ಅವರು ಯಾರಿಗೂ ಹೆದರಲಿಲ್ಲ. ಅಂತಹ ನಾಯಕರು ಇಂದಿನ ಸಮಾಜಕ್ಕೆ ಬೇಕು ಎಂದರು. ಕ್ರಿಶ್ಚಿಯನ್ ಧರ್ಮಗುರು ರೆವರೆಂಡ ಫಾದರ ಎಸ್.ಎಚ್. ಉಳ್ಳಾಗಡ್ಡಿ ಮಾತನಾಡಿ, ಕೆ.ಎಚ್ .ಪಾಟೀಲರು ಸಮಾಜ ಸೇವೆಗೆ ಮಾದರಿಯಾಗಿದ್ದವರು ಎಂದು ಬಣ್ಣಿಸಿದರು. ಕೆ.ಎಚ್. ಪಾಟೀಲ ಪ್ರತಿಷ್ಠಾನದ ಅಧ್ಯಕ್ಷ ಎ.ಎಂ. ಹಿಂಡಸಗೇರಿ ಅಧ್ಯಕ್ಷತೆ ವಹಿಸಿದ್ದರು.
ಬಾಲವಿಕಾಸ ಅಕಾಡಮಿ ಅಧ್ಯಕ್ಷ ವೇದವ್ಯಾಸ ಕೌಲಗಿ, ಹುಡಾ ಅಧ್ಯಕ್ಷ ಅನ್ವರ ಮುಧೋಳ, ವಾಕಸಾ ಸಂಸ್ಥೆ ಅಧ್ಯಕ್ಷ ಸದಾನಂದ ಡಂಗನವರ ಮಾತನಾಡಿದರು. ಪಾಲಿಕೆ ಆಯುಕ್ತ ಸಿದ್ಧಲಿಂಗಯ್ಯ ಹಿರೇಮಠ, ವಸಂತ ಲದವಾ, ಅರವಿಂದ ಕಟಗಿ, ಪ್ರಕಾಶ ಘಾಟಗೆ, ಆರ್.ಕೆ.ಪಾಟೀಲ ಇನ್ನಿತರರು ಇದ್ದರು. ಎಚ್.ಎಫ್.ಜಕ್ಕಪ್ಪನವರ ಸ್ವಾಗತಿಸಿದರು. ಪ್ರೊ| ಎಸ್.ಬಿ. ಸಣಗೌಡರ ನಿರೂಪಿಸಿದರು. ಎಂ.ಎಂ. ಗೌಡರ ವಂದಿಸಿದರು.